ಸುಂಟಿಕೊಪ್ಪ, ಜು. 18: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತಾ ಸಮಾಜಮುಖಿ ಕೆಲಸವನ್ನು ನಿರ್ವಹಿಸುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶ್ರೀಹರಿ ಹೇಳಿದರು.

ಇಲ್ಲಿನ ಶ್ರೀ ಮಂಜುನಾಥಯ್ಯ ಮಿನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ವಲಯದಲ್ಲಿ ಡಾ.ವಿರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ಆಯೋಜಿಸಲಾದ ಜನಮಂಗಲ ಕಾರ್ಯಕ್ರಮದಡಿ ವಿಶೇಷ ಚೇತನರಿಗೆ ಅಶಕ್ತರಿಗೆ ವಿವಿಧ ಸಲಕರಣೆಗಳನ್ನು ವಿತರಿಸಿ ಮಾತನಾಡಿದ ಅವರು, ವಿಶಾಲ ಜನ ಸಮುದಾಯ ಹೊಂದಿರುವ ಭಾರತ ದೇಶದಲ್ಲಿ ಸರಕಾರವೇ ಎಲ್ಲಾ ಸೌಲಭ್ಯಗಳನ್ನು ಜನರಿಗೆ ಒದಗಿಸುತ್ತದೆ ಎಂದು ನಿರೀಕ್ಷಿಸಲಾಗದು. ಶ್ರೀ ಧರ್ಮಸ್ಥಳ ಕ್ಷೇತ್ರ ಡಾ.ವಿರೇಂದ್ರ ಹೆಗಡೆಯವರ 50ನೇ ಪಟ್ಟಾಭಿಷೇಕದ ಹಿನ್ನೆಲೆ ವಿಶೇಷಚೇತನರಿಗೆ ಸಲಕರಣೆ ಒದಗಿಸಲು 5 ಕೋಟಿ ಬಿಡುಗಡೆಯಾಗಿದೆ. ಬಡಕುಟುಂಬದ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 10 ಕೋಟಿ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಬಡ ಅಸಕ್ತರಿಗೆ ಮಾಸಿಕ 750 ರಿಂದ 1250 ರೂ. ವರೆಗೆ ಮಾಸಾಶನ ನೀಡುತ್ತಿದ್ದು, ಅದಕ್ಕೆ 12 ಕೋಟಿ ನೀಡಲಾಗುತ್ತಿದೆ. ರಾಜ್ಯದಲ್ಲಿ 200 ಕೆರೆಗಳ ಹೂಳೆತ್ತಲು ಆರಂಭಿಸಿವೆ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದ್ದು, ಧರ್ಮಸ್ಥಳ ಸಂಘದಲ್ಲಿ ಟ್ಯಾಂಕರ್‍ನಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಮಹಿಳೆಯರಿಗೆ ಸ್ವಸಹಾಯ ಸಂಘದ ಮೂಲಕ ಸಾಲ ನೀಡಿ ಅವರ ಆರ್ಥಿಕ ಮಟ್ಟ ಸುಧಾರಿಸಲು ಮುಂದಾಗಿದೆಎಂದೂ ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಡ ಮಹಿಳೆಯರು ಆರ್ಥಿಕವಾಗಿ ಸಬಲರಾಗಿರಲು ಕಾರಣವಾಗಿದೆ. ಮಹಿಳೆಯರು ಮಕ್ಕಳಿಗೆ ಸಂಸ್ಕಾರ ಕಲಿಸುವದನ್ನು ಮರೆಯಬಾರದೆಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ಎಲ್ಲಾ ಮಠ ಮಂದಿರಗಳು ಸಾಮಾಜಿಕ ಸೇವೆಯಲ್ಲಿ ಅರ್ಥಿಕವಾಗಿ ಬಲಿಷ್ಠವಾದರೂ ತೊಡಗಿಸಿ ಕೊಳ್ಳುವದಿಲ್ಲ. ಆದರೆ ಧರ್ಮಸ್ಥಳ ಕ್ಷೇತ್ರ ಬಡ ಮಂದಿಗೆ ನೆರವು ನೀಡುತ್ತಿ ರುವದು ಇತರರಿಗೆ ಮಾದರಿಯಾಗಿದೆ ಎಂದರು. ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೋಜ್‍ಮೇರಿ ರಾಡ್ರಿಗಸ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಾಣೇಶ್ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಟಿ.ಎಸ್. ಜಾನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಶ್ರೀ ಕ್ಷೇತ್ರ ಧಮಸ್ಥಳ ಯೋಜನೆಯ ನಿರ್ದೇಶಕ ಎ. ಯೋಗೇಶ್, ನಮ್ಮ ಸುಂಟಿಕೊಪ್ಪ ಬಳಗದ ರಂಜಿತ್ ಕುಮಾರ್, ತಲೆಹೊರೆ ಕಾರ್ಮಿಕ ಸಂಘದ ಅಧ್ಯಕ್ಷ ಎಂ.ಎಸ್. ರವಿ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ವಹೀದ್‍ಜಾನ್, ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಪ್ರಕಾಶ್ ವೈ, ಸುಂಟಿಕೊಪ್ಪ ಮೇಲ್ವಿಚಾರಕಿ ಕಾಂತಿ ಕಾಮಣಿ, ಒಕ್ಕೂಟದ ಅಧ್ಯಕ್ಷೆ ಸೆಲ್ವಿ ಸತೀಶ್, ಶ್ರೀದೇವಿ ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.