ಶನಿವಾರಸಂತೆ, ಜು. 21: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಗುಂದ ನ್ಯಾಯಬೆಲೆ ಅಂಗಡಿಯಲ್ಲಿ ಬಿಪಿಎಲ್ ಕಾರ್ಡ್‍ದಾರರಿಗೆ ಉಚಿತವಾಗಿ ನೀಡುವ ಅಕ್ಕಿಗೂ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ, ಅಲ್ಲಿನ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕರವೇ ಪದಾಧಿಕಾರಿಗಳು ಸಹಭಾಗಿತ್ವದಲ್ಲಿ ಶನಿವಾರ ಅಂಗಡಿ ಮುಂಭಾಗ ಪ್ರತಿಭಟನೆ ನಡೆಸಿದರು.
ಗ್ರಾಮದ ನ್ಯಾಯಬೆಲೆ ಅಂಗಡಿ ಕೇಂದ್ರ ಸಂಖ್ಯೆ- 116ರಲ್ಲಿ ಕಾರ್ಡ್‍ದಾರರಿಗೆ ಉಚಿತವಾಗಿ ನೀಡುವ ಅಕ್ಕಿಗೆ ರೂ. 40-50 ವಸೂಲಿ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
ಪ್ರತಿಭಟನೆ ವಿಚಾರ ತಿಳಿದ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದ್ ರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರತಿಭಟನಾಕಾರರ ಮನವೊಲಿಸಿ, ತಮಗೆ ಮನವಿ ನೀಡಿದಲ್ಲಿ ತಾವು ನ್ಯಾಯಬೆಲೆ ಅಂಗಡಿ ಮೇಲೆ ಕ್ರಮ ಜರುಗಿಸುವದಾಗಿ ಭರವಸೆ ನೀಡಿದರು. ತಾಲೂಕು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೂ ಮನವಿ ಸಲ್ಲಿಸಿ ನ್ಯಾಯಬೆಲೆ, ಅಂಗಡಿಯ ಲೈಸೆನ್ಸ್ ರದ್ದುಗೊಳಿಸಿ ಸೂಕ್ತ ವ್ಯಕ್ತಿಗೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಗ್ರಾಮ ಮುಖಂಡರಾದ ದಾನಯ್ಯ, ನಂದ, ಬಸವನಕೊಪ್ಪ ಸುರೇಶ್, ಅಂಜಲಿಯಮ್ಮ, ರಾಜಮ್ಮ, ಶೋಭಾ, ಯತೀಶ್, ರಂಗಶೆಟ್ಟಿ ಹಾಗೂ ಕರವೇ ತಾಲೂಕು ಘಟಕದ ಅಧ್ಯಕ್ಷ ಪ್ರಾನ್ಸಿಸ್ ಡಿಸೋಜ ವಹಿಸಿದ್ದರು. ಬಿಪಿಎಲ್ ಕಾರ್ಡ್‍ದಾರರು, ಗ್ರಾಮಸ್ಥರು, ಕರವೇ ಪದಾಧಿಕಾರಿಗಳು ಪಾಲ್ಗೊಂಡಿದ್ದರು.