ಮಡಿಕೇರಿ, ಜು. 21: ನಗರಸಭೆಯಲ್ಲಿ ಅನುದಾನ ಲಭ್ಯವಿದ್ದರು ಜನರಿಗೆ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಮತ್ತು ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಲ್ಲಿ ನಗರಸಭಾ ಆಯುಕ್ತರು ವಿಫಲ ರಾಗಿದ್ದಾರೆ ಎಂದು ಆರೋಪಿಸಿರುವ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾóಕ್, ಆಯುಕ್ತರ ವರ್ಗಾವಣೆಗೆ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಕಳೆದ ವರ್ಷ ಸುರಿದ ಧಾರಾಕಾರ ಮಳೆಯಿಂದ ಹಾನಿಗೀಡಾದ ಬಡಾವಣೆಗಳ ಅಭಿವೃದ್ಧಿಗೆ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲವೆಂದು ಟೀಕಿಸಿದ್ದಾರೆ. ಯಾವದೇ ಕಡತಗಳು ಶೀಘ್ರ ವಿಲೇವಾರಿಯಾಗುತ್ತಿಲ್ಲ. ಫಾರಂ ನಂ. 3 ಯಂತಹ ಅರ್ಜಿಗಳ ವಿಲೇವಾರಿಗೆ 6 ತಿಂಗಳಿಗೂ ಹೆಚ್ಚು ಕಾಲ ಪಡೆಯಲಾಗುತ್ತಿದೆ. ಈ ಬಗ್ಗೆ ಜನ ಸಾಮಾನ್ಯರು ಆಯುಕ್ತರ ಗಮನಕ್ಕೆ ತಂದರೆ ಸರಿಪಡಿಸುವ ಉತ್ತರ ಬಿಟ್ಟರೆ ಇಲ್ಲಿಯವರೆಗೆ ಯಾವದೇ ಕ್ರಮ ಕೈಗೊಂಡಿಲ್ಲ. ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಆಯುಕ್ತರ ಮಾತನ್ನು ಸಿಬ್ಬಂದಿಗಳು ಕೇಳುತ್ತಲೇ ಇಲ್ಲವೆಂದು ಆರೋಪಿಸಿದ್ದಾರೆ.

ನಿಯಮಕ್ಕೆ ವಿರುದ್ಧವಾಗಿ ಹೆಚ್ಚುವರಿ ತೆರಿಗೆ ವಸೂಲಿ ಮಾಡುತ್ತಿರುವ ಬಗ್ಗೆ ಪತ್ರಿಕೆಗಳು ಗಮನ ಸೆಳೆದಿದ್ದರೂ ಆಯುಕ್ತರು ಮಾತ್ರ ತಮಗೆ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿದ್ದಾರೆ. ತೆರಿಗೆ ಪದ್ಧತಿ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡುವಲ್ಲಿ ನಗರಸಭೆ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.

ಮಡಿಕೇರಿ ನಗರದ 23 ವಾರ್ಡ್‍ಗಳ ಬಗ್ಗೆ ಸರಿಯಾದ ಮಾಹಿತಿಯಲ್ಲದೆ ಆಯುಕ್ತರನ್ನು ಮಳೆ ಹಾನಿ ತಂಡದ ನೋಡಲ್ ಅಧಿಕಾರಿಯನ್ನಾಗಿ ಜಿಲ್ಲಾಧಿಕಾರಿಗಳು ನೇಮಿಸಿದ್ದಾರೆ. ಆದರೆ ಮಳೆ ವಿಚಾರದಲ್ಲಿ “ರೆಡ್ ಅಲರ್ಟ್” ವ್ಯಾಪ್ತಿಗೆ ಒಳಪಡುವ ನಗರಸಭಾ ವ್ಯಾಪ್ತಿಯಲ್ಲಿ ಆಯುಕ್ತರಿಂದ ಕಾರ್ಯನಿರ್ವಹಣೆ ಅಸಾಧ್ಯ ಎನ್ನುವದು ಈಗಾಗಲೇ ಸಾಬೀತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಗರಸಭೆಯ ಆಡಳಿತಾಧಿಕಾರಿ ಯಾಗಿರುವ ಜಿಲ್ಲಾಧಿಕಾರಿಗಳು ಆಯುಕ್ತರ ವೈಫಲ್ಯಗಳನ್ನು ಪರಿಗಣಿಸಿ ವರ್ಗಾವಣೆಗೆ ಕ್ರಮ ಕೈಗೊಳ್ಳಬೇಕು ಮತ್ತು ನೂತನ ಆಯುಕ್ತರನ್ನಾಗಿ ಕೆÉಎಎಸ್ ಗ್ರೇಡ್ 1 ಅಧಿಕಾರಿಯನ್ನು ನೇಮಿಸಬೇಕೆಂದು ಒತ್ತಾಯಿಸಿದ್ದಾರೆ.

ನಗರಸಭೆ ಕಚೇರಿಗೆ ದಿಢೀರ್ ಭೇಟಿ ನೀಡಿ ಸಾರ್ವಜನಿಕರು ಅನುಭವಿ ಸುತ್ತಿರುವ ಕುಂದುಕೊರತೆಗಳನ್ನು ಆಲಿಸಬೇಕೆಂದು ಅಬ್ದುಲ್ ರಜಾóಕ್ ಮನವಿ ಮಾಡಿದ್ದಾರೆ.