ಸೋಮವಾರಪೇಟೆ, ಜು. 17: ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರ ಹೆಸರಿಗೆ ಅಂಚೆ ಮೂಲಕ ಧಾರ್ಮಿಕ ಪುಸ್ತಕಗಳು ತಲಪಿದ್ದು, ‘ನಾವುಗಳು ಪಠ್ಯ ಪುಸ್ತಕದ ಪಾಠ ಮಾಡಬೇಕೋ ಅಥವಾ ಧಾರ್ಮಿಕ ಪಾಠ ಮಾಡಬೇಕೋ’ ಎಂಬ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ!
ತಾಲೂಕಿನ ಹಲವಷ್ಟು ಶಾಲೆಗಳಿಗೆ ಧಾರ್ಮಿಕ ತತ್ವಗಳನ್ನು ಪ್ರಸಾರ ಮಾಡುವಂತಹ ಪುಸ್ತಕಗಳು ಪೋಸ್ಟ್ ಮೂಲಕ ಬಂದಿದ್ದು, ಶಾಲಾ ಶಿಕ್ಷಕರುಗಳು ಪುಸ್ತಕಗಳ ಬಗ್ಗೆ ತಮ್ಮ ಗುಂಪಿನಲ್ಲಿ ಚರ್ಚೆ ಮಾಡುತ್ತಿದ್ದಾರೆ.
‘ಈವರೆಗೆ ಚುನಾವಣಾ ಕಾರ್ಯ, ಜನಗಣತಿ, ನಲಿಕಲಿ, ಅಕ್ಷರದಾಸೋಹ, ತರಬೇತಿ, ಜಾತಿ ಗಣತಿ, ಮರಳಿ ಬಾ ಶಾಲೆಗೆ, ವಿಶೇಷ ದಾಖಲಾತಿ ಆಂದೋಲನ ಸೇರಿದಂತೆ ಇತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ನಮಗೆ ಪಾಠ ಮಾಡಲೂ ಸಮಯವಿರಲಿಲ್ಲ; ಇದೀಗ ಇಂತಹ ಪುಸ್ತಕಗಳನ್ನು ಕಳುಹಿಸಿದ್ದು, ಹೆಚ್ಚುವರಿಯಾಗಿ ವಿಶೇಷ ತರಗತಿಗಳನ್ನು ನಡೆಸುವ ಮೂಲಕ ಮಕ್ಕಳಿಗೆ ಧರ್ಮದ ಪಾಠ ಹೇಳಿಕೊಡಬೇಕೇ? ಎಂದು ತಮ್ಮ ವಾಟ್ಸಾಪ್ ಗ್ರೂಪ್‍ಗಳಲ್ಲಿ ಚರ್ಚೆ ಮಾಡಿಕೊಳ್ಳುತ್ತಿದ್ದಾರೆ.
ಸೋಮವಾರಪೇಟೆಯ ಬಹುತೇಕ ಸರ್ಕಾರಿ ಶಾಲೆಗಳಿಗೆ ಪುಸ್ತಕಗಳು ರವಾನೆಯಾಗಿವೆ. ಯೋಹಾನನು ಬರೆದ ಸುವಾರ್ತೆ-ಸತ್ಯಮೇವ ಜಯತೆ ಪುಸ್ತಕದ ಬೆಲೆ 15 ರೂ.ಗಳಿದ್ದು, ಖಾಸಗಿ ಪ್ರಸಾರಕ್ಕಾಗಿ ಮಾತ್ರ ಎಂದು ಪುಸ್ತಕದಲ್ಲೇ ನಮೂದಿಸಲಾಗಿದೆ. ಆದರೆ ಆಸಕ್ತರ ಖಾಸಗಿ ವಿಳಾಸಕ್ಕೆ ಪುಸ್ತಕಗಳನ್ನು ಕಳುಹಿಸುವ ಬದಲು ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಇಂತಹ ಪುಸ್ತಕಗಳನ್ನು ಕಳುಹಿಸಿರುವ ಉದ್ದೇಶವಾದರೂ ಏನು? ಎಂದು ಶಿಕ್ಷಕರುಗಳು ಪ್ರಶ್ನಿಸುತ್ತಿದ್ದಾರೆ.
ಇದರೊಂದಿಗೆ ಕೊಡವ ಭಾಷೆಯಲ್ಲಿ ದೇವಡ ಪುದಿಯ ಒಪ್ಪಂದ ಹೆಸರಿನಲ್ಲಿ ಏಸುಕ್ರಿಸ್ತರ ಸಂದೇಶಗಳು ದಾಖಲಾಗಿರುವ ಪುಸ್ತಕಗಳನ್ನು ಕಳುಹಿಸಲಾಗಿದೆ. ಇಂದಿನಿಂದ ಶಾಲೆಗಳ ಮುಖ್ಯೋಪಾಧ್ಯಾಯರ ಪದನಾಮಕ್ಕೆ ಅಂಚೆ ಮೂಲಕ ಪುಸ್ತಕಗಳು ಬರುತ್ತಿದ್ದು, ಹಲವಷ್ಟು ಮಂದಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ. ಅನವಶ್ಯಕ ಕಿರಿಕಿರಿ ಉಂಟು ಮಾಡುವ ಉದ್ದೇಶದಿಂದ ಇಂತಹ ಅಂಚೆಗಳನ್ನು ಕಳುಹಿಸುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಕರುಗಳು ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ.