ಗೋಣಿಕೊಪ್ಪಲು, ಜು. 16: ಗೋಣಿಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಲ್ಲಿನ ರೋಟರಿ ಸಂಸ್ಥೆ ವತಿಯಿಂದ ಸರಳ ವಿಜ್ಞಾನ, ಸರಳ ಗಣಿತ ಹಾಗೂ ಕನ್ನಡ ಶಾಲಾ ಮಕ್ಕಳಿಗೆ ಆಂಗ್ಲಭಾಷೆ ಕಲಿಕೆ ಸುಲಭವಾಗಲು ಅನುಗುಣವಾದ ಸುಮಾರು 100 ಪುಸ್ತಕಗಳನ್ನು ವಿತರಿಸಲಾಯಿತು.

ಗೋಣಿಕೊಪ್ಪಲು ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ ಕಾಡ್ಯಮಾಡ ನವೀನ್ ಅವರು ಮಾತನಾಡಿ, ಕನ್ನಡ ಶಾಲೆಯ ಮಕ್ಕಳು ಇಂಗ್ಲೀಷ್ ಭಾಷೆಯಲ್ಲಿ ಪ್ರಭುತ್ವವನ್ನು ಸಾಧಿಸಲು ಬೆಂಗಳೂರಿನ ಒರೇಕಲ್ ಕಂಪೆನಿಯ ಸಹಭಾಗಿತ್ವದೊಂದಿಗೆ ಪ್ರಸ್ತುತ ಸುಮಾರು 10 ಸರ್ಕಾರಿ ಶಾಲೆಗೆ ತಲಾ 100 ಪುಸ್ತಕದ ಒಂದು ಕಿಟ್ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ‘ವಿವೇಕಾನಂದ ಯೂತ್ ಮೂವ್‍ಮೆಂಟ್’ ಸಂಚಾಲಕ ಡಾ. ಚಂದ್ರಶೇಖರ್ ಹಾಗೂ ಒರೇಕಲ್ ಸಂಸ್ಥೆಯ ಕುಂಜ್ಞಂಡ ಅರುಣ್ ಮಾತನಾಡಿದರು. ವನಮಹೋತ್ಸವ ಅಂಗವಾಗಿ ಮಾಜಿ ರೋಟರಿ ಸಂಸ್ಥೆ ಅಧ್ಯಕ್ಷ ಹಾಗೂ ಗೋಣಿಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಜಿ. ಮೋಹನ್, ಖಜಾಂಚಿ ಪ್ರಮೋದ್ ಕಾಮತ್, ಕೆ.ಎಂ. ಚಿಣ್ಣಪ್ಪ ಅವರ ‘ಅನುಭವ ಕಥಾನಕ’, ‘ಕಾಡಿನೊಳಗೊಂದು ಜೀವ’ ಪುಸ್ತಕವನ್ನು ವಿತರಣೆ ಮಾಡಿದರು. ನಿವೃತ್ತ ವಿಜ್ಞಾನಿ ಮೂಡೇರ ಗಣಪತಿ ಶಾಲಾ ಆವರಣದಲ್ಲಿ ಇದೇ ಸಂದರ್ಭ ಸಸಿ ನೆಟ್ಟರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿಕಲಾ, ಸರ್ಕಾರಿ ಪ್ರೌಢ ಶಾಲಾ ಉಸ್ತುವಾರಿ ಮುಖ್ಯ ಶಿಕ್ಷಕಿ ಕಾವೇರಮ್ಮ, ಶಾಲಾಡಳಿತ ಮಂಡಳಿ ಅಧ್ಯಕ್ಷೆ ಶಾಂತಿ ಕೆ.ಆರ್.,ಹಿರಿಯ ವಿದ್ಯಾರ್ಥಿಗಳಾದ ಅಜ್ಜಿಕುಟ್ಟೀರ ಚಂಗಪ್ಪ, ಟಿ.ಎಲ್. ಶ್ರೀನಿವಾಸ್, ಎಂ.ಜಿ. ಕಾಂತರಾಜ್, ಗಣೇಶ್ ರೈ, ಕೇಚಮಾಡ ಹರೀಶ್, ಗ್ರಾ.ಪಂ. ಸದಸ್ಯ ರಾಜಶೇಖರ್ ಹಾಗೂ ಶಾಲಾ ಶಿಕ್ಷಕ ವರ್ಗ ಪಾಲ್ಗೊಂಡಿದ್ದರು.