ಸೋಮವಾರಪೇಟೆ, ಜು.15: ರಾಜ್ಯ ಸಮ್ಮಿಶ್ರ ಸರ್ಕಾರದಿಂದ ಕೊಡಗಿನ ರಸ್ತೆ ಅಭಿವೃದ್ಧಿಗೆ ರೂ. 60 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಮಾಜೀ ಸಚಿವ ಬಿ.ಎ. ಜೀವಿಜಯ ಅವರ ಶ್ರಮದಿಂದ ಲೋಕೋಪಯೋಗಿ ಇಲಾಖಾ ಸಚಿವ ರೇವಣ್ಣ ಅವರು ಹಣ ಬಿಡುಗಡೆಗೊಳಿಸಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬಗ್ಗನ ಅನಿಲ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಜಿಲ್ಲೆಯ ರಸ್ತೆ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಯಾಗಿದ್ದು, ಬಹುತೇಕ ರಸ್ತೆಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಗುತ್ತಿಗೆ ದಾರರೊಂದಿಗೆ ಒಪ್ಪಂದ ಮಾಡಿ ಕೊಳ್ಳುವದು ಬಾಕಿ ಉಳಿದಿದೆ ಎಂದು ಮಾಹಿತಿಯಿತ್ತರು.ಲೋಕೋಪಯೋಗಿ ಇಲಾಖೆ ಮೂಲಕ ಜಿಲ್ಲಾ ಪಂಚಾಯತ್ ರಸ್ತೆಗಳನ್ನು ‘ಒಂದು ಬಾರಿ ಅಭಿವೃದ್ಧಿ’ ಯೋಜನೆಯಡಿ ಜಿಲ್ಲಾ ಮತ್ತು ಇತರ ರಸ್ತೆಗಳ ಸುಧಾರಣೆಗೆ ಕ್ರಮ ವಹಿಸಲಾಗಿದ್ದು, ಸೋಮವಾರಪೇಟೆ ತಾಲೂಕಿಗೆ 26 ಕೋಟಿ, ವೀರಾಜಪೇಟೆಗೆ 18 ಕೋಟಿ ಅನುದಾನ ಬಿಡುಗಡೆಗೊಂಡಿದೆ ಎಂದರು.

ರಾಜ್ಯ ಹೆದ್ದಾರಿ ಯೋಜನೆಯಡಿ ಚೆಟ್ಟಳ್ಳಿ-ಹಿರಿಸಾವೆ ರಸ್ತೆ ಅಭಿವೃದ್ಧಿಗೆ 75 ಲಕ್ಷ, ವಿಶೇಷ ಘಟಕ ಯೋಜನೆಯಡಿ ರಸ್ತೆಗಳ ಅಭಿವೃದ್ಧಿಗಾಗಿ ಸೋಮವಾರ ಪೇಟೆಗೆ 2.23 ಕೋಟಿ, ವೀರಾಜಪೇಟೆಗೆ 3.80 ಕೋಟಿ, ಗಿರಿಜನ ಉಪ ಯೋಜನೆ ಅಡಿಯಲ್ಲಿ ಸೋಮವಾರ ಪೇಟೆಗೆ 1.56 ಕೋಟಿ, ವೀರಾಜಪೇಟೆಗೆ 4.70 ಕೋಟಿ, 50:54ರ ವಿಶೇಷ ಘಟಕ ಯೋಜನೆಯಡಿ ಸೋಮವಾರಪೇಟೆಗೆ 39ಲಕ್ಷ, ವೀರಾಜಪೇಟೆಗೆ 45 ಲಕ್ಷ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.

(ಮೊದಲ ಪುಟದಿಂದ) ಎಸ್‍ಹೆಚ್‍ಡಿಪಿ ಯೋಜನೆಯಡಿ ಕುಂದಳ್ಳಿ, ಕುಮಾರಳ್ಳಿ, ಬೀದಳ್ಳಿ ರಸ್ತೆ ಅಭಿವೃದ್ಧಿಗೆ 8.50 ಕೋಟಿ ಅನುದಾನ ಬಿಡುಗಡೆಯಾಗಿದೆ. 10 ಕಿ.ಮೀ. ಉದ್ದ ಹಾಗೂ 5 ಮೀಟರ್ ಅಗಲದ ರಸ್ತೆ ನಿರ್ಮಾಣವಾಗಲಿದ್ದು, ಇದರಿಂದಾಗಿ ಮಲ್ಲಳ್ಳಿ ಜಲಪಾತ, ಪುಷ್ಪಗಿರಿಗೆ ತೆರಳಲು ಅನುಕೂಲವಾಗಲಿದೆ. ಪ್ರವಾಸೋದ್ಯ ಮಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದು ಅನಿಲ್ ಅಭಿಪ್ರಾಯಿಸಿದರು.

17.11.2017ರಲ್ಲಿ ಜೀವಿಜಯ ಅವರು ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆದು ಮನವಿ ಮಾಡಿಕೊಂಡ ಹಿನ್ನೆಲೆ ಇಲಾಖೆಯಿಂದ 4 ಕೋಟಿ ಅನುದಾನ ರಸ್ತೆಗಳ ಅಭಿವೃದ್ಧಿಗೆ ಬಿಡುಗಡೆಯಾಗಿದೆ. ಈ ಯೋಜನೆ ಯಡಿ ಈಗಾಗಲೇ 1 ಕೋಟಿ ವೆಚ್ಚದಲ್ಲಿ ಕಾಜೂರು-ಯಡವಾರೆ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದರೊಂದಿಗೆ ರೈತರು ತಮ್ಮ ಜಮೀನಿಗೆ ತೆರಳಲು ಅಗತ್ಯವಿದ್ದ ಕಾಲು ಸೇತುವೆಗಳ ನಿರ್ಮಾಣಕ್ಕೆ 1.68 ಕೋಟಿ ಅನುದಾನ ಬಂದಿದೆ. ಅಕ್ಟೋಬರ್‍ನಲ್ಲಿ ಎಲ್ಲಾ ಕಾಮಗಾರಿಗಳು ಪ್ರಾರಂಭಗೊಳ್ಳುವ ನಿರೀಕ್ಷೆಯಿದೆ ಎಂದರು.

ಗೋಷ್ಠಿಯಲ್ಲಿದ್ದ ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಡಿಸಿಲ್ವಾ ಮಾತನಾಡಿ, ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ 60 ಕೋಟಿ ಅನುದಾನ ಬಂದಿದೆ. ಚುನಾವಣೆಯಲ್ಲಿ ಸೋತರೂ ಸಹ ಜೀವಿಜಯ ಅವರು ಜಿಲ್ಲೆಯ ಅಭಿವೃದ್ಧಿಗೆ ಶ್ರಮವಹಿಸುತ್ತಿ ದ್ದಾರೆ. ಆದರೆ ಶಾಸಕರು ತಮ್ಮದೇ ಕಾಮಗಾರಿ ಎಂದು ಎಲ್ಲೆಡೆ ಹೇಳುತ್ತಿ ದ್ದಾರೆ ಎಂದು ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ವಕ್ತಾರ ಕೃಷ್ಣಪ್ಪ, ಶಾಂತಳ್ಳಿ ಗ್ರಾ.ಪಂ. ಸದಸ್ಯ ತ್ರಿಶೂಲ್, ಪ್ರಮುಖರಾದ ಡಾಲಿ ಪ್ರಕಾಶ್, ಪೂವಯ್ಯ ಅವರುಗಳು ಉಪಸ್ಥಿತರಿದ್ದರು.