ವೀರಾಜಪೇಟೆ, ಜು. 15: ನಗರದ ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಕಾರು ಬಾರು ಹೆಚ್ಚಿದ್ದು, ಅಧಿಕಾರಿಗಳು ಕಂಡೂ ಕಾಣದಂತಿರುವದು ಒಂದೆಡೆ ಯಾದರೆ, ಮತ್ತೊಂದೆಡೆ ಅಸಹಾಯಕರಾಗಿ ಕೈ ಚೆಲ್ಲುವದರ ಮೂಲಕ ಮೌನಕ್ಕೆ ಶರಣಾಗಿರುವದು ಸಾರ್ವಜನಿಕ ವಲಯಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವೀರಾಜಪೇಟೆ ತಾಲೂಕು ಕೇಂದ್ರವಾಗಿದ್ದು, ಹೆಚ್ಚು ಕಂದಾಯ ವಸೂಲಿಯಾಗುವ ಪ್ರದೇಶವಾಗಿದೆ. ಇದಕ್ಕಾಗಿ ನಗರದಲ್ಲಿರುವ ತಾಲೂಕು ಕಚೇರಿಯಲ್ಲಿ ಇತ್ತೀಚೆಗೆ ಮಧ್ಯವರ್ತಿಗಳ ಕಾರುಬಾರು ಹೆಚ್ಚುವ ಮೂಲಕ ಜನ ಸಾಮಾನ್ಯರು ಅಧಿಕಾರಿಗಳ ಬಳಿ ಸರ್ಕಾರಿ ಕೆಲಸಗಳನ್ನು ಮಾಡಿಕೊಳ್ಳುವದೇ ದುಸ್ಸಾಹಸವಾಗಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳಾದ ವಿಧವಾ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲ ವೇತನ, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಇನ್ನಿತರ ಸಹಾಯ ಧನ ಸೇರಿದಂತೆ ಇನ್ನಿತರೇ ಯೋಜನೆಗಳಿಗೆ ಅರ್ಹ ಫಲಾನುಭವಿ ನಾಗರಿಕರು ಅರ್ಜಿ ಹಾಕಿದರೆ ವಿಳಂಬವಾಗುವದು ಇಲ್ಲದೆ, ವಜಾ ಆಗುವದು ಈ ಕಚೇರಿಯಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆಯಾಗಿದೆ.

ತಾಲೂಕು ಕಚೇರಿಯಲ್ಲಿ ಯಾವದಾದರೂ ಕೆಲಸ ಬೇಗ ಆಗಿ ಸಿಗುತ್ತದೆ ಎಂಬದು ಕನಸಿನ ಮಾತು. ಕಡತಗಳ ವಿಲೇವಾರಿ ಆಗಬೇಕೆಂದರೆ ವರ್ಷಗಟ್ಟಲೇ ಕಾಯಲೇಬೇಕು. ಪ್ರತಿದಿನ ನಾಳೆ ಬನ್ನಿ ಒಂದು ವಾರ ಬಿಟ್ಟು ಬನ್ನಿ ಎಂಬ ಮಾತುಗಳು ಅಧಿಕಾರಿಗಳಿಂದ ಕೇಳಿಬರುವದು ಸಾಮಾನ್ಯವಾಗಿದೆ.

ಮಧ್ಯವರ್ತಿಗಳ ಚಲನ ವಲನಗಳು ನಿಯಂತ್ರಿಸಲು ಇಂದಿನ ವರಿಗೆ ಸಾಧ್ಯವಾಗುತ್ತಿಲ್ಲ ಎಂಬದು ನೋವಿನ ಸಂಗತಿಯಾದರೆ, ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಇಲ್ಲಿಯ ತಹಶೀಲ್ದಾರ್, ಉಪ ತಹಶೀಲ್ದಾರ್ ಮತ್ತು ವಿವಿಧ ಶಿರಸ್ತೇದಾರ್ಗಳ ಗಮನಕ್ಕೆ ಬಂದಿಲ್ಲವೇ ಎಂಬದು ಸಾರ್ವಜನಿಕರಲ್ಲಿ ಕಾಡುತ್ತಿರುವ ಯಕ್ಷ ಪ್ರಶ್ನೆ.

ಮಧ್ಯವರ್ತಿಗಳಿಂದ ಹಣ ಪಡೆದು ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡಿ ಕೊಡುತ್ತಿದ್ದಾರೋ, ಇಲ್ಲವೋ ಅಥವಾ ತಮ್ಮ ವೈಯಕ್ತಿಕ ಕೆಲಸಗಳಿಗೆ ಮಧ್ಯವರ್ತಿಗಳ ಕೃಪಾಕಟಾಕ್ಷ ಬೇಕೆಂದು ಪರೋಕ್ಷ ವಾಗಿ ಬೆಂಬಲಿ ಸುತ್ತಿದ್ದಾರೋ ತಿಳಿಯದಂತಾಗಿದ್ದು, ರಾಜಕೀಯ ಪ್ರಭಾವದಿಂದ ತಮ್ಮ ಕೆಲಸಕ್ಕೆ ಕುತ್ತು ಬರುತ್ತದೆ ಎಂಬ ಭಯ ದಿಂದ ಮೌನಕ್ಕೆ ಶರಣಾಗಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ.

ಇನ್ನು ಕೆಲವರು ಎಲ್ಲಾ ದಾಖಲೆಗಳನ್ನು ಮಾಡಿಕೊಡುತ್ತೇವೆ ಎಂದು ಜನರಿಗೆ ನಂಬಿಸಿ ಹಣ ಪೀಕುವದು ಒಂದೆಡೆಯಾದರೆ ಇನ್ನು ಕೆಲವರು ಕೇವಲ ಹೆಣ್ಣು ಮಕ್ಕಳನ್ನು ಟಾರ್ಗೇಟ್ ಮಾಡಿ ನಂಬಿಸಿ ಮೋಸಗೊಳಿಸುವದು ಕೂಡ ಹೆಚ್ಚಾಗಿದೆ. ಇತ್ತ ಜವಾಬ್ದಾರಿಯುತ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

- ರಜಿತ ಕಾರ್ಯಪ್ಪ