ಮಡಿಕೇರಿ, ಜು. 15: ಮಂಗಳವಾರ ಮಧ್ಯರಾತ್ರಿ ಕಳೆದು ಬುಧವಾರ ಬೆಳಗ್ಗಿನ ಜಾವÀ 1.31 ಗಂಟೆಗೆ ಭಾಗಶಃ ಚಂದ್ರಗ್ರಹಣ ನಡೆಯಲಿದೆ. ಚಂದ್ರನಿಗೆ ಕೇತು ಗ್ರಹಣವಾಗಲಿದ್ದು; ಗ್ರಹಣವು ಬುಧವಾರ ಬೆಳಗಿನ ಜಾವ 3-1 ಗಂಟೆಗೆ ಮಧ್ಯಕಾಲದಲ್ಲಿರುತ್ತದೆ. 4.30ಕ್ಕೆ ಗ್ರಹಣವು ಮುಕ್ತಗೊಳ್ಳುತ್ತದೆ. ಗ್ರಹಣದ ಅವಧಿ 2 ಗಂಟೆ 59 ನಿಮಿಷ. ಗ್ರಹಣದ ಮಾಂದಿ ಬೆ. 5.49 ರವರೆಗೂ ಇರುವದರಿಂದ ಬೆಳಿಗ್ಗೆ 6 ಗಂಟೆ ಬಳಿಕ ಸ್ನಾನ ಮಾಡಿ ಕಾಫಿ ಇತ್ಯಾದಿ ಸ್ವೀಕರಿಸುವದು ಒಳಿತು.
ಈ ಗ್ರಹಣದ ವಿಶೇಷವೆಂದರೆ ಭಾರತÀದಾದ್ಯಂತ ಗೋಚರವಾಗಲಿದ್ದು, ಜ್ಯೋತಿಷ್ಯಾನುಸಾರ ಪ್ರಭಾವ ಪರಿಣಾಮಗಳು ಕೆಲವು ಪ್ರಮುಖ ರಾಶಿ ನಕ್ಷತ್ರಗಳಿಗೆ ಅನ್ವಯವಾಗುತ್ತದೆ. ಮುಖ್ಯವಾಗಿ ಗ್ರಹಣವು ಉತ್ತರಾಷಾಢ ನಕ್ಷತ್ರ ಹಾಗೂ ಧನು ರಾಶಿಯಲ್ಲಿ ಪ್ರಾರಂಭಗೊಳ್ಳುತ್ತದೆ. ಈ ನಕ್ಷತ್ರ ರಾಶಿ ಜೊತೆಗೆ ಮಕರ ಮತ್ತು ವೃಷಭ ರಾಶಿಯವರಿಗೆ ಗ್ರಹಣದ ಪ್ರಭಾವದಿಂದ ಗ್ರಹಚಾರ ದೋಷವಿದೆ. ಈ ನಕ್ಷತ್ರ ರಾಶಿಯವರು ಅಂದು ಬೆಳಿಗ್ಗೆ ಸ್ನಾನಾನಂತರ ಮನೆಯಲ್ಲಿ ಪ್ರಾರ್ಥನೆ, ಪೂಜೆಯೊಂದಿಗೆ ಸನಿಹದ ದೇವಾಲಯಗಳಲ್ಲಿಯೂ ಪ್ರಾರ್ಥನೆ, ಅರ್ಚನೆ ಮಾಡುವ ಮೂಲಕ ದೋಷ ಪರಿಹಾರ ಕಂಡುಕೊಳ್ಳಬಹುದು. ಈ ರಾಶಿಗಳೊಂದಿಗೆ ಪ್ರಸಕ್ತ ಗ್ರಹಣವು ಕುಂಭ, ಮಿಥುನ, ಕರ್ಕಾಟಕ ಹಾಗೂ ಸಿಂಹ ರಾಶಿಗಳಲ್ಲಿ ಜನಿಸಿದವರಿಗೂ ಪರಿಣಾಮ ಉಂಟು ಮಾಡಲಿದ್ದು, ದೋಷ ನಿವಾರಣೆಗಾಗಿ ದೈವ ಪೂಜೆ ಫಲ ನೀಡುತ್ತದೆ ಎಂಬದು ಪಂಚಾಂಗಗಳ ಜ್ಯೋತಿಷಾಸ್ತ್ರಾನುಸಾರದ ಮಾರ್ಗದರ್ಶನವಾಗಿದೆ.
ಗ್ರಹಣವು ಮಧ್ಯರಾತ್ರಿ ಬಳಿಕ ಸ್ವರ್ಶಗೊಳ್ಳುವದರಿಂದ ಮಂಗಳವಾರ ರಾತ್ರಿ 7 ಗಂಟೆಯೊಳಗೆ ಆಹಾರ ಸೇವನೆ ಆರೋಗ್ಯ ಮತ್ತು ಗ್ರಹಚಾರ ದೃಷ್ಟಿಯಿಂದ ಒಳಿತು ಎಂಬದು ತಜ್ಞರ ಅಭಿಪ್ರಾಯವಾಗಿದೆ.
(ಮೊದಲ ಪುಟದಿಂದ) ವೃದ್ಧರು, ಅನಾರೋಗ್ಯ ಉಳ್ಳವರು ಹಾಗೂ ಮಕ್ಕಳು ರಾತ್ರಿ 9 ಗಂಟೆ ಒಳಗೆ ಆಹಾರ ಸೇವನೆ ಮಾಡಬಹುದು.
ವಿಜ್ಞಾನಿಗಳ ಪ್ರಕಾರ ಈ ಚಂದ್ರಗ್ರಹಣವು ಪ್ರಸಕ್ತ ವರ್ಷದ ಅಂತಿಮ ಚಂದ್ರಗ್ರಹಣವಾಗಿದೆ. ವೈಜ್ಞಾನಿಕ ಆಧಾರ ಅನ್ವಯ ರಾತ್ರಿ 12 ಗಂಟೆ. 13 ನಿಮಿಷಕ್ಕೆ ಈ ಚಂದ್ರಗ್ರಹಣವನ್ನು ವೀಕ್ಷಿಸಬಹು ದಾಗಿದೆ. ಬುಧವಾರ ಬೆಳಗಿನ ಜಾವ 3 ಗಂಟೆಗೆ ಭಾರತದಲ್ಲಿ ಸ್ಪಷ್ಟವಾಗಿ ನೋಡಬಹು ದಾಗಿದೆ. ಬೆಳಿಗ್ಗೆ 4.29ಕ್ಕೆ ಮುಕ್ತಾಯಗೊಂಡರೂ 5.47ರವರೆಗೂ ಗ್ರಹಣದ ಪ್ರಭಾವವಿದ್ದು; ಪೂರ್ಣಾವಧಿ 5 ಗಂಟೆ 34 ನಿಮಿಷಗಳಾಗಿವೆ. ಗುರುಪೂರ್ಣಿಮೆಯ ದಿನ ಚಂದ್ರಗ್ರಹಣವಾಗುತ್ತಿರುವದು ಅತ್ಯಂತ ವಿಶೇಷ ಸನ್ನಿವೇಶವಾಗಿದೆ. ಈ ರೀತಿ 149 ವರ್ಷಗಳ ಬಳಿಕ ಕಂಡುಬರುತ್ತಿರುವ ಗ್ರಹಣವೆನಿಸಿದೆ. ಗ್ರಹಣದ ಸಂದರ್ಭ ಭೂಮಿಯ ನೆರಳು ಅರ್ಧದಷ್ಟು ಪ್ರಮಾಣದಲ್ಲಿ ಚಂದ್ರನನ್ನು ಆವರಿಸಲಿದೆ ಎಂದು ವಿಜ್ಞಾನಿಗಳು ನುಡಿದಿದ್ದಾರೆ.
ಆದರೆ, ಇದು ಭಾಗಶಃ ಚಂದ್ರಗ್ರಹಣವೆನಿಸುತ್ತದೆ ಈ ಚಂದ್ರಗ್ರಹಣದ ಬಳಿಕ ಮುಂದಿನ ಚಂದ್ರಗ್ರಹಣ ಬರುವದು 2021ರ ಮೇ 26 ರಂದು. ಪ್ರಸಕ್ತ ವರ್ಷ ಚಂದ್ರನು ಭೂಮಿಯ ಹಿಂಭಾಗದಲ್ಲಿ ಕಾಣಿಸಿಕೊಂಡಾಗ ಸೂರ್ಯನ ಬೆಳಕು ಭೂಮಿಯಿಂದ ಅರ್ಧದಷ್ಟು ಪ್ರಮಾಣದಲ್ಲಿ ತಡೆಯಲ್ಪಟ್ಟಾಗ ಚಂದ್ರಗ್ರಹಣ ಸಂಭವಿಸುತ್ತದೆ. ಸೂರ್ಯ ಭೂಮಿ ಮತ್ತು ಚಂದ್ರ ಗುರುತ್ವಾಕರ್ಷಣಾ ಶಕ್ತಿಯಲ್ಲಿ ಏಕ ಸಾಲಿನಲ್ಲಿ ಬರುವಂತಹ ಸಂದರ್ಭವೇ ಚಂದ್ರಗ್ರಹಣವಾಗಿದೆ. ಈ ಸಂದರ್ಭ ಭೂಮಿಯಲ್ಲಿಯೂ ಕೂಡ ಗುರುತ್ವಾಕರ್ಷಣಾ ಶಕ್ತಿಯ ಒತ್ತಡ ಹೆಚ್ಚುತ್ತದೆ. ವೈಜ್ಞಾನಿಕವಾಗಿ ಸೂರ್ಯ ಮತ್ತು ಚಂದ್ರ ರಶ್ಮಿಗಳ ಪ್ರಭಾವ ಭೂಮಿಯ ಮೇಲೆ ಉಂಟಾಗುತ್ತದೆ. ದಾರ್ಶನಿಕರ ಪ್ರಕಾರ ಇಂತಹ ಸನ್ನಿವೇಶದಲ್ಲಿ ಧ್ಯಾನ, ಪ್ರಾರ್ಥನೆಗಳ ಮೂಲಕ ವಿಶೇಷ ಆಧ್ಯಾತ್ಮಿಕ ಸಾಧನೆ ಸುಗಮ ಹಾಗೂ ಸುಲಭ ಸಾಧ್ಯವಾಗುತ್ತದೆ.
-‘ಚಕ್ರವರ್ತಿ’