ಬೆಂಗಳೂರು, ಜುಲೈ 15 : ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮೂರು ದಿನದ ಮಟ್ಟಿಗೆ ಭದ್ರವಾಗಿದೆ. ಗುರುವಾರ ಸದನದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಲಿದ್ದು.ಬಹುಮತ ಸಾಬೀತಿನ ಅಗ್ನಿ ಪರೀಕ್ಷೆ ನಡೆಯಲಿದೆ. ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಜುಲೈ 18ರಂದು ವಿಶ್ವಾಸಮತ ಯಾಚನೆಗೆ ದಿನಾಂಕ ನಿಗದಿ ಮಾಡಲಾಗಿದೆ. ಗುರುವಾರದ ತನಕ ವಿಧಾನಸಭೆ ಕಲಾಪವನ್ನು ಸಹ ಮುಂದೂಡಲಾಗಿದೆ.ಅತೃಪ್ತ ಶಾಸಕರು, ಸ್ಪೀಕರ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಮಂಗಳವಾರ ಸುಪ್ರೀಂಕೋರ್ಟ್‍ನಲ್ಲಿ ನಡೆಯಲಿದೆ. ನ್ಯಾಯಾಲಯ ಏನು ತೀರ್ಪು ನೀಡಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.ಜುಲೈ 18ರ ವಿಶ್ವಾಸಮತಯಾಚನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಿಎಲ್‍ಪಿ ನಾಯಕ ಸಿದ್ದರಾಮಯ್ಯಗೆ ಹೆಚ್. ಡಿ. ಕುಮಾರಸ್ವಾಮಿ ಮಹತ್ವದ ಜವಾಬ್ದಾರಿಯನ್ನು ನೀಡಿದ್ದಾರೆ. ಮೈತ್ರಿ ಸರ್ಕಾರದ ಅಳಿವು-ಉಳಿವಿನ ಭವಿಷ್ಯ ಸಿದ್ದರಾಮಯ್ಯ ಅವರ ಮೇಲೆ ನಿಂತಿದೆ.

ಶಾಸಕರ ಮನವೊಲಿಸುವ ಹೊಣೆ ರಾಜೀನಾಮೆ ನೀಡಿರುವ 13 ಕಾಂಗ್ರೆಸ್ ಶಾಸಕರ

(ಮೊದಲ ಪುಟದಿಂದ) ಮನವೊಲಿಸುವ ಜವಾಬ್ದಾರಿಯನ್ನು ಕುಮಾರಸ್ವಾಮಿ ಸಿದ್ದರಾಮಯ್ಯಗೆ ನೀಡಿದ್ದಾರೆ. “ಕರ್ನಾಟಕದಲ್ಲಿ ಸರ್ಕಾರ ಉಳಿಯಬೇಕಿದ್ದರೆ ನೀವು ಮನವೊಲಿಸಲೇಬೇಕು. ಈ ಕಾರ್ಯ ನಿಮ್ಮಿಂದ ಮಾತ್ರ ಸಾಧ್ಯ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.

“ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರನ್ನು ವಾಪಸ್ ಕರೆಸಿ, ಸರ್ಕಾರ ಉಳಿಯಬೇಕಾದರೆ ಅವರನ್ನು ವಾಪಸ್ ಕರೆಸುವದು ಮುಖ್ಯವಾಗಿದೆ. ಈ ಕಾರ್ಯಯನ್ನು ನೀವು ಮಾಡಿದರೆ ಸರ್ಕಾರ ಉಳಿಯಲಿದೆ” ಎಂದು ಕುಮಾರಸ್ವಾಮಿ ಸಿದ್ದರಾಮಯ್ಯಗೆ ತಿಳಿಸಿದ್ದಾರೆ.

ಇಂದೇ ಕುಮಾರಸ್ವಾಮಿ ಅವರು ವಿಶ್ವಾಸಮತಯಾಚನೆ ಮಾಡಬೇಕು ಎಂದು ಬಿಜೆಪಿ ಪಟ್ಟು ಹಿಡಿದಿತ್ತು, ಆದರೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ನಡೆದು ವಿಶ್ವಾಸಮತ ಯಾಚನೆಗೆ ಗುರುವಾರದ ಸಮಯ ನಿಗದಿ ಪಡಿಸಲಾಗಿದೆ.

ಕಲಾಪ ಮುಂದೂಡಿಕೆ

ವಿರೋಧಪಕ್ಷವಾದ ಬಿಜೆಪಿಯ ಒತ್ತಡಕ್ಕೆ ಮಣಿದ ಸ್ಪೀಕರ್ ರಮೇಶ್ ಕುಮಾರ್ ಅವರು ಗುರುವಾರ ದವರೆಗೂ ಅಧಿವೇಶನವನ್ನು ಮುಂದೂಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗುರುವಾರ ವಿಶ್ವಾಸಮತ ಯಾಚನೆ ಮಾಡುವ ದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಬಿಜೆಪಿ ನಾಯಕರು ಅಲ್ಲಿಯವರೆಗೂ ಕಲಾಪ ನಡೆಸದಂತೆ ಆಗ್ರಹಿಸಿದ್ದರು. ಒಂದು ವೇಳೆ ಕಲಾಪ ನಡೆಸಿದರೂ ತಾವು ಅದರಲ್ಲಿ ಪಾಲ್ಗೊಳ್ಳುವದಿಲ್ಲ ಎಂದು ಬೆದರಿಕೆ ಹಾಕಿದ್ದರು.

ಈ ಬಗ್ಗೆ ಮಧ್ಯಾಹ್ನ ಆರಂಭವಾದ ಕಲಾಪದ ವೇಳೆ ಪ್ರಸ್ತಾಪಿಸಿದ ಸ್ಪೀಕರ್ ರಮೇಶ್‍ಕುಮಾರ್, ಪ್ರತಿಪಕ್ಷ ಇಲ್ಲದೆ ಕಲಾಪ ನಡೆಸುವದು ಸರಿಯಲ್ಲ. ಹೀಗಾಗಿ ಗುರುವಾರದವರೆಗೂ ಕಲಾಪ ಮುಂದೂಡಲಾಗುತ್ತದೆ ಎಂದು ತಿಳಿಸಿದರು.