ಚೆಟ್ಟಳ್ಳಿ, ಜು. 16: ಹಲವಾರು ವರ್ಷಗಳಿಂದ ತ್ಯಾಜ್ಯಗಳನ್ನು ತನ್ನೊಡಲಲ್ಲಿ ಇಟ್ಟು, ಉಸಿರಾಡಲು ಕಷ್ಟಪಡುತ್ತಿದ್ದ ರಾಜಕಾಲುವೆಯು ನೆಲ್ಲಿಹುದಿಕೇರಿಯ ಮುತ್ತಪ್ಪ ಯುವ ಕಲಾ ಸಂಘದ ಸ್ವಚ್ಛತಾ ಕಾರ್ಯದಿಂದ ಇದೀಗ ನಿಟ್ಟುಸಿರು ಬಿಟ್ಟಿದೆ. ನೆಲ್ಲಿಹುದಿಕೇರಿಯ ಪಂಚಾಯಿತಿಗೆ ತೆರಳುವ ರಸ್ತೆಯು ಕಾವೇರಿ ನದಿಯನ್ನು ಸೇರುವ ರಾಜ ಕಾಲುವೆ ಪಂಚಾಯಿತಿಯ ನಿರ್ಲಕ್ಷ್ಯದ ಪರಿಣಾಮವಾಗಿ ಸಾಂಕ್ರಾಮಿಕ ರೋಗಗಳು ಹರಡುವ ತಾಣವಾಗಿ ಮಾರ್ಪಾಡಾಗಿದೆ. ಗ್ರಾಮದ ಸ್ವಾಸ್ಥ್ಯವನ್ನು ಕಾಪಾಡಲೆಂದು ನೆಲ್ಲಿಹುದಿಕೇರಿಯ ಮುತ್ತಪ್ಪ ಯುವ ಕಲಾ ಸಂಘದ ಸ್ವಚ್ಛತಾ ಕಾರ್ಯ ಕೈಗೊಂಡಿದೆ. ಗ್ರಾಮ ಸುಮಾರು 6 ಸಾವಿರ ಜನಸಂಖ್ಯೆಯನ್ನು ಹೊಂದಿದೆ.
ಸ್ವಚ್ಛತೆ ಕೈಗೊಂಡ ಬೆನ್ನಲ್ಲೇ ಆ ಕೆಲಸಕ್ಕೆ ಗ್ರಾಮ ಪಂಚಾಯಿತಿಯು ತನ್ನ ಹೆಸರಿಗೆ ಬಿಲ್ ಪಡೆದುಕೊಂಡಿದೆ ಎಂಬ ಆರೋಪವು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಎಡೆಮಾಡಿದೆ. ಅಭಿವೃದ್ಧಿಗೆ ಶ್ರಮಿಸಬೇಕಾದ ಜನಪ್ರತಿನಿಧಿಗಳು ಗ್ರಾಮದ ಸಮಸ್ಯೆಗೆ ಸ್ಪಂದಿಸದೆ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದ ಗ್ರಾಮಸ್ಥರು, ಗ್ರಾಮ ಪಂಚಾಯಿತಿಯನ್ನು ಗ್ರಾಮದ ಸಾಮಾಜಿಕ ಕಳಕಳಿ ಇರುವ ಸಂಘಟನೆಗಳಿಗೆ ವಹಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.