ಶ್ರೀಮಂಗಲ, ಜು. 21: ಮುಂಗಾರು ಆರಂಭವಾದರೆ ಹಲವು ತಿಂಗಳು ಬಿಡುವು ನೀಡದೆÀ ನಿರಂತರ ಸುರಿಯುವ ಅತಿವೃಷ್ಟಿಗೆ ತುತ್ತಾಗಿ ಬೆಳೆಗಾರರು ಬೆಳೆ ನಷ್ಟ ಅನುಭವಿಸುತ್ತಾರೆ. ಮುಂಗಾರು ಪೂರ್ವದಲ್ಲಿ ಅತಿವೃಷ್ಟಿಯಿಂದ ಕೊಳೆ ರೋಗಕ್ಕೆ ತುತ್ತಾಗುವ ಕಾಫಿ, ಅಡಿಕೆ, ಕಾಳುಮೆಣಸು ಫಸಲು ರಕ್ಷಣೆಗೆ ಹರಸಾಹಸ ಪಡುತ್ತಾರೆ.ಮುಂಗಾರು ಪೂರ್ವದಲ್ಲಿ ಮುನ್ನಚ್ಚೆರಿಕೆಯಿಂದ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ಕೊಳೆರೋಗದಿಂದ ರಕ್ಷಿಸಿಕೊಳ್ಳಲು ರಾಸಾಯನಿಕ ಔಷಧಿಗಳನ್ನು ಸಿಂಪಡಿಸುವದು ವಾಡಿಕೆಯಾಗಿದೆ. ಒಂದು ವೇಳೆ ಸಿಂಪಡಣೆ ಮಾಡದಿದ್ದರೆ ಬೆಳೆ ಕೈಗೆ ಸಿಗುವದಿಲ್ಲ. ಮಾತ್ರವಲ್ಲದೆ ಕಾಳುಮೆಣಸು ಬಳ್ಳಿಗಳು ಕೊಳೆ ರೋಗಕ್ಕೆ ತುತ್ತಾಗಿ ಸಂಪೂರ್ಣ ನಾಶವಾಗುತ್ತದೆ. ಮತ್ತೆ ಕಾಳುಮೆಣಸು ಫಸಲು ತೆಗೆಯಲು ಹೊಸದಾಗಿ ನಾಟಿ ಮಾಡಿ ಫಸಲು ಬರುವ ವೇಳೆಗೆ 4-5 ವರ್ಷ ಬೇಕಾಗುತ್ತದೆ. ಆದ್ದರಿಂದ ವಿಶೇಷವಾಗಿ ಕಾಳುಮೆಣಸು ಫಸಲು ಹಾಗೂ ಬಳ್ಳಿ ರಕ್ಷಣೆಗೆ ಬ್ರºಗಿರಿ ತಪ್ಪಲು ವ್ಯಾಪ್ತಿಯಲ್ಲಿ ಅತಿವೃಷ್ಟಿಗೆ ತುತ್ತಾಗುವ ಪ್ರದೇಶದ ಬೆಳೆಗಾರರು ಔಷದಿ ಸಿಂಪಡಣೆ ಮೊರೆ ಹೋಗುತ್ತಾರೆ.ಮುಂಗಾರು ಪೂರ್ವದಲ್ಲಿ 1 ಸಿಂಪಡಣೆ ಮಾಡಿದರೆ ನಂತರದಲ್ಲಿ 40-50 ದಿನದಲ್ಲಿ ಮತ್ತೊಂದು ಸಿಂಪಡಣೆ ಅಗತ್ಯವಾಗಿದೆ. ಮಳೆಯ ಬಿಡುವಿಗಾಗಿ ಕಾದು ಬೆಳೆ ರಕ್ಷಣೆಗೆ ಮುಂದಾಗುತ್ತಾರೆ. ಕಳೆದ 10 ದಿನದಿಂದ ಮಳೆಯ ಪ್ರಮಾಣ ತಗ್ಗಿದ್ದು, ಬಿಸಿಲಿನ ವಾತಾವರಣ ಮೂಡಿರುವ ಹಿನ್ನೆಲೆಯಲ್ಲಿ ರೈತರು ಬೆಳೆ

(ಮೊದಲ ಪುಟದಿಂದ) ರಕ್ಷÀಣೆಗಾಗಿ ವಿವಿಧ ಔಷಧಿ ಸಿಂಪಡಣೆಯಲ್ಲಿ ತೊಡಗಿಸಿಕೊಂಡಿರುವದು ಅಲ್ಲಲ್ಲಿ ಕಂಡು ಬರುತ್ತಿದೆ. ಮಳೆಯ ಪ್ರಮಾಣ ಕಡಿಮೆ ಇದ್ದರೆ ಕನಿಷ್ಟ ಒಂದರಿಂದ ಎರಡು ಸುತ್ತು ಸಾಕಾಗುತ್ತದೆ. ಆದರೆ ಅತಿವೃಷ್ಟಿಗೆ ಸಿಲುಕುವ ಪ್ರದೇಶಗಳಲ್ಲಿ ಕನಿಷ್ಟ 2-3 ಸಿಂಪಡಣೆ ಅನಿವಾರ್ಯವಾಗಿದೆ. ಸಿಂಪಡಣೆಗೆ ಕೌಶಲ್ಯಯುತ ಕಾರ್ಮಿಕರ ಅಗತ್ಯವಿದ್ದು, ಕಾರ್ಮಿಕರ ಅಭಾವ, ದುಬಾರಿ ಕೂಲಿ, ಹಾಗೂ ದುಬಾರಿ ಔಷಧಿಗಳ ದರದಿಂದ ಬೆಳೆ ರಕ್ಷಿಸಿಕೊಳ್ಳಲು ಈ ವ್ಯಾಪ್ತಿಯ ಬೆಳೆಗಾರರು ನಿರಂತರ ಹರಸಾಹಸ ಪಡುವಂತಾಗಿದೆ.

ಬೆಳೆಗಾರರಿಗೆ ಸಲಹೆ: ಅಡಿಕೆ ಮತ್ತು ಕಾಳುಮೆಣಸು ಬೆಳೆ ರಕ್ಷಣೆಗೆ ಎರಡನೇ ಸುತ್ತಿನ ಔಷಧಿ ಸಿಂಪಡಣೆಗೆ ಈಗ ಸಕಾಲವಾಗಿದೆ. ಮೊದಲ ಸಿಂಪಡಣೆಯೆ 30-40 ದಿನಗಳಲ್ಲಿ ಮಳೆಯ ಬಿಡುವು ನೋಡಿಕೊಂಡು ಎರಡನೇ ಸುತ್ತಿನ ಸಿಂಪಡಣೆ ಕೊಡುವದು ಸೂಕ್ತ. ಅಡಿಕೆಗೆ 200 ಲಿ. ನೀರಿಗೆ 2 ಕೆ.ಜಿ. ಕಾಪರ್ ಸಲ್ಫೇಟ್, 2.ಕೆ.ಜಿ. ಸುಣ್ಣ(ಬೋರ್ಡೊ ದ್ರಾವಣ) ಮತ್ತು ಉತ್ತಮ ಗುಣಮಟ್ಟದ ಅಂಟುವ ದ್ರಾವಣವನ್ನು ಸೇರಿಸಿಕೊಂಡು ಅಡಿಕೆ ಗೊಂಚಲು, ಅವುಗಳ ಎಲೆಗಳು ಹಾಗೂ ಸುಳಿಗಳಿಗೆ ಸಿಂಪಡಣೆ ಮಾಡಬೇಕು. ಇದರಿಂದ ಸುಳಿ ಕೊಳೆ ರೋಗ ಮತ್ತು ಗೊಂಚಲು ಉದುರುವದನ್ನು ನಿಯಂತ್ರಿಸಬಹುದು.

ಕಾಳುಮೆಣಸಿಗೆ ಅಡಿಕೆಗೆ ಸಿಂಪಡಿಸುವ ಪ್ರಮಾಣದಲ್ಲಿಯೇ ಬೋಡೋ ದ್ರಾವಣ ಸಿಂಪಡಿಸಬೇಕು. ಬೋಡೋ ದ್ರಾವಣವನ್ನು ಸಂಪೂರ್ಣ ಬಳ್ಳ್ಳಿ ನೆನೆಯುವಂತೆ ಸಿಂಪಡಿಸ ಬೇಕು.ಅಥವಾ ಪೊಟ್ಯಾಶಿಯಂ ಫಾಸ್ಪೋನೆಟ್ 3 ಎಂ.ಎಲ್ ಪ್ರತಿ ಲೀಟರ್‍ಗೆ ಬೆರೆಸಿ ಸಿಂಪಡಿಸಬೇಕು. ಈ ಸಂದರ್ಭ ಉತ್ತಮ ಗುಣಮಟ್ಟದ ಅಂಟು ದ್ರಾವಣ ಹಾಕಿಕೊಳ್ಳಲು ಮರೆಯಬಾರದು.

ಕಾಫಿü ಅತೀ ಹೆಚ್ಚು ತೇವಾಂಶದಿಂದ ಉದುರುವದು ನಿಯಂತ್ರಿಸಲು ಈ ಸಮಯದಲ್ಲಿ 1 ಎಕರೆಗೆ 1 ಚೀಲ ಯೂರಿಯ ರಸಗೊಬ್ಬರವನ್ನು ತೋಟಕ್ಕೆ ಹಾಗೂ ಕಾಫಿ ಗಿಡಗಳ ಬುಡಕ್ಕೆ ಎರೆಚಬೇಕು. ಕಾರ್ಬೊ ಡೇಝಿಂ 2 ಗ್ರಾಂ ಪ್ರತೀ ಲೀಟರ್ ನೀರಿಗೆ ಬೆರೆಸಿ ಕಾಫಿ ಗಿಡ ಹಾಗೂ ಗೊಂಚಲುಗಳು ನೆನೆಯುವಂತೆ ಸಿಂಪಡಿಸುವ ಮೂಲಕ ಕಾಫಿ ಉದುರುವದನ್ನು ನಿಯಂತ್ರಿಸಬಹುದು ಎಂದು ಗೋಣಿಕೊಪ್ಪಲು ಕೆವಿಕೆ ವಿಜ್ಞಾನಿ ವೀರೇಂದ್ರ ಕುಮಾರ್ ಸಲಹೆ ನೀಡಿದ್ದಾರೆ.

ಈ ವ್ಯಾಪ್ತಿಗೆ ಅತಿಹೆಚ್ಚು ಮಳೆ ಬೀಳುವದರಿಂದ ಅಡಿಕೆ. ಕಾಳುಮೆಣಸು ಮತ್ತು ಕಾಫಿ ಕೊಳೆರೋಗಕ್ಕೆ ತುತ್ತಾಗುತ್ತದೆ.ಆದ್ದರಿಂದ ಸಿಂಪಡಣೆ ಮಾಡದಿದ್ದರೆ ಬೆಳೆ ಉಳಿಯುವದಿಲ್ಲ. ಕನಿಷ್ಟ ಮೂರು ಸುತ್ತು ಅಡಿಕೆ ಬೆಳೆಗೆ ಸಿಂಪಡಣೆ ಮಾಡಿದರೆ ಶೇ. 50 ರಿಂದ 70 ರಷ್ಟು ಫಸಲು ದೊರೆಯುತ್ತದೆ. ಮಳೆಯ ಬಿಡುವು ನೋಡಿಕೊಂಡು ಸಿಂಪಡಣೆ ಸೂಕ್ತ. ಮುಂಗಾರು ಪೂರ್ವ ಮೊದಲ ಸುತ್ತು, ನಂತರದ 40 ದಿನಗಳಲ್ಲಿ ಎರಡನೇಯ ಸುತ್ತು ಹಾಗೂ ಮೂರನೇ ಸುತ್ತು ಆಗಸ್ಟ್ ಸೆಪ್ಟೆಂಬರ್‍ನಲ್ಲಿ ನೀಡಬೇಕಾಗುತ್ತದೆ. ಮಳೆ ಕಡಿಮೆ ಇದ್ದರೆ 2 ಸುತ್ತು ಸಿಂಪಡಣೆ ಸಾಕಾಗುತ್ತದೆ ಎಂದು ಬೆಳೆಗಾರ ದಾದಾ ದೇವಯ್ಯ ಪ್ರತಿಕ್ರಿಯಿಸಿದ್ದಾರೆ.