ಮಡಿಕೇರಿ, ಜು. 19: ಕರ್ನಾಟಕ ವಿಪತ್ತು ನಿರ್ವಹಣಾ ಮಂಡಳಿ ಹಾಗೂ ಹವಾಮಾನ ಇಲಾಖೆಯ ನಿರ್ದೇಶನದಂತೆ ಕೊಡಗಿನಲ್ಲಿ ಇಂದು ರಾತ್ರಿಯಿಂದ ತಾ. 23ರ ತನಕ ಬಿರುಸಿನ ಮಳೆ ಸುರಿಯುವ ಸಂಭವವಿದ್ದು; ಜಿಲ್ಲೆಯಲ್ಲಿ ‘ರೆಡ್ ಅಲರ್ಟ್’ ಘೋಷಣೆಯೊಂದಿಗೆ ಕಟ್ಟೆಚ್ಚರ ವಹಿಸಲಾಗುವದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.ಈಗಾಗಲೇ ಕಳೆದ ವರ್ಷ ಪ್ರಾಕೃತಿಕ ವಿಕೋಪದಿಂದ ತೊಂದರೆ ಎದುರಾಗಿದ್ದ ಗ್ರಾಮೀಣ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿರುವ ಜಿಲ್ಲಾಧಿಕಾರಿಗಳು; ಅಲ್ಲಿನ ಜನತೆ ಜಾಗೃತೆಯಿಂದ ಇರುವಂತೆ ಸಲಹೆ ನೀಡಿದ್ದಾರೆ. ಅಲ್ಲದೆ ಆಯಾ ವಿಭಾಗದ ನೋಡಲ್ ಅಧಿಕಾರಿಗಳು ಪರಿಸ್ಥಿತಿ ಬಗ್ಗೆ ನಿಗಾವಹಿಸುವಂತೆ ನಿರ್ದೇಶಿಸಿದ್ದಾರೆ.ಈ ರಾತ್ರಿಯಿಂದ ಮುಂದಿನ 5 ದಿನ ಕೊಡಗು ಸೇರಿದಂತೆ ಕೇರಳ ಹಾಗೂ ಕರ್ನಾಟಕದ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಮೇರೆಗೆ ಕ್ರಮ ವಹಿಸಲಾಗಿದೆ.ಮಳೆ ವಿವರ : ಕೊಡಗು ಜಿಲ್ಲೆಯ ಗ್ರಾಮೀಣ ಭಾಗದ ಕೆಲವೆಡೆ ಕಳೆದ ರಾತ್ರಿಯಿಂದ ಜೋರಾಗಿ ಮಳೆ ಸುರಿದಿದ್ದು; ಇದು ಮೋಡ ಬಿತ್ತನೆಯ ಪರಿಣಾಮವೆಂದು ಆ ಭಾಗದ ಗ್ರಾಮಸ್ಥರು ‘ಶಕ್ತಿ’ಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೋಡ ಬಿತ್ತನೆಯಿಂದ ಕೃತಕ

ಮಳೆಗೆ ಅವಕಾಶ ನೀಡದಂತೆ ಜನಪ್ರತಿನಿಧಿಗಳು ಸರಕಾರದ ಗಮನ ಸೆಳೆಯಲು ಆಗ್ರಹಿಸಿದ್ದಾರೆ.(ಮೊದಲ ಪುಟದಿಂದ)ಸರಾಸರಿ ಮಳೆ : ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 0.63 ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 1.41 ಇಂಚು; ವೀರಾಜಪೇಟೆ ತಾಲೂಕಿನಲ್ಲಿ 0.23 ಇಂಚು, ಸೋಮವಾರಪೇಟೆ ತಾಲೂಕಿನಲ್ಲಿ 0.26 ಇಂಚು ದಾಖಲಾಗಿದೆ.ಭಾಗಮಂಡಲ ವ್ಯಾಪ್ತಿಯಲ್ಲಿ 1.85 ಇಂಚು, ನಾಪೋಕ್ಲು ವ್ಯಾಪ್ತಿಯಲ್ಲಿ 1.26 ಇಂಚು, ಸಂಪಾಜೆ ವ್ಯಾಪ್ತಿಯಲ್ಲಿ 1.29 ಇಂಚು, ಹುದಿಕೇರಿ 0.51, ಬಾಳೆಲೆ 0.90, ಸುಂಟಿಕೊಪ್ಪ 0.26, ಶಾಂತಳ್ಳಿ 0.09 ಇಂಚು ಮಳೆಯಾಗಿದೆ. ಇಂದು ಕೂಡ ಮಡಿಕೇರಿ ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ದಕ್ಷಿಣ ಕೊಡಗಿನಲ್ಲಿ ಮೋಡದ ವಾತಾವರಣದೊಂದಿಗೆ ಅಲ್ಪಮಳೆಯಾಗಿದ್ದು; ಉತ್ತರ ಕೊಡಗಿನ ಬಹುತೇಕ ಕಡೆ ಬಿಸಿಲು ವಾತಾವರಣವಿತ್ತು.

ಸೋಮವಾರಪೇಟೆ

ಸೋಮವಾರಪೇಟೆ: ಕಳೆದ ಕೆಲ ದಿನಗಳಿಂದ ಬಿರು ಬಿಸಿಲಿನ ವಾತಾವರಣವಿದ್ದ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನದ ವೇಳೆಗೆ ಸಾಧಾರಣ ಮಳೆ ಸುರಿಯಿತು. ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ದಟ್ಟ ಮೋಡ ಕವಿದು ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದರೂ ಸಹ, ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳಲಿಲ್ಲ. ಇನ್ನು ತಾಲೂಕಿನ ಪುಷ್ಪಗಿರಿ ಬೆಟ್ಟ ಶ್ರೇಣಿ ಪ್ರದೇಶದ ಹೆಗ್ಗಡಮನೆ, ಬೆಟ್ಟದಳ್ಳಿ, ಕೊತ್ನಳ್ಳಿ, ಶಾಂತಳ್ಳಿ, ಕುಂದಳ್ಳಿ ಭಾಗದಲ್ಲಿ ಆಶಾದಾಯಕ ಮಳೆ ಬಿದ್ದಿದ್ದರಿಂದ ಕೃಷಿಕರು ಹರ್ಷಚಿತ್ತರಾಗಿದ್ದಾರೆ.

ಕಳೆದೆರಡು ದಿನಗಳಿಂದ ಈ ಭಾಗದಲ್ಲಿ ಆಗಾಗ್ಗೆ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಚಾಲನೆಯಲ್ಲಿದೆ. ರೈತರು ಗದ್ದೆಗಳಲ್ಲಿ ಸಸಿಮಡಿ ತಯಾರಿ, ಉಳುಮೆ, ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಕೊಳವೆ ನೀರು ಹಾಯಿಸಿ ಉಳುಮೆ

ಶನಿವಾರಸಂತೆ : ವಾರದಿಂದ ಮಳೆಯಾಗದಿದ್ದು, ಗದ್ದೆ ಕೆಲಸ ಆರಂಭಿಸಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ರೈತರು ಸಂಪೂರ್ಣ ನಿರಾಶರಾಗಿದ್ದಾರೆ. ಮಳೆಯನ್ನೇ ಅವಲಂಭಿಸಿದ ರೈತರು ಗದ್ದೆ ಕೆಲಸಕ್ಕೆ ತಿಲಾಂಜಲಿ ನೀಡಿ ಕೈಚೆಲ್ಲಿ ಕುಳಿತರೇ ಕೆಲವು ರೈತರು ಕೊಳವೆ ಬಾವಿಯ ನೀರನ್ನೇ ಗದ್ದೆಗೆ ಹಾಯಿಸಿ ಉಳುವೆ, ಸಸಿಮಡಿ ಕೀಳುವದು, ನಾಟಿ ಮಾಡುವ ಕೆಲಸವನ್ನು ಕಾಟಾಚಾರಕ್ಕೆ ಮಾಡಿ ಮುಗಿಸಿದ್ದಾರೆ.

ಸಮೀಪದ ಅಪ್ಪಶೆಟ್ಟಳ್ಳಿ ಗ್ರಾಮದ ಕೃಷಿಕ ಎ.ಡಿ. ಮೋಹನ್‍ಕುಮಾರ್ ಅವರು ಕೊಳವೆ ಬಾವಿಯ ನೀರನ್ನು ಹಾಯಿಸಿ ತಮ್ಮ ಒಂದೂವರೆ ಎಕರೆ ಗದ್ದೆಯಲ್ಲಿ ಬದುವಿನ ತೆವರು ಕಡಿದು, ಟಿಲ್ಲರ್‍ನಿಂದ ಉಳುಮೆ ಮಾಡಿಸಿ; ಸಸಿಮಡಿ ಕೀಳಿಸಿ, ನಾಟಿ ಕೆಲಸವನ್ನು ಮಾಡಿ ಮುಗಿಸಿದ್ದಾರೆ.

ಹೇಗೂ ಕಾಟಾಚಾರಕ್ಕೆ ಗದ್ದೆ ನಾಟಿ ಕೆಲಸ ಮಾಡಿ ಮುಗಿಸಿದ್ದೇವೆ ಇಷ್ಟಕ್ಕೆ 10 ಸಾವಿರ ರೂ. ಖರ್ಚು ಮಾಡಿದ್ದೇವೆ. ಇನ್ನು ಕಳೆ ತೆಗೆಸಲು ಗೊಬ್ಬರ ಹಾಕಲು 5 ಸಾವಿರ ರೂ. ಆಗುತ್ತೆ ನಂತರ ಕೊಯ್ಲಿನ ಸಮಯದಲ್ಲೂ 10 ಸಾವಿರ ರೂ. ಖರ್ಚು ಮಾಡಬೇಕು. ಭತ್ತದ ಬೇಸಾಯದಿಂದ ಆದಾಯವಿರಲೀ ಅಸಲೇ ಸಿಗುವದಿಲ್ಲ. ಅದಕ್ಕೆ ಮುಂದಿನ ವರ್ಷ ಗದ್ದೆಯಲ್ಲಿ ಅಡಿಕೆ ಬೆಳೆಯಲು ನಿರ್ಧರಿಸಿದ್ದೇನೆ ಎಂದು ಅಳಲು ತೋಡಿಕೊಂಡರು.

ಈ ವಿಭಾಗದ ಬಹುತೇಕ ರೈತರು ಮಳೆಯ ಆಟದಿಂದ ಬೇಸತ್ತು ಭತ್ತದ ಬೇಸಾಯದ ಬದಲು ಪರ್ಯಾಯ ಬೆಳೆ ಬೆಳೆಯಲು ನಿರ್ಧರಿಸಿದ್ದಾರೆ. ಇದು ಅಕ್ಕಿಯ ದರ ಏರಿಕೆಗೆ ಕಾರಣವಾಗಿ ಮುಂದೊಂದು ದಿನ ಗಗನಕ್ಕೇರಬಹುದು ಎಂಬ ಅನಿಸಿಕೆ ರೈತರದು.

ಮೋಡ ಕವಿದ ವಾತಾವರಣ

ನಾಪೆÇೀಕ್ಲು: ನಾಲ್ಕುನಾಡು ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನದಿಂದ ಮೋಡ ಕವಿದ ವಾತಾವರಣದೊಂದಿಗೆ ತುಂತುರು ಮಳೆ ಆರಂಭಗೊಂಡಿದೆ. ಈ ಮಳೆಯು ಬೆಟ್ಟ ಪ್ರದೇಶದ ಗ್ರಾಮಗಳಲ್ಲಿ ಸ್ವಲ್ಪ ಹೆಚ್ಚು ಸುರಿದ ಬಗ್ಗೆ ವರದಿಯಾಗಿದೆ. ಸಂಜೆಯವರೆಗೂ ಮಳೆಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿಲ್ಲ.