ಮಡಿಕೇರಿ, ಜು. 18: 2013 ರಲ್ಲಿ ರಾಜ್ಯದ ಯುವಜನಸೇವಾ ಮತ್ತು ಕ್ರೀಡಾ ಖಾತೆಯ ಸಚಿವರಾಗಿದ್ದ, ಹಾಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಿರುದ್ಧ ಮಾನಹಾನಿ ವರದಿ ಪ್ರಕಟಿಸಿದ್ದ ಆರೋಪ ಮೇರೆಗೆ ಶಾಸಕರು ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮೊಕದ್ದಮೆಗೆ ಇದೀಗ ವಿಜಯ ಲಭಿಸಿದೆ.

ಶಾಸಕರು ವಕೀಲ ಕೆ.ಪಿ. ಬಾಲಸುಬ್ರಮಣ್ಯ ಅವರ ಮುಖಾಂತರ ತಾ. 11.2.2013 ರಂದು ಪ್ರಕರಣ ದಾಖಲಿಸುವದರೊಂದಿಗೆ 22.11.2014 ರಂದು ಸಾಕ್ಷಿಗಳ ವಿಚಾರಣೆ ನಡೆದು ನಿನ್ನೆ ತೀರ್ಪು ಪ್ರಕಟಗೊಂಡಿದೆ.

ಆ ಪ್ರಕಾರ ರಾಜ್ಯಮಟ್ಟದ ದೈನಿಕವೊಂದರ ಅಂದಿನ ಪ್ರಕಾಶಕ ಹಾಗೂ ಸಂಪಾದಕ ತಿಮ್ಮಪ್ಪ ಭಟ್, ಸ್ಥಾನೀಯ ಸಂಪಾದಕ ಮಹೇಂದ್ರ ಹಾಗೂ ಜಿಲ್ಲಾ ವರದಿಗಾರ ಅಜ್ಜಮಾಡ ರಮೇಶ್ ಕುಟ್ಟಪ್ಪ ವಿರುದ್ಧ ಪ್ರಕರಣ ದಾಖಲಾಗಿತ್ತಲ್ಲದೆ ಮಾಜಿ ಸಚಿವ ಬಿ.ಎ. ಜೀವಿಜಯ ವಿರುದ್ಧವೂ ಮೊಕದ್ದಮೆ ಹೂಡಲಾಗಿತ್ತು.

ಈ ಸಂಬಂಧ ನ್ಯಾಯಾಧೀಶ ವಿಜಯಕುಮಾರ್ ಅವರು, ರೂ. 10 ಲಕ್ಷ ಪರಿಹಾರದೊಂದಿಗೆ ಭವಿಷ್ಯದಲ್ಲಿ ಶಾಸಕರ ವಿರುದ್ಧ ಯಾವದೇ ಅಂಥಹ ವರದಿಗಳನ್ನು ಪ್ರಕಟಿಸದಂತೆ ತೀರ್ಪು ನೀಡಿದ್ದಾರೆ.