ಮಡಿಕೇರಿ, ಜು. 19: ವೀರಾಜಪೇಟೆ ಪಟ್ಟಣದಲ್ಲಿರುವ ವೀರಾಜಪೇಟೆ ಕೊಡವ ಸಮಾಜದ ಮುಂದಿನ ಆಡಳಿತ ಮಂಡಳಿಗೆ ಈ ಬಾರಿ ಚುನಾವಣೆ ಎದುರಾಗಿದ್ದು, ಪ್ರತಿಷ್ಠಿತ ಸಮಾಜದ ವಿವಿಧ ಸ್ಥಾನಗಳಿಗೆ ತಾ. 21ರಂದು (ನಾಳೆ) ಚುನಾವಣೆ ನಿಗದಿಯಾಗಿದೆ.ಸಮಾಜದಲ್ಲಿ ಸುಮಾರು 2260ರಷ್ಟು ಸದಸ್ಯರಿದ್ದು, ಒಟ್ಟು 2104 ಮಂದಿಗೆ ಮತದಾನದ ಹಕ್ಕಿದೆ. ಒಟ್ಟು 15 ಸ್ಥಾನಗಳಿಗೆ ಪದಾಧಿಕಾರಿಗಳ ಆಯ್ಕೆ ನಡೆಯಬೇಕಿದೆ. 15 ಸ್ಥಾನದ ಪೈಕಿ ಎರಡು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ಪ್ರಸಕ್ತ ಚುನಾವಣೆಯಲ್ಲಿ ಎರಡು ಗುಂಪುಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಕಂಡುಬಂದಿದೆ.ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ವಾಂಚಿರ ವಿಠಲ್ ನಾಣಯ್ಯ ಹಾಗೂ ಚೆಂಬಾಂಡ ಕರುಣ್ ಕಾಳಯ್ಯ ಎದುರಾಳಿಗಳಾಗಿದ್ದಾರೆ.ಉಪಾಧ್ಯಕ್ಷ ಸ್ಥಾನಕ್ಕೆ ಕುಯಿಮಂಡ ಕಿರಣ್ ಹಾಗೂ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಕುಲ್ಲಚಂಡ ಜಯಾ ಪೂಣಚ್ಚ ಹಾಗೂ ಚೆರುಮಂದಂಡ ನಾಣಯ್ಯ ಹಾಗೂ ಮರಣನಿಧಿ ಕಾರ್ಯದರ್ಶಿ ಸ್ಥಾನಕ್ಕೆ ಅಲ್ಲಪಂಡ ಎಂ.ಚಿಣ್ಣಪ್ಪ ಹಾಗೂ ಪಟ್ಟಡ ಸುರೇಶ್ ಸುಬ್ಬಯ್ಯ ಅವರುಗಳು ಸ್ಪರ್ಧೆಯಲ್ಲಿದ್ದಾರೆ.ನಿರ್ದೇಶಕ ಸ್ಥಾನಕ್ಕೆ ಸ್ಥಳೀಯ ಪಟ್ಟಣ ಕ್ಷೇತ್ರದಿಂದ ಕೊಂಗಾಂಡ ಎ. ನಾಣಯ್ಯ (ಟಾಟಾ), ಕೂತಂಡ ಸುರೇಶ್ ಅಪ್ಪಯ್ಯ, ಐಚಂಡ ವಾಸು, ಚೇಂದ್ರಿಮಾಡ ಗಣೇಶ್ ನಂಜಪ್ಪ, ನಂಬುಡುಮಾಡ ಗಿಣಿ ಗಣಪತಿ, ದೇರಪಂಡ ಧ್ರುವ ಕುಮಾರ್ ಅವರುಗಳು ಕಣದಲ್ಲಿದ್ದಾರೆ. ಗ್ರಾಮಾಂತರ ಕ್ಷೇತ್ರದಿಂದ ಕೋಟೆರ ಯು. ತಮ್ಮಯ್ಯ (ಗಣೇಶ್), ಕೊಂಗಾಂಡ ಎಂ. ದೇವಯ್ಯ (ಧರ್ಮಜ), ಮೇವಡ ಚಿಣ್ಣಪ್ಪ ಹಾಗೂ ಚೆಂಬಾಂಡ ಎ. ಮುದ್ದಪ್ಪ ಸ್ಪರ್ಧೆಯಲ್ಲಿದ್ದಾರೆ.
ಮಹಿಳಾ ಮೀಸಲು ಕ್ಷೇತ್ರ (ಪಟ್ಟಣ)ದಿಂದ ಬೊವೇರಿಯಂಡ ಆಶಾ ಸುಬ್ಬಯ್ಯ, ಮುಕ್ಕಾಟಿರ ದಮಯಂತಿ, ಕಂಬೀರಂಡ ಕಸ್ತೂರಿ ಮಾಯಮ್ಮ ಹಾಗೂ ಬಿದ್ದಂಡ ರಾಣಿ ಉತ್ತಯ್ಯ ಸ್ಪರ್ಧಿಸಿದ್ದಾರೆ. ಮಹಿಳಾ ಮೀಸಲು ಕ್ಷೇತ್ರ (ಗ್ರಾಮಾಂತರ)ದಿಂದ ಪಟ್ರಪಂಡ ಗೀತಾ ಬೆಳ್ಯಪ್ಪ ಹಾಗೂ ಆಟೋಟ ಕಾರ್ಯದರ್ಶಿ ಸ್ಥಾನಕ್ಕೆ ಕನ್ನಂಬಿರ ಚಿಣ್ಣಪ್ಪ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾ.21ರಂದು (ನಾಳೆ) ಬೆಳಿಗ್ಗೆ 8ರಿಂದ ಸಂಜೆ 4ರ ತನಕ ಮತದಾನ ನಡೆಯಲಿದ್ದು, ಅಂದೇ ಎಣಿಕೆ ನಡೆಯಲಿದೆ.