ಮಡಿಕೇರಿ, ಜು. 17 : ಮಡಿಕೇರಿ ಆಕಾಶವಾಣಿಯ ಮೂಲಕ ಬಿತ್ತರವಾಗುತ್ತಿರುವ ಸೇವಾ ಮಾಹಿತಿ ಮತ್ತು ಸುದ್ದಿ ಸಮಾಚಾರವನ್ನು ಈ ಹಿಂದೆ ನಿಗದಿಪಡಿಸಿದ ಸಮಯದಲ್ಲೇ ಪ್ರಸಾರ ಮಾಡಬೇಕೆಂದು ಒತ್ತಾಯಿಸಿ ಮಡಿಕೇರಿ ಕೊಡವ ಸಮಾಜದ ಪ್ರಮುಖರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ.ವಿಜಯ್ ಅಂಗಡಿ ಅವರಿಗೆ ಮನವಿ ಸಲ್ಲಿಸಿದರು.

ಮಡಿಕೇರಿ ಆಕಾಶವಾಣಿ ಇತ್ತೀಚೆಗೆ ಕೆಲವು ಕಾರ್ಯಕ್ರಮಗಳಲ್ಲಿ ಮತ್ತು ವೇಳಾಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡಿದ್ದು, ಇದರಿಂದ ಕೊಡಗಿನ ಕೇಳುಗರು ಬೇಸರಗೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಬೆಳಿಗ್ಗೆ 7.30ಕ್ಕೆ ಪ್ರಸಾರವಾಗುತ್ತಿದ್ದ ಸುದ್ದಿ ಸಮಾಚಾರದ ಸಮಯ 7.45ಕ್ಕೆ ಬದಲಾವಣೆ ಯಾಗಿದೆ. ಕೊಡಗಿನ ಜನತೆ ಕೃಷಿಕರಾಗಿದ್ದು, ಬೆಳಗ್ಗಿನ 7.30ರ ಸುದ್ದಿ ಸಮಾಚಾರವನ್ನು ಆಲಿಸಿ ತಮ್ಮ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದರು. ಈ ಸಮಯ ಬದಲಾವಣೆಯಿಂದಾಗಿ ಜಿಲ್ಲೆಯ ರೇಡಿಯೋ ಕೇಳುಗರ ಸಂಖ್ಯೆ ಕ್ಷೀಣಿಸಿದೆ.

ಕೊಡಗಿನ ಮೂಲ ನಿವಾಸಿಗಳಾದ ಕೊಡವರ ಸಂಸ್ಕøತಿಯಲ್ಲಿ ಒಬ್ಬ ವ್ಯಕ್ತಿಯ ಸಾವಿನ ಸುದ್ದಿ ಅಂತಿಮದರ್ಶನ ಪಡೆಯುವ ದೃಷ್ಟಿಯಿಂದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇತರ ಮಾಧ್ಯಮಗಳ ಸುದ್ದಿ, ಸಂದೇಶ ಗುಡ್ಡಗಾಡು ಪ್ರದೇಶವಾದ ಕೊಡಗು ಜಿಲ್ಲೆಯ ಗ್ರಾಮಗಳಿಗೆ ಸಮಯಕ್ಕೆ ಸರಿಯಾಗಿ ತಲಪದ ಕಾರಣ ಮತ್ತು ವಿದ್ಯುತ್ ಕೊರತೆ ಇರುವದರಿಂದ ರೇಡಿಯೊ ಮಾಧ್ಯಮವೇ ಗ್ರಾಮೀಣ ಕೇಳುಗರ ನಿತ್ಯದ ಜೀವಾಳವಾಗಿದೆ. ಈಗಾಗಲೇ ಪ್ರಸಾರವಾಗುತ್ತಿರುವ ನಿಧನ ಸುದ್ದಿಯ ಸೇವಾ ಮಾಹಿತಿ ಜಿಲ್ಲೆಯ ಜನತೆಗೆ ಹೆಚ್ಚು ಉಪಕಾರಿಯಾಗಿದೆ.

ಸಂಜೆ ಹಾಗೂ ಬೆಳಿಗ್ಗೆ 7 ಗಂಟೆ ಮತ್ತು 7.30ಕ್ಕೆ ಪ್ರಸಾರವಾಗುತ್ತಿದ್ದ ಸೇವಾ ಮಾಹಿತಿಯ ಸಮಯವನ್ನು ಕೇವಲ ಒಂದು ಬಾರಿ ಬೆಳಿಗ್ಗೆ 7.30ಕ್ಕೆ ಮಾತ್ರ ಪ್ರಸಾರ ಮಾಡುವಂತೆಯೂ, ಸಂಜೆ ಪ್ರಸಾರ ಮಾಡದಂತೆಯೂ ನಿರ್ದೇಶನ ನೀಡಿರುವದು ಸರಿಯಾದ ಕ್ರಮವಲ್ಲ.

ಬೆಳಿಗ್ಗೆ 7.30ರ ನಂತರ ಬಂದಂತಹ ಸೇವಾ ಮಾಹಿತಿಯನ್ನು ಪ್ರಸಾರ ಮಾಡದಂತೆ ನಿರ್ಬಂಧ ಹೇರಿರುವದು ಕೂಡ ಜಿಲ್ಲೆಯ ಜನರ ಭಾವನೆಗೆ ವಿರುದ್ಧವಾಗಿದೆ ಎಂದು ಪ್ರಮುಖರು ಅಭಿಪ್ರಾಯಪಟ್ಟರು.

ಸೇವಾ ಮಾಹಿತಿ ಮತ್ತು ಸುದ್ದಿ ಸಮಾಚಾರದ ಮೇಲೆ ವಿಧಿಸಿರುವ ಎಲ್ಲಾ ನಿರ್ಬಂಧವನ್ನು ತಕ್ಷಣ ಹಿಂಪಡೆದು ಈ ಹಿಂದಿನಂತೆ ಸಂಜೆ ಹಾಗೂ ಬೆಳಿಗ್ಗೆ ಪ್ರಸಾರ ಮಾಡಲು ಕ್ರಮ ಕೈಗೊಳ್ಳಬೇಕೆಂದು ಕಾರ್ಯಕ್ರಮ ನಿರ್ವಾಹಕ ಡಾ. ವಿಜಯ್ ಅಂಗಡಿ ಅವರಲ್ಲಿ ಪ್ರಮುಖರು ಮನವಿ ಮಾಡಿದರು.

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ, ಉಪಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ, ಗೌರವ ಕಾರ್ಯದರ್ಶಿ ಅರೆಯಡ ರಮೇಶ್, ಜಂಟಿ ಕಾರ್ಯದರ್ಶಿ ಮಾದೇಟಿರ ಬೆಳ್ಯಪ್ಪ, ನಿರ್ದೇಶಕರುಗಳಾದ ಬೊಳ್ಳಜಿರ ಬಿ.ಅಯ್ಯಪ್ಪ, ಕುಟ್ಟಿಚಂಡ ದೇವಯ್ಯ, ಪೊನ್ನಚೆಟ್ಟೀರ ಸುಬ್ಬಯ್ಯ, ಚೊಟ್ಟೆಯಂಡ ಅಪ್ಪಾಜಿ ಮತ್ತಿತರ ಪ್ರಮುಖರು ಹಾಜರಿದ್ದರು.