ಬೆಂಗಳೂರು, ಜು.18 : ಮೈತ್ರಿ ಸರಕಾರದ ವಿಶ್ವಾಸಮತ ಯಾಚನೆ ಚರ್ಚೆಗಾಗಿ ಸೇರಿದ್ದ ವಿಧಾನಸಭೆ ಕಲಾಪವು ಇಂದು ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರ ನಡುವಿನ ವಾದ-ವಿವಾದ ತಾರಕಕ್ಕೇರಿ ಗದ್ದಲದಿಂದ ತುಂಬಿದ್ದು ಕಡೆಗೆ ಸದನವನ್ನು ಶುಕ್ರವಾರ ಬೆಳಿಗ್ಗೆ ಹನ್ನೊಂದಕ್ಕೆ ಮುಂದೂಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲ ವಜೂಬಾಯಿ ವಾಲಾ ಅವರು ಮಧ್ಯ ಪ್ರವೇಶಿಸಿದ್ದು, ಶುಕ್ರವಾರ ಮಧ್ಯಾಹ್ನ 1.30ರ ಒಳಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ನಿರ್ದೇಶನ ನೀಡಿದ್ದಾರೆ.ಈ ನಡುವೆ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ನಾಯಕರು ಸದನದಲ್ಲೇ ಅಹೋರಾತ್ರಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಅಲ್ಲದೆ ಮೈತ್ರಿ ಕೂಟದ ನಾಯಕರು ಸುಪ್ರೀಂ ಕೋರ್ಟ್ ಮೊರೆ ಹೋಗುವ ಚಿಂತನೆ ನಡೆಸಿದ್ದಾರೆ.
ವಿಶ್ವಾಸ ಮತಯಾಚನೆಗೆ ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎಂಬ ವಿಚಾರದಲ್ಲಿ ಸದನದಲ್ಲಿ ಭಾರೀ ಕೋಲಾಹಲ ಏರ್ಪಟ್ಟ ಹಿನ್ನೆಲೆಯಲ್ಲಿ ರಾಜ್ಯಪಾಲರು ಇಂದೇ ವಿಶ್ವಾಸಮತ ಪ್ರಕ್ರಿಯೆ ಮುಗಿಸುವಂತೆ ಸ್ಪೀಕರ್ ಗೆ ಸಂದೇಶ ರವಾನಿಸಿದ್ದರು. ಆದರೆ ಅದಾಗಲೇ ಸ್ಪೀಕರ್ ರಮೇಶ್ ಕುಮಾರ್ ತಾವು ಎಡ್ವೋಕೇಟ್ ಜನರಲ್ ಉದಯ್ ಹೊಳ್ಳ ಜತೆ ವಿಪ್ ಜಾರಿ ಸಂಬಂಧ ಚರ್ಚೆಗೆ ತೆರಳಿದ್ದ ಕಾರಣ ಸದನವನ್ನು ಉಪಸಭಾಪತಿ ಕೃಷ್ಣಾರೆಡ್ಡಿ ಅವರು ಮುನ್ನಡೆಸಿದ್ದರು.
ಸದನದಲ್ಲಿ ಗಲಾಟೆ, ಗದ್ದಲ ಮುಂದುವರಿದು ಆಡಳಿತ ಪಕ್ಷ್ಷದವರೇ ಆಪರೇಶನ್ ಕಮಲ ವಿರುದ್ಧ ಸಿಡಿದು ಪ್ರತಿಭಟಿಸಿದರೆ ಬಿಜೆಪಿ ವಿಶ್ವಾಸಮತ ಯಾಚನೆ ನಡೆಸಿ ಎಂದು ಪ್ರತಿಭಟಿಸಿದೆ. ಕಡೆಗೆ ಉಪಸಭಾಪತಿಗಳು ಶುಕ್ರವಾರ ಬೆಳಿಗ್ಗೆ ಹನ್ನೊಂದಕ್ಕೆ ಸದನದ ಕಲಾಪವನ್ನು ಮುಂದೂಡಿ ಆದೇಶಿಸಿದ್ದಾರೆ.
ಆದರೆ ಸದನದಲ್ಲಿ ವಿಶ್ವಾಸಮತ ಯಾಚನೆ ಆಗುವವರೆಗೆ ಅಹೋರಾತ್ರಿ ಹೋರಾಟ ನಡೆಸುವ ದಾಗಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬೆಳಿಗ್ಗೆ ವಿಶ್ವಾಸ ಮತ ಯಾಚಿಸಿ ತಮ್ಮ ಮಾತು ಆರಂಭಿಸಿದರು.ಆ ಸಂದರ್ಭ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವಾಸ ಮತ ಕುರಿತು ಚರ್ಚೆ ನಡೆದರೂ ಇಂದೇ ಮತಕ್ಕೆ ಹಾಕಬೇಕೆಂದು ಆಗ್ರಹಿಸಿದರು. ಮುಖ್ಯಮಂತ್ರಿ ಮತ್ತೆ ಮಾತು ಮುಂದುವರಿಸಿದಂತೆ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರು ಮಧ್ಯ ಪ್ರವೇಶಿಸಿ ಕ್ರಿಯಾ ಲೋಪ ಎತ್ತಿ ‘ಪಾಯಿಂಟ್ ಆಫ್ ಆರ್ಡರ್’ಗೆ ಆಗ್ರಹಿಸಿದರು. ಪಕ್ಷಾಂತರ ಪಿಡುಗು ಪ್ರಜಾಪ್ರಭುತ್ವದ ಅಡಿಗಲ್ಲನ್ನು ಅಲ್ಲಾಡಿಸುತ್ತಿದೆ. ಸಂವಿಧಾನದ ಕೆಲವು ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಾಗಿದೆ ಎಂದು ಹೇಳಿದರು, ಕ್ರಿಯಾ ಲೋಪ ಎತ್ತಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ಮಾತಿಗೆ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತ ಪಡಿಸಿದರು.
ಆದರೆ, ಸಭಾಧ್ಯಕ್ಷ ರಮೇಶ್ ಕುಮಾರ್ ಅವರ ಅನುಮತಿ ಮೇರೆಗೆ ಸಿದ್ದರಾಮಯ್ಯ ಮಾತು ಮುಂದುವರಿಸಿದರು. ಪಕ್ಷಾಂತರ ನಿಷೇಧ ಕಾಯಿದೆ ಬಗ್ಗೆ ಉಲ್ಲೇಖವಿರುವ ಶೆಡ್ಯೂಲ್ 10 ಅನ್ನು ಸಂವಿಧಾನದಿಂದ ತೆಗೆದು ಹಾಕಿಲ್ಲ, ಅದಿನ್ನೂ ಅಸ್ತಿತ್ವದಲ್ಲಿದೆ, ಅದರಂತೆ ಶಾಸಕನೊಬ್ಬನಿಗೆ ಅವನ ಪಕ್ಷ ವಿಪ್ ಕೊಡಲು ಅವಕಾಶವಿದೆ, ಆದರೆ ಇದನ್ನೂ ಉಲ್ಲಂಘಿಸಿ ಕೆಲ ಸದಸ್ಯರು ಗುಂಪಾಗಿ ಹೋಗಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಅಲ್ಲದೆ ಸುಪ್ರೀಂ ಕೋರ್ಟ್‍ನ ಮಧ್ಯಂತರ ತೀರ್ಪಿನಲ್ಲಿ ಅತೃಪ್ತ ಶಾಸಕÀರ ರಾಜೀನಾಮೆ ಸ್ವೀಕರಿಸುವ, ನಿರ್ಧರಿಸುವ ಅಧಿಕಾರ ಸಭಾಧ್ಯಕ್ಷರಿಗಿದೆ ಎನ್ನುವ ಕುರಿತು ಸ್ಪಷ್ಟ ನಿರ್ದೇಶನ ವಿದ್ದರೂ ಅತೃಪ್ತ ಶಾಸಕರು ವಿಶ್ವಾಸ ಮತ ಸಂದರ್ಭ ಸದನಕ್ಕೆ ಹಾಜರಾÀಗಲೇಬೇಕೆಂಬದು ಕಡ್ಡಾಯವಲ್ಲ ಎಂಬ ಅಂಶ ಒಳಗೊಂಡಿರುವದು ಗೊಂದಲವುಂಟು ಮಾಡಿದೆ. ಪಕ್ಷದ ಶಾಸಕಾಂಗ ನಾಯಕನಾಗಿ ತಾನು ವಿಪ್ ಜಾರಿಮಾಡಿದ್ದು ಇದೀಗ ಈ ಗೈರಾದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಸುಪ್ರೀಂ ಮಧ್ಯಂತರ ತೀರ್ಪಿನಿಂದ ಅಡ್ಡಿಯಾಗಿದೆ; ಇದು ಸಂವಿಧಾನದ 10 ನೇ ಶೆÀಡ್ಯೂಲ್‍ಗೆ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಕುರಿತು ಸಭಾಧ್ಯಕ್ಷರು ಸ್ಪಷ್ಟ ನಿಲುವು ಪ್ರಕಟಿಸುವಂತೆÀ ಮನವಿ ಮಾಡಿದರು. ಇದಕ್ಕೆ ಕಾಂಗ್ರೆಸ್‍ನ ಇತರ ನಾಯಕರೂ ಸ್ವರ ಸೇರಿಸಿದರು. ಬಹುತೇಕ ಸದಸ್ಯರು ಸುಪ್ರೀಂ ಕೋರ್ಟ್‍ನ ತೀರ್ಪನ್ನೇ ಪ್ರಶ್ನಿಸಿದುದು ಕಂಡುಬಂದಿತು. ಈ ಸಂದರ್ಭ ಬಿಜೆಪಿಯ ಮಾಧು ಸ್ವಾಮಿ ಮೊದಲಾದವರು ಇಂದು ಕೇವಲ ವಿಶ್ವಾಸ ಮತದ ಕುರಿತು ಮಾತ್ರ ಚರ್ಚೆಯಾಗಿ ಇಂದೇ ವಿಶ್ವಾಸ ಮತ ನಿರ್ಣಯವಾಗಬೇಕೇ ಹೊರತು ಬೇರೆ ವಿಷಯಗಳು ಅಪ್ರಸ್ತುತ ಎಂದು ಪಟ್ಟು ಹಿಡಿದರು. ಸಭಾಧ್ಯಕ್ಷÀರು ಈ ದಿಸೆಯಲ್ಲಿ ನಿರ್ಧಾರ ಪ್ರಕಟಿಸುವಂತೆ ಆಗ್ರಹಿಸಿದರು. ಈ ಸಂದರ್ಭ ಎರಡೂ ಕಡೆ ಗೊಂದಲ -ಗದ್ದಲ ಏರ್ಪಟ್ಟು ಹಲವು ಬಾರಿ ಸದನ ಮುಂದೂಡಲ್ಪಟ್ಟಿತು. ಕೊಡಗಿನ ಶಾಸಕ ಕೆಜಿ. ಬೋಪಯ್ಯ ಅವರು ಕಾನೂನಾತ್ಮಕ ಅಂಶಗಳ ಬಗ್ಗೆ ವಿವರಣೆಯಿತ್ತಾಗ ಕಾಂಗೆಸ್‍ನ
(ಮೊದಲ ಪುಟದಿಂದ) ಡಿ.ಕೆ ಶಿವಕುಮಾರ್ ಕೆಂಡಾಮಂಡಲರಾದ ಸನ್ನಿವೇಶವೂ ಎದುರಾಯಿತು. ಮಧ್ಯಾಹ್ನದ ವೇಳೆ ಬಿಜೆಪಿಯ ಕೆಲವು ಸದಸ್ಯರು ರಾಜ್ಯಪಾಲರನ್ನು ಭೇಟಿಯಾಗಿ ಸ್ಪೀಕರ್ ನಡೆ ವಿರುದ್ಧ ದೂರು ಸಲ್ಲ್ಲಿಸಿದರು.
ವಿಶ್ವಾಸಮತ ಪ್ರಕ್ರಿಯೆಯ ವೇಳೆ ಸ್ಪೀಕರ್ ವೃಥಾ ಕಾಲಹರಣ ಮಾಡುತ್ತಿದ್ದಾರೆ ಎಂದು ವಿಪಕ್ಷಗಳು ಕೋಲಾಹಲ ಪ್ರಾರಂಭಿಸಿದ ವೇಳೆಯೇ ರಾಜ್ಯಪಾಲರು ಸದನಕ್ಕೆ ಸಂದೇಶ ರವಾನಿಸಿದ್ದು ಪ್ರತಿನಿಧಿಯೊಬ್ಬರನ್ನು ಸದನಕ್ಕೆ ಕಳುಹಿಸಿದ ಸಂದರ್ಭವೂ ಒದಗಿತು.
ದಿನದ ಅಂತ್ಯದ ಒಳಗೇ ವಿಶ್ವಾಸಮತ ಸಾಬೀತುಪಡಿಸಿ ಎಂದು ರಾಜ್ಯಪಾಲರು ತಮಗೆ ಕಳಿಸಿದ್ದ ಸಂದೇಶವನ್ನು ವಿಧಾನಸಭಾಧ್ಯಕ್ಷ ಕೆ.ಆರ್ ರಮೇಶ್ ಕುಮಾರ್ ಸದನದಲ್ಲಿ ಓದಿದರು.
ರಾಜ್ಯಪಾಲರ ಈ ಸಂದೇಶವನ್ನು ಕಾಂಗ್ರೆಸ್ ಸೇರಿ ಮೈತ್ರಿ ಪಕ್ಷದ ನಾಯಕರು ಬಲವಾಗಿ ಖಂಡಿಸಿದರು.
ಈ ನಡುವೆ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಇಂದು ಕಲಾಪಕ್ಕೆ ಗೈರಾಗಿದ್ದು ಆಸ್ಪತ್ರೆಗೆ ದಾಖಲಾಗಿರುವ ಹಿಂದೆ ಬಿಜೆಪಿಯ ಪಿತೂರಿ ಅಡಗಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ಆರೋಪಿಸಿದರು.ಈ ಬಗ್ಗೆ ಕೂಲಂಕುಷ ತನಿಖೆಗೆ ಸ್ಪೀಕರ್ ಆದೇಶಿಸಿದರು.