ಮಡಿಕೇರಿ, ಜು. 21: ಸಿದ್ದಾಪುರ ಸಮೀಪದ ಕರಡಿಗೋಡುವಿನ ರಾಮ್‍ಚಿಕ್ಕನಳ್ಳಿ ತೋಟದ ಉಸ್ತುವಾರಿಯನ್ನು ನೋಡಿಕೊಂಡಿದ್ದ ಪಿ. ಸೆಂಧಿಲ್ ಕುಮಾರ್ (38) ಎಂಬ ವ್ಯಕ್ತಿ ತಾ. 17 ರಿಂದ ಕಾಣೆಯಾಗಿರುವದಾಗಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಸ್ವಾಮಿನಾಥನ್ ಎಂಬವರು ನೀಡಿರುವ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ತಾ. 17 ರಂದು ರಾತ್ರಿ 10.30ರ ಸುಮಾರಿಗೆ ಸೆಂಧಿಲ್‍ಕುಮಾರ್ ತೋಟದ ಕಾವಲುಗಾರ ಗಿರೀಶ್ ಬಳಿ ತಾನು ಊರಿಗೆ ಹೋಗಿ ಬರುವದಾಗಿ ಹೇಳಿಕೊಂಡಿದ್ದಾಗಿ ತಿಳಿದು ಬಂದಿದೆ. ಆದರೆ ಈತ ಊರಿಗೆ ಹೋಗಿಲ್ಲವೆಂದು ನಾಪತ್ತೆಯಾಗಿರುವ ವ್ಯಕ್ತಿಯ ಪತ್ನಿ ತಿಳಿಸಿರುವದಾಗಿ ಪುಕಾರಿನಲ್ಲಿ ಗಮನ ಸೆಳೆಯಲಾಗಿದೆ. ಈ ವ್ಯಕ್ತಿಯ ಸುಳಿವು ಸಿಕ್ಕವರು ಸಿದ್ದಾಪುರ ಪೊಲೀಸ್ ಠಾಣೆ 08274-258333 ಅಥವಾ 9480804950ಗೆ ಸಂಪರ್ಕಿಸಲು ಕೋರಲಾಗಿದೆ.