ವೀರಾಜಪೇಟೆ, ಜು. 18: ಕೋತೂರು ಗ್ರಾಮದ ಕಾಫಿ ತೋಟದ ಲೈನ್ ಮನೆಯಲ್ಲಿ ಚೆನ್ನಿಗ ನಾಯ್ಕ (ಚೆನ್ನಪ್ಪ) ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪತ್ನಿ ನೀಲಮ್ಮ (ಚೆನ್ನಮ್ಮ) ಎಂಬಾಕೆಗೆ ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಮೂರು ವರ್ಷ ಸಜೆ ಹಾಗೂ ರೂ. 15000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಕಳೆದ ತಾ. 30-3-2018 ಕೋತೂರು ಗ್ರಾಮದ ಎಂ.ಆನಂದ ಎಂಬವರ ಲೈನ್ ಮನೆಯಲ್ಲಿದ್ದ ಚೆನ್ನಪ್ಪ ನಾಯ್ಕ ಕಂಠಪೂರ್ತಿ ಮದ್ಯ ಸೇವಿಸಿ ಪತ್ನಿ ನೀಲಮ್ಮನೊಂದಿಗೆ ಜಗಳವಾಡುತ್ತಿದ್ದಾಗ ಆಕೆಯ ಮೇಲೆ ಹಲ್ಲೆ ಮಾಡಲು ಬಂದಾಗ ಆಕೆ ಆತನನ್ನು ತಳ್ಳಿದಾಗ ಆತ ಆಕಸ್ಮಿಕವಾಗಿ ಮನೆಯ ಮೆಟ್ಟಿಲ ಮೇಲೆ ಬಿದ್ದು ತಲೆಗೆ ಗಂಭೀರ ಸ್ವರೂಪದ ಗಾಯ ಉಂಟಾಗಿ ಅಲ್ಲಿಯೇ ಸಾವನ್ನಪ್ಪಿದ್ದ. ಈ ಆರೋಪದ ಮೇರೆ ಕುಟ್ಟ ಪೊಲೀಸರು ಆಕಸ್ಮಿಕ ಸಾವಿಗೆ ಕಾರಣರಾದ ನೀಲಮ್ಮನ ವಿರುದ್ಧ ಐ.ಪಿ.ಸಿ 304 (2) ಕಲಂ 201 ರ ಪ್ರಕಾರ ಪ್ರಕರಣ ದಾಖಲಿಸಿ ಆಕೆಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದ ನಂತರ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ನೀಲಮ್ಮ ಮೂಲತ: ಸರಗೂರು ತಾಲೂಕಿನ ಅಗತ್ತೂರು ಗ್ರಾಮದ ನಿವಾಸಿಯಾಗಿದ್ದು ತನ್ನ ಮೊದಲ ಗಂಡ ಕೆಂಚನಾಯಕ ಮೃತಪಟ್ಟ ನಂತರ ಚೆನ್ನಪ್ಪ ನಾಯಕನನ್ನು ಎರಡನೇ ವಿವಾಹವಾಗಿದ್ದಳು. ಕೆಲಸ ಅರಸಿ ಕೊಡಗಿಗೆ ಬಂದ ನೀಲಮ್ಮ ಹಾಗೂ ಆತನ ಗಂಡ ಚೆನ್ನಪ್ಪ ನಾಯ್ಕ ಕೋತೂರು ಗ್ರಾಮದ ಕಾಫಿ ತೋಟದ ಲೈನ್ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.
ಚೆನ್ನಪ್ಪ ನಾಯ್ಕನ ಮರಣದ ನಂತರ ನೀಲಮ್ಮ ಮನೆಯ ಹಿಂಬದಿಯಲ್ಲಿ ಗುಂಡಿ ತೆಗೆದು ನಡೆದ ಘಟನೆಯನ್ನು ಮರೆಮಾಚುವ ದೃಷ್ಟಿಯಿಂದ ಮೃತದೇಹವನ್ನು ಅಲ್ಲಿಯೇ ಮಣ್ಣಿನಲ್ಲಿ ಮುಚ್ಚಿ ಹಾಕಿದ್ದು ನಂತರ ತಾ.21-5-18ರಂದು ಮೃತ ದೇಹ ಪತ್ತೆಯಾಗಿದ್ದು ತೋಟದ ಮಾಲೀಕರು ಕುಟ್ಟ ಪೊಲೀಸರಿಗೆ ದೂರು ನೀಡಿದ ಮೇರೆ ಪ್ರಕರಣವನ್ನು ದಾಖಲಿಸಿ ನೀಲಮ್ಮನನ್ನು ಅಗತ್ತೂರು ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಐ.ಪಿ.ಸಿ 201ಕ್ಕೆ ಎರಡು ವರ್ಷ ಸಜೆ ರೂ. 10,000 ದಂಡ, ದಂಡ ಪಾವತಿಸಿಲು ತಪ್ಪಿದರೆ ಎರಡು ತಿಂಗಳ ಸಜೆ ಅನುಭವಿಸು ವಂತೆ ತೀರ್ಪು ನೀಡಿದ್ದಾರೆ. ಒಟ್ಟು ರೂ.25000 ದಂಡದಲ್ಲಿ ರೂ. 15000ವನ್ನು ಮೃತನ ಮೊದಲನೇ ಪತ್ನಿಗೆ ಪರಿಹಾರವಾಗಿ ನೀಡುವಂತೆ ತೀರ್ಪಿನ ಆದೇಶದಲ್ಲಿ ತಿಳಿಸಲಾಗಿದೆ.
ಸರಕಾರದ ಪರ ಅಭಿಯೋಜಕರಾದ ಡಿ.ನಾರಾಯಣ್ ವಾದಿಸಿದರು.