ಗೋಣಿಕೊಪ್ಪಲು, ಜು. 18: ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಮೊದಲ ಪೋಷಕರ ಸಭೆ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ಪಂ. ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ ವಿದ್ಯಾರ್ಥಿ ಗಳ ಹಾಗೂ ತರಬೇತಿದಾರರ ನಡುವಿನ ಉತ್ತಮ ಒಡನಾಟದಿಂದ ಈ ಮಟ್ಟದ ಏಳಿಗೆ ಸಾಧಿಸಲು ಸಾಧ್ಯವಾಗಿದೆ. ಕೇವಲ ಕ್ರೀಡೆಯಲ್ಲಿ ಮಾತ್ರ ತಮ್ಮ ಒಲವು ತೋರಿಸದೆ ಭವಿಷ್ಯದ ದೃಷ್ಟಿಯಿಂದ ಓದಿನತ್ತಲೂ ಗಮನ ಹರಿಸಬೇಕೆಂದರು.

ಇದೇ ಮೊದಲ ಬಾರಿಗೆ ಪೋಷಕರ ಸಭೆಗೆ ಆಗಮಿಸಿದ ಕೊಡಗು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲಕ್ಷ್ಮಿಪ್ರಿಯ ಮಾತನಾಡಿ, ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಆಯ್ಕೆ ಸಂದರ್ಭ 150 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಯಾವದೇ ಒತ್ತಡಕ್ಕೆ ಮಣಿಯದೇ ಪ್ರತಿಭಾವಂತರನ್ನು ಆಯ್ಕೆ ಮಾಡಲಾಗಿದೆ. ವಸತಿ ಶಾಲೆಗೆ 10 ಎಕರೆ ಜಾಗ ಅವಶ್ಯಕತೆಯಿದೆ ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುತ್ತೇನೆ. ವಿದ್ಯಾರ್ಥಿಗಳ ಗುಣಮಟ್ಟದ ಆಹಾರ ವಿತರಣೆಗೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಪೋಷಕರ ಅಭಿಪ್ರಾಯದಂತೆ ಇಲ್ಲಿಯ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡುತ್ತಿದ್ದಾರೆ ಪ್ರತಿ ದಿನ ಎರಡು ಗಂಟೆ ವಿದ್ಯಾರ್ಥಿಗಳು ಓದುವ ಕೊಠಡಿಯಲ್ಲಿ ಅಭ್ಯಾಸ ಮಾಡಲು ಇಲ್ಲಿನ ವಾರ್ಡನ್ ವಿಶೇಷ ಗಮನ ಹರಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮುರಳಿ ಮಾತನಾಡಿ, ನಿಲಯದಲ್ಲಿ ಉತ್ತಮ ಕೋಚ್‍ಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಕೆ. ಬೋಪಣ್ಣ ಮಾತನಾಡಿ, ಮಕ್ಕಳಿಗೆ ನೀಡುವ ಆಹಾರ ಗುಣಮಟ್ಟ ಇನ್ನಷ್ಟು ಸುಧಾರಣೆ ಕಾಣಬೇಕು. ಬೆಳೆಯುವ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶ ಆಹಾರಗಳು ಸಿಗುವಂತಾಗಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ರಾಜ್ಯದಲ್ಲಿ ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆಯು ಉತ್ತಮ ಹೆಸರನ್ನು ಗಳಿಸಿದೆ ಇದು ಜಿಲ್ಲೆಗೆ ಹೆಮ್ಮೆ ತರುವ ವಿಷಯ ಎಂದರು. ಯಾವದೇ ಕಾರಣಕ್ಕೂ ಕೋಚ್‍ಗಳನ್ನು ಬದಲಾಯಿಸಬೇಡಿ, ಪ್ರಥಮ, ದ್ವಿತೀಯ ಪಿಯುಸಿಗೆ ಅವಕಾಶ ಕಲ್ಪಿಸಿ ಆಹಾರ ವಿತರಣೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ, ವಠಾರದ ಭದ್ರತೆಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವದ ರೊಂದಿಗೆ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿ ಪೋಷಕರಾದ ಕೆ.ಎಂ. ಅರುಣ್, ಸಂಪತ್, ಚಿಮ್ಮಂಗಡ ಗಣೇಶ್ ಮುಂತಾದವರು ಕೋರಿದರು.

ವೇದಿಕೆಯಲ್ಲಿ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಅಧ್ಯಕೆÀ್ಷ ಸ್ಮಿತಾ ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಭವ್ಯ, ಶ್ರೀಜಾ ಸಾಜಿ ಅಚ್ಚುತ್ತನ್, ಸಹಾಯಕ ನಿರ್ದೇಶಕಿ ಜಯಲಕ್ಷ್ಮಿಬಾಯಿ ಉಪಸ್ಥಿತರಿದ್ದರು. ವಸತಿ ನಿಲಯದ ವಾರ್ಡನ್ ಮಂಜುನಾಥ್ ಕೋಚ್ ಸುಬ್ಬಯ್ಯ, ಬುಟ್ಟಿಯಂಡ ಚಂಗಪ್ಪ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.

ಕೊಡಗು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲಕ್ಷ್ಮಿಪ್ರಿಯ ನಿಲಯದ ಆಹಾರ ದಾಸ್ತಾನು ಕೊಠಡಿ ವಿದ್ಯಾರ್ಥಿಗಳು ಉಳಿದುಕೊಳ್ಳುವ ಕೊಠಡಿ, ಶೌಚಾಲಯ ಅಡಿಗೆ ಕೋಣೆ ವಿದ್ಯಾರ್ಥಿ ನಿಲಯದ ವ್ಯವಸ್ಥೆಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು.

-ಹೆಚ್.ಕೆ. ಜಗದೀಶ್