ಮಡಿಕೇರಿ, ಜು. 17 : ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಶಿಕ್ಷಣ ಇಲಾಖೆಯ ಯಾವದೇ ಅನುಮತಿ ಇಲ್ಲದೆ ಕಳುಹಿಸಿಕೊಡುವ ಮೂಲಕ ಧರ್ಮಪ್ರಚಾರವನ್ನು ರಹಸ್ಯವಾಗಿ ನಡೆಸುತ್ತಿರುವ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸೂಕ್ತ ತನಿಖೆÉ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಹಿಂದೂ ಜಾಗರಣಾ ವೇದಿಕೆ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್, ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳಿಗೆ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳು ಅಂಚೆ ಮೂಲಕ ಶಿವಮೊಗ್ಗದಿಂದ ರವಾನೆಯಾಗಿದ್ದು, ಇದರ ಹಿಂದೆ ಮತಾಂತರದ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.

ಸರ್ಕಾರಿ ಶಾಲೆಗಳ ಗ್ರಂಥಾಲಯಗಳಲ್ಲಿ ಇಡುವದಕ್ಕೆಂದು ಅಂಚೆ ಮೂಲಕ ಪುಸ್ತಕಗಳನ್ನು ಕಳುಹಿಸಿಕೊಡಲಾಗಿದ್ದು, ಮೂರು ಬಗೆಯ ಪುಸ್ತಕಗಳಲ್ಲಿ ಕೊಡವ ಭಾಷೆಯ ‘ದೇವಡ ಪುದಿಯ ಒಪ್ಪಂದ’ ಎನ್ನುವ ಪುಸ್ತಕವೂ ಸೇರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳೆ ಹೆಚ್ಚಾಗಿ ವ್ಯಾಸಂಗ ಮಾಡುತ್ತಿರುವದರಿಂದ ಇವರನ್ನು ಗುರಿಯಾಗಿಸಿಕೊಂಡು ಸಣ್ಣ ವಯಸ್ಸಿನಿಂದಲೆ ಒಂದು ಮತೀಯ ತತ್ತ್ವಗಳನ್ನು ತುಂಬುವ ಷಡ್ಯಂತ್ರ ನಡೆಯುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಚ್ಚಾಡೋ ಅವರಿಂದ ಸ್ಪಷ್ಟೀಕರಣ ಬಯಸಿದಾಗ, ಈ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲವೆಂದು ತಿಳಿಸಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸಂಶಯಗಳು ಮೂಡುತ್ತಿದ್ದು, ಮಚ್ಚಾಡೋ ಅವರನ್ನು ಕೂಡ ತನಿಖೆÉಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.

ಸರ್ವ ಜನಾಂಗದ ಶಾಂತಿಯ ತೋಟದಂತಿರುವ ಶಾಲೆಗಳಲ್ಲಿ ಮತ ಪ್ರಚಾರದ ಮೂಲಕ ವ್ಯತಿರಿಕ್ತ ಪರಿಣಾಮ ಬೀರುವದು ಸರಿಯಾದ ಕ್ರಮವಲ್ಲವೆಂದ ಅವರು, ಪುಸ್ತಕಗಳನ್ನು ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮಡಿಕೇರಿ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಎಸ್.ಗಣೇಶ್ ಮಾತನಾಡಿ, ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ವೇದಿಕೆ ವತಿಯಿಂದ ಹೋರಾಟವನ್ನು ಹಮ್ಮಿಕೊಳ್ಳುವದಾಗಿ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಬಿದ್ದಂಡ ಸುಜಾ ಸುಬ್ಬಯ್ಯ, ಸದಸ್ಯ ಶಾಂತೆಯಂಡ ತಿಮ್ಮಯ್ಯ ಹಾಗೂ ತಾಲೂಕು ಉಪಾಧ್ಯಕ್ಷ ಎಂ.ಆರ್. ಗಣೇಶ್ ಉಪಸ್ಥಿತರಿದ್ದರು.