ಮಡಿಕೇರಿ, ಜು. 18: ಸಿಐಟಿಯು ಸಂಯೋಜಿತ ಕೊಡಗು ಜಿಲ್ಲಾ ಜನರಲ್ ವರ್ಕರ್ಸ್ ಯೂನಿಯನ್ ಸಂಘಟನೆಯು ಕಾರ್ಮಿಕ ಕಾಯ್ದೆಯ ಅನ್ವಯ, ಕಾನೂನಿನ ಚೌಕಟ್ಟಿನಡಿ ಕಾರ್ಮಿಕ ಪರವಾದ ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ನಡೆಸುತ್ತಿದೆ ಎಂದು ಸ್ಪಷ್ಟಪಡಿಸಿರುವ ಸಂಘಟನೆಯ ಅಧ್ಯಕ್ಷ ಡಾ. ದುರ್ಗಾಪ್ರಸಾದ್ ಹಾಗೂ ಪ್ರಧಾನ ಕಾರ್ಯದರ್ಶಿ ಎ. ಮಹಾದೇವ್, ರೈತರನ್ನು ಬ್ಲಾಕ್ ಮೇಲ್ ತಂತ್ರಕ್ಕೆ ಸಿಲುಕಿಸಿ ತೊಂದರೆ ನೀಡುತ್ತಿರುವ ಸಂಘಟನೆಗಳ ವಿರುದ್ಧ ಪೊಲೀಸರಿಗೆ ದೂರು ನೀಡುವಂತೆ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಸಂಘಟನೆಗಳು ಬ್ಲಾಕ್ ಮೇಲ್ ತಂತ್ರದ ಮೂಲಕ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಇದರಿಂದ ಕೊಡಗು ಜಿಲ್ಲಾ ಜನರಲ್ ವರ್ಕರ್ಸ್ ಯೂನಿಯನ್ನ ಬಗ್ಗೆಯೂ ತಪ್ಪು ಅಭಿಪ್ರಾಯ ಮೂಡಿರುವದು ಕಂಡು ಬಂದಿದೆ ಎಂದು ಸ್ಪಷ್ಟಪಡಿಸಿದರು. ಕೆಲವು ತೋಟಗಳಲ್ಲಿ ಆದಿವಾಸಿ ಕಾರ್ಮಿಕರಿಗೆ ಸಂಬಳವೇ ನೀಡದೆ, ಕೇವಲ ಮದ್ಯ ಮತ್ತು ಊಟವನ್ನು ನೀಡಿ ದೌರ್ಜನ್ಯ ಎಸಗಲಾಗುತ್ತಿದೆಯೆಂದು ಆರೋಪಿಸಿದ ಅವರು, ಈ ರೀತಿ ತಪ್ಪೆಸಗುವವರ ವಿರುದ್ಧ ನೋಟಿಸ್ ನೀಡಲಾಗಿದೆಯೇ ಹೊರತು ರೈತ ವಿರೋಧಿ ಕ್ರಮ ಅನುಸರಿಸಿಲ್ಲವೆಂದು ಸ್ಪಷ್ಟಪಡಿಸಿದರು.