ಮಡಿಕೇರಿ, ಜು. 18: ಕೊಡಗು ಜಿಲ್ಲೆಯಲ್ಲಿ ಮುಂದಿನ 24 ಗಂಟೆಗಳಲ್ಲಿ ಮುಂಗಾರು ಮಳೆ ಆಶಾದಾಯಕವಾಗಿ ಸುರಿಯಲಿದೆ ಎಂದು ಅಂದಾಜಿಸಿರುವ ಕರ್ನಾಟಕ ಹವಾಮಾನ ಇಲಾಖೆಯು; ಅದು ತಪ್ಪಿದರೆ ಈ ಸಾಲಿನ ಮುಂಗಾರು ಮಳೆ ಕೊಡಗಿನಲ್ಲಿ ಕ್ಷೀಣಗೊಂಡು ಆತಂಕ ಎದುರಾಗಲಿದೆ ಎಂದು ಅಭಿಪ್ರಾಯಪಟ್ಟಿದೆ. ಕಳೆದ 24 ಗಂಟೆಗಳಲ್ಲಿ ನಿರೀಕ್ಷೆಯಂತೆ ಕೊಡಗಿನಲ್ಲಿ ಮಳೆ ಆಗಿಲ್ಲವೆಂದು ಇಲಾಖೆಯ ಮುಖ್ಯಸ್ಥ ಶ್ರೀನಿವಾಸ್ ರೆಡ್ಡಿ ಅವರಿಗೆ ‘ಶಕ್ತಿ’ ಗಮನ ಸೆಳೆಯಿತು.ಈ ಸಂದರ್ಭ ಪ್ರತಿಕ್ರಿಯಿಸಿದ ಅವರು; ತಾವು ರಾಷ್ಟ್ರೀಯ ಹವಾಮಾನ ಇಲಾಖೆಯೂ ಸೇರಿದಂತೆ ಕೇರಳದ ಮುಂಗಾರು ಮಳೆ ಅಂದಾಜಿನ ಪ್ರಕಾರ; ಉತ್ತಮ ಮಳೆಯ ನಿರೀಕ್ಷೆಯೊಂದಿಗೆ ಎಲ್ಲ ಮುನ್ನೆಚ್ಚರಿಕೆ ಕ್ರಮಕ್ಕೆ ಸಲಹೆ ನೀಡಿರುವದಾಗಿ ಸ್ಪಷ್ಟಪಡಿಸಿದರು. ಅಲ್ಲದೆ ತಾ. 19ರ ರಾತ್ರಿಯಿಂದ ಮಳೆ ಚುರುಕುಗೊಳ್ಳಲಿದೆ ಎಂದು ನೆನಪಿಸಿದರು.

ಇಂದು ಕೂಡ ಅದನ್ನೇ ಹೇಳಿದ್ದೀರಿ; ಇಲ್ಲಿ ಬಿಸಿಲಿನ ವಾತಾ ವರಣವಿದೆ ಎಂದು ಪ್ರಶ್ನಿಸಲಾಗಿ; ಆತಂಕದ ನುಡಿಯಾಡಿದ ಅವರು ಮುಂದಿನ 24 ಗಂಟೆಗಳಲ್ಲಿ ಕೊಡಗು ವ್ಯಾಪ್ತಿಯಲ್ಲಿ ಮಳೆ ಸುರಿಯದಿದ್ದರೆ; ಈ ವರ್ಷದ ಮುಂಗಾರು ಮಳೆಯನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಲು ಸಾಧ್ಯವಾಗದು ಎಂದು ವ್ಯಾಖ್ಯಾನಿಸಿದರು.

ಮಳೆಯಲ್ಲಿ ವ್ಯತ್ಯಾಸ : ಕೊಡಗಿನಲ್ಲಿ ಪ್ರಸಕ್ತ ಮುಂಗಾರುವಿನಲ್ಲಿ ಜೂನ್‍ನಿಂದ ಜುಲೈ 18ರ ವೇಳೆಗೆ ವಾಡಿಕೆಯಂತೆ 49 ಇಂಚು ಮಳೆಯಾಗಬೇಕಿತ್ತು; ಆದರೆ ಈಗ ಸರಾಸರಿ 28 ಇಂಚು ಮಳೆಯಾಗಿದೆ ಎಂದು ನೆನಪಿಸಿದ ಅವರು; ಕಳೆದ ವರ್ಷ ತೀವ್ರತೆಯ ಪರಿಣಾಮ ಈ ಹೊತ್ತಿಗೆ 88.06 ಇಂಚು ಮಳೆ ಸುರಿದಿದ್ದಾಗಿ ಉಲ್ಲೇಖಿಸಿದರು.

ತಾಲೂಕುವಾರು ಮಳೆ : ಪ್ರಸಕ್ತ ಅವಧಿಯಲ್ಲಿ ಮಡಿಕೇರಿ ತಾಲೂಕಿನ ಮಟ್ಟಿಗೆ 35.86 ಇಂಚು ಮಳೆ ದಾಖಲಾಗಿದೆ. ವಾಡಿಕೆಯಂತೆ 66.69 ಇಂಚು ದಾಖಲಾಗಬೇಕಿತ್ತು. ಕಳೆದ ವರ್ಷ 121.66 ಇಂಚು ದಾಖಲಾಗಿ ದ್ದಾಗಿ ನೆನಪಿಸಿದ್ದಾರೆ. ಇನ್ನು ವೀರಾಜಪೇಟೆ ತಾಲೂಕಿನಲ್ಲಿ ಈ ಅವಧಿಗೆ 32.37 ಇಂಚು ಮಳೆ ಯಾಗಿದ್ದು; ವಾಡಿಕೆಯಂತೆ 38.29 ಇಂಚು ಆಗಬೇಕಿತ್ತು. ಕಳೆದ ವರ್ಷ ಮಾತ್ರ 73.76 ಇಂಚು ಮಳೆಯಾಗಿತ್ತು. ಅಂತೆಯೇ

(ಮೊದಲ ಪುಟದಿಂದ) ಸೋಮವಾರಪೇಟೆ ತಾಲೂಕಿನಲ್ಲಿ ಪ್ರಸಕ್ತ 16.58 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ವೇಳೆಗೆ 68.76 ಇಂಚು ದಾಖಲಾಗಿತ್ತು. ವಾಡಿಕೆಯಂತೆ 30.59 ಇಂಚು ದಾಖಲಾಗಬೇಕಿತ್ತು.

ಕಾವೇರಿ ಕ್ಷೀಣ : ಕೊಡಗಿನಲ್ಲಿ ಮುಂಗಾರು ಕ್ಷೀಣಗೊಂಡಿರುವ ಪರಿಣಾಮ ಜೀವನದಿ ಕಾವೇರಿ ಒಡಲಿನಲ್ಲಿ ನೀರಿನ ಹರಿಯುವಿಕೆ ತೀರಾ ಕಡಿಮೆಯಾಗಿದೆ.

90 ಟಿಎಂಸಿ ಹರಿವು : ವಾಡಿಕೆಯಂತೆ ಕಾವೇರಿಯ ಒಡಲಿನಲ್ಲಿ ಸರಾಸರಿ 90 ಟಿಎಂಸಿ ನೀರು ಈ ಅವಧಿಯಲ್ಲಿ ಹರಿಯುವ ಅಗತ್ಯವಿತ್ತು. ಬದಲಾಗಿ ಪ್ರಸಕ್ತ ಕೇವಲ 26 ಟಿಎಂಸಿಯಿಂದ ಗರಿಷ್ಠ 30 ಟಿಎಂಸಿ ಗೋಚರಿಸಿದೆ ಎಂದು ಇಲಾಖೆಯ ಅಧಿಕಾರಿ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೊಡಗಿನ ಇತರ ನದಿಗಳು ಮತ್ತು ಹೊಳೆ ತೋಡುಗಳ ಹರಿಯುವಿಕೆಯಲ್ಲಿ ವ್ತತ್ಯಾಸ ಉಂಟಾಗಿದೆ ಎಂದು ಬೊಟ್ಟು ಮಾಡಿದ್ದಾರೆ.

ಹಾರಂಗಿ ಅಪೂರ್ಣ: ಕಳೆದ ವರ್ಷ ಹಾರಂಗಿ ಜಲಾಶಯ ಮೈದುಂಬಿಕೊಂಡು 2859 ಅಡಿಗಳಿಗಿಂತಲೂ ಸಮಾನಾಂತರ ವಾಗಿ 2856.41 ಅಡಿ ನೀರು ಶೇಖರಣೆಯೊಂದಿಗೆ ತಾ. 19 ರಂದು ರಾಜ್ಯದ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಿದ್ದು ಗಮನಾರ್ಹ. ಈಗಿನ ಮಟ್ಟಿಗೆ ಕಳೆದ ಸಾಲಿಗಿಂತ 36.36 ಅಡಿ ಕಡಿಮೆ ನೀರಿದ್ದು; ಕೇವಲ 2820.05 ಅಡಿಯಷ್ಟು ನೀರಿದೆ. ಜಲಾಶಯದ ಗರಿಷ್ಠ ಮಟ್ಟ ತಲಪಲು ಇನ್ನೂ 38.95 ಅಡಿ ಕಡಿಮೆ ಗೋಚರಿಸಿದೆ. ಈ ಎಲ್ಲವನ್ನು ಗಮನಿಸಿದರೆ ಪ್ರಸಕ್ತ ಕೊಡಗಿನಲ್ಲಿ ವಾಡಿಕೆ ಮಳೆಗಿಂತ ಶೇ. 49 ರಷ್ಟು ಮುಂಗಾರು ಕ್ಷೀಣಗೊಂಡಿರುವದು ದೃಢಪಟ್ಟಿದೆ.