ಬೆಂಗಳೂರು, ಜು. 19: ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ವಿಶ್ವಾಸಮತ ಯಾಚನಾ ಪರ್ವ ಶುಕ್ರವಾರವೂ ಕೊನೆಗಾಣದಿದ್ದು ಅಂತಿಮ ನಿರ್ಣಯಕ್ಕೆಂದು ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಸೋಮವಾರಕ್ಕೆ ಮುಂದೂಡಿದರು. ರಾತ್ರಿ 8.30 ರ ವರೆಗೂ ಸದನದಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರು, ನಾಯಕರು ಭರಾಟೆಯ ಮಾತುಗಳನ್ನಾಡಿದರು. ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆಗೈದರೂ ವಿಶ್ವಾಸ ಮತ ಯಾಚನೆಯಲ್ಲಿ ಮೈತ್ರಿ ಕೂಟಸೋಲನುಭವಿಸಬಹುದಾದ ಹಿನ್ನೆಲೆಯಲ್ಲಿ ಕೆಲವೊಂದು ಬಿಜೆಪಿ ಶಾಸಕರ ಹೊರತು ಉಳಿದವರು ಮೌನ ವಹಿಸಿದರು. ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ರಾತ್ರಿ 12 ಗಂಟೆವರೆಗೂ ಚರ್ಚೆ ಮುಂದುವರಿಸಿ ವಿಶ್ವಾಸಮತ ಯಾಚನೆ ನಡೆಯಲೇಬೇಕು ಎಂದು ಪಟ್ಟು ಹಿಡಿದರೂ ಮೈತ್ರಿ ಕೂಟದ ಸಮನ್ವಯ ನಾಯಕ ಸಿದ್ದರಾಮಯ್ಯ ವಿಶ್ವಾಸಮತಕ್ಕೂ ಮುನ್ನ ಇನ್ನೂ ಅನೇಕ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಬೇಕಾದ ಹಿನ್ನೆಲೆಯಲ್ಲಿ ವಿಶ್ವಾಸ ಮತ ಯಾಚನೆಯ ಅಂತಿಮ ಪ್ರಕ್ರಿಯೆಯನ್ನು ಸೋಮವಾರಕ್ಕೆ ಪೂರ್ಣಗೊಳಿಸಲು ವಿನಂತಿಸಿದರು. ಸಭಾಧ್ಯಕ್ಷ ರಮೇಶ್‍ಕುಮಾರ್ ಸೋಮವಾರ ವಿಶ್ವಾಸಮತ ಯಾಚನೆಯ ಅಂತಿಮ ಪ್ರಕ್ರಿಯೆಗೆ ಅಂಗೀಕಾರ ನೀಡಿ ಸದನವನ್ನು ಮುಂದೂಡಿದರು.

ಶುಕ್ರವಾರ ಮಧ್ಯಾಹ್ನ 1-30 ಕ್ಕೆ ವಿಶ್ವಾಸಮತ ಯಾಚಿಸುವಂತೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಗುರುವಾರ ಆದೇಶ ಹೊರಡಿಸಿದ್ದರು. ಆ ಗಡುವು ಮುಗಿದÀರೂ ವಿಶ್ವಾಸ ಮತಯಾಚಿಸದ ಹಿನ್ನೆಲೆಯಲ್ಲಿ ಮತ್ತೆ ಕುಮಾರಸ್ವಾಮಿ ಅವರಿಗೆ ಮತ್ತೊಂದು ಪತ್ರ ಕಳುಹಿಸಿದ ರಾಜ್ಯಪಾಲರು ಸಂಜೆ 6 ಗಂಟೆಯೊಳಗೆ ವಿಶ್ವಾಸಮತ ಯಾಚಿಸುವಂತೆ ಮತ್ತೆ ಸೂಚನೆ ನೀಡಿದರು.

ಸಂಜೆ 6 ಗಂಟೆಯೊಳಗೆ ವಿಶ್ವಾಸಮತ ಯಾಚಿಸುವಂತೆ ರಾಜ್ಯಪಾಲ ವಜೂಬಾಯಿ ವಾಲಾ ಅವರಿಂದ ಬಂದ 2ನೇ ‘ಲವ್ ಲೆಟರ್’ ತಮಗೆ ನೋವುಂಟು ಮಾಡಿದೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಹೇಳಿದರು.

(ಮೊದಲ ಪುಟದಿಂದ) ವಿಶ್ವಾಸಮತ ನಿರ್ಣಯ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಪಕ್ಷೇತರ ಶಾಸಕ ಹೆಚ್ ನಾಗೇಶ್ ಅವರನ್ನು ವಿಮಾನಕ್ಕೆ ಹತ್ತಿಸುತ್ತಿದ್ದ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಂತೋಷ್ ಅವರ ಫೋಟೋವನ್ನು ಸದನದಲ್ಲಿ ಪ್ರದರ್ಶಿಸಿ, 10 ದಿನಗಳಿಂದಲೂ ನಡೆಯುತ್ತಿರುವ ಕುದುರೆ ವ್ಯಾಪಾರ ಬಗ್ಗೆ ತಿಳಿಯಲು ಮಾತ್ರ ರಾಜ್ಯಪಾಲರ ಪ್ರತಿನಿಧಿ ಬರುತ್ತಿದ್ದಾರೆ ಎಂದರು.

ವಿಶ್ವಾಸಮತ ನಿರ್ಧಾರವನ್ನು ಸ್ಪೀಕರ್ ಅವರಿಗೆ ಬಿಡುತ್ತೇನೆ. ಅದು ದೆಹಲಿಯಿಂದ ನಿರ್ಧಾರವಾಗಬೇಕಿಲ್ಲ. ರಾಜ್ಯಪಾಲರಿಂದ ಬಂದಿರುವ ಆದೇಶದಿಂದ ತಮ್ಮನ್ನು ರಕ್ಷಿಸುವಂತೆ ಸ್ಪೀಕರ್ ರಮೇಶ್ ಕುಮಾರ್ ಬಳಿ ಮುಖ್ಯಮಂತ್ರಿ ಮನವಿ ಮಾಡಿದರು.

ಈ ಮಧ್ಯೆ ಇಂದು ಸಂಜೆಯೊಳಗೆ ವಿಶ್ವಾಸಮತ ಯಾಚಿಸುವಂತೆ ರಾಜ್ಯಪಾಲರು ಮತ್ತೆ ಗಡುವು ವಿಧಿಸಿರುವದನ್ನು ಪ್ರಶ್ನಿಸಿ ಕುಮಾರಸ್ವಾಮಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ವಿಶ್ವಾಸಮತ ನಿರ್ಣಯವನ್ನು ಈಗಾಗಲೇ ಮಂಡಿಸಿರುವಾಗ ರಾಜ್ಯಪಾಲರಿಂದ ಮತ್ತೊಂದು ನಿರ್ದೇಶನದ ಅಗತ್ಯವಿರಲಿಲ್ಲ ಎಂದು ಕುಮಾರಸ್ವಾಮಿ ಅರ್ಜಿಯಲ್ಲಿ ತಿಳಿಸಿದ್ದಾರೆ.

ವಿಶ್ವಾಸಮತ ನಿರ್ಣಯ ಕುರಿತು ಸದನದಲ್ಲಿ ಚರ್ಚೆ ನಡೆಯುತ್ತಿರುವಾಗ ರಾಜ್ಯಪಾಲರು ಆದೇಶ ಮಾಡಬಾರದೆಂದು ಉಲ್ಲೇಖಿಸಿರುವ ಕುಮಾರಸ್ವಾಮಿ, 15 ಬಂಡಾಯ ಶಾಸಕರು ಕಲಾಪದಲ್ಲಿ ಭಾಗವಹಿಸುವ ಅಥವಾ ಗೈರಾಗುವ ಆಯ್ಕೆಯನ್ನು ಅವರ ವಿವೇಚನೆಗೆ ಬಿಟ್ಟಿರುವ ಬಗ್ಗೆಯೂ ಸ್ಪಷ್ಟನೆ ನೀಡುವಂತೆ ಮುಖ್ಯಮಂತ್ರಿ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.