ಮಡಿಕೇರಿ, ಜು. 14: ಕಳೆದ ವರ್ಷ ಡಿಸೆಂಬರ್ 16 ರಂದು ಇಲ್ಲಿನ ನಿವೃತ್ತ ಪೊಲೀಸ್ ಕೀಪಾಡಂಡ ನಂಜುಂಡ (81) ಅವರು ತಮ್ಮ ಹುಟ್ಟೂರು ಚೇರಂಬಾಣೆಯ ಸಮೀಪ ಬೇಂಗೂರು ಗ್ರಾಮ ದೇವಾಲಯದ ವಾರ್ಷಿಕೋತ್ಸವಕ್ಕೆ ತೆರಳಿ ಏಳು ತಿಂಗಳು ಕಳೆದರೂ ಹಿಂತಿರುಗಿ ಬಾರದಿರುವ ಪ್ರಕರಣ ತೀವ್ರ ಕುತೂಹಲ ಮೂಡಿಸಿದೆ.
ಪೊಲೀಸ್ ಇಲಾಖೆಯ ನಿವೃತ್ತ ಉದ್ಯೋಗಿ ನಂಜುಂಡ ತಮ್ಮ ಇಳಿವಯಸ್ಸಿನಲ್ಲಿ ಡಿ. 16 ರಂದು ಬೆಳಿಗ್ಗೆ ಪತ್ನಿ ಕಿಟ್ಟಿ ಜಾನಕಿ ಬಳಿ ಊರ ಹಬ್ಬಕ್ಕೆ ಹೋಗಿ ಬರುವದಾಗಿ ತೆರಳಿದವರು ವಾಪಾಸಾಗಲೇ ಇಲ್ಲ. ಈ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದರೂ ಯಾವದೇ ಸುಳಿವು ಲಭಿಸಿಲ್ಲ.
ಪೊಲೀಸ್ ಇಲಾಖೆಯ ನಿವೃತ್ತ ಉದ್ಯೋಗಿಯ ಈ ದೀರ್ಘಕಾಲದ ನಾಪತ್ತೆ ಪ್ರಕರಣ; ಸಂಬಂಧಿಸಿದ ಅಧಿಕಾರಿಗಳಿಗೂ ಸವಾಲಾಗಿ ಪರಿಣಮಿಸಿದೆ. ಪತಿಯ ಆಗಮನ ನಿರೀಕ್ಷೆಯಲ್ಲಿ ಕಣ್ಣೀರುಗರೆಯುತ್ತಿರುವ ನತದೃಷ್ಟೆ ಪತ್ನಿ ಜಾನಕಿ ಬದುಕಿರುವಾಗಲೇ ಒಮ್ಮೆ ನಂಜುಂಡ ಅವರನ್ನು ನೋಡಬೇಕೆಂದು ಹಂಬಲಿಸುತ್ತಿದ್ದಾರೆ.