ಸಿದ್ದಾಪರು, ಜು. 19: ಕಾಡಾನೆಗಳ ಉಪಟಳದಿಂದ ಭಯಬೀತರಾದ ಗ್ರಾಮಸ್ಥರು ಹಾಗೂ ಕಾರ್ಮಿಕ ವರ್ಗ ಆತಂಕ ಎದುರಿಸುವಂತಾಗಿದೆ. ಗುಹ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಶುಕ್ರವಾರ ಹಾಡುಹಗಲೇ 15 ಕ್ಕೂ ಹೆಚ್ಚು ಮರಿಯಾನೆಗಳು ಸೇರಿದಂತೆ ಕಾಡಾನೆಗಳ ಹಿಂಡು ಕಾಫಿ ತೋಟದಿಂದ ಸಾರ್ವಜನಿಕ ರಸ್ತೆಯ ಮೂಲಕ ಸಂಚರಿಸಿ ಅತಂಕ ಸೃಷ್ಟಿಸಿದೆ. ಕೆಲವು ದಿನಗಳಿಂದ ಸಿದ್ದಾಪುರ ವ್ಯಾಪ್ತಿಯ ಗುಹ್ಯ ಕರಡಿಗೋಡು ಭಾಗದಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು, ರಾಜಾರೋಷವಾಗಿ ಸುತ್ತಾಡುತಿದ್ದು ಗ್ರಾಮಸ್ಥರು ಭಯದ ನೆರಳಿನಲ್ಲಿ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಕೆಲವು ದಿನಗಳ ಹಿಂದೆ ಕಾಡಾನೆಗಳ ಹಿಂಡಿನ ದಾಳಿಯಿಂದ ಕೂದಲೆಯ ಅಂತರದಿಂದ ಪಾರಾದ ಘಟನೆಯು ನಡೆದಿತ್ತು. ಕಾಡಾನೆಗಳು ತೋಟಕ್ಕೆ ಲಗ್ಗೆಯಿಡದಂತೆ ಅಳವಡಿಸಿದ್ದ ಸೋಲಾರ್ ಬೇಲಿಗಳನ್ನು ಧ್ವಂಸಗೊಳಿಸಿದೆಯೆಂದು ತೋಟದ ಮಾಲೀಕ ನಡಿಕೇರಿಯಂಡ ಪೊನ್ನಪ್ಪ ತಿಳಿಸಿದ್ದಾರೆ. ಕಾಡಾನೆಗಳ ನಿರಂತರ ಹಾವಳಿಯಿಂದಾಗಿ ನೆಮ್ಮದಿ ಇಲ್ಲ ದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ತೋಟದಿಂದ ಕಾಡಾನೆಗಳನ್ನು ಓಡಿಸುವದರಿಂದ ಯಾವದೇ ಪ್ರಯೋಜನವಾಗಿರುವದಿಲ್ಲ ಎಂದು ತಿಳಿಸಿದ ಅವರು ಇಲಾಖೆಯ ವಿರುದ್ದ ಅಸಮಾದಾನ ವ್ಯಕ್ತಪಡಿಸಿದ್ದಾರೆ. ಕೊಡಲೆ ಶಾಶ್ವತ ಯೋಜನೆಯನ್ನು ರೂಪಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
(ಮೊದಲ ಪುಟದಿಂದ)
ಅಂದಗೋವೆ
ಕುಶಾಲನಗರ: ಕುಶಾಲನಗರ ಬಳಿಯ ಆನೆಕಾಡು ಸಮೀಪದ ಅಂದಗೋವೆ ಪೈಸಾರಿಯ ನಿವೃತ್ತ ಸುಬೇದಾರ್ ಡಿ.ಕೆ.ದೇವಯ್ಯ ಎಂಬವರ ಕಾಫಿ ತೋಟದಲ್ಲಿ ಕಾಡಾನೆಯೊಂದು ಅಪಾರ ಪ್ರಮಾಣದಲ್ಲಿ ಬೆಳೆಗಳನ್ನು ನಾಶಪಡಿಸಿರುವ ಘಟನೆ ವರದಿಯಾಗಿದೆ. ಅರಣ್ಯ ಪ್ರದೇಶದಿಂದ ಲಗ್ಗೆಯಿಟ್ಟ ಕಾಡಾನೆ ಕಾಫಿ ತೋಟದ ಬೇಲಿಯನ್ನು ಮುರಿದು ಬೆಳೆದು ನಿಂತಿದ್ದ 25 ಕ್ಕೂ ಅಧಿಕ ಕಾಫಿ ಗಿಡಗಳು, ಸಿಲ್ವರ್ ಮರವನ್ನು ನೆಲಕ್ಕುರುಳಿಸಿದೆ. ಮರಕ್ಕೆ ಹಬ್ಬಿಸಿದ್ದ ಕರಿಮೆಣಸು ಬಳ್ಳಿ ನಾಶಗೊಳಿಸಿರುವದು ಗೋಚರಿಸಿದೆ. ಸುವರ್ಣಗೆಡ್ಡೆ, ಶುಂಠಿ ಫಸಲನ್ನು ಹಾನಿಗೊಳಿಸುವದರೊಂದಿಗೆ 100 ಕ್ಕೂ ಅಧಿಕ ಸುವರ್ಣಗೆಡ್ಡೆ ಬೊಡ್ಡೆಯನ್ನು ತುಳಿದು ಹಾಕಿದೆ. ಎಂದು ತೋಟದ ಮಾಲೀಕ ಡಿ.ಕೆ.ದೇವಯ್ಯ ಅಳಲನ್ನು ತೋಡಿಕೊಂಡಿದ್ದಾರೆ.