ಸೋಮವಾರಪೇಟೆ, ಜು.14: ಮಳೆಗಾಲದಲ್ಲಿ ವಿದ್ಯುತ್ ಅಭಾವ ಎದುರಿಸುವ ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಮಳೆಗಾಲದ ಮೂರು ತಿಂಗಳು ತಲಾ 5 ಲೀಟರ್ ಸೀಮೆಎಣ್ಣೆಯನ್ನು ವಿತರಿಸಲು ಕ್ರಮ ವಹಿಸಲಾಗುವದು ಎಂದು ಆಹಾರ ಇಲಾಖಾಧಿಕಾರಿಗಳು ಭರವಸೆ ನೀಡಿದರು. ಗರ್ವಾಲೆ ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ಅಧ್ಯಕ್ಷ ಕನ್ನಿಗಂಡ ಸುಭಾಷ್ ಅಧ್ಯಕ್ಷತೆಯಲ್ಲಿ ಅಲ್ಲಿನ ಕೊಡವ ಸಮಾಜದಲ್ಲಿ ನಡೆಯಿತು. ಗರ್ವಾಲೆ, ಸೂರ್ಲಬ್ಬಿ, ಶಿರಂಗಳ್ಳಿ, ಮಂಕ್ಯ ಸೇರಿದಂತೆ ಇತರ ಗ್ರಾಮಗಳಿಗೆ ಮಳೆಗಾಲದಲ್ಲಿ ಸಮರ್ಪಕ ವಿದ್ಯುತ್ ಇರುವದಿಲ್ಲ. ಕತ್ತಲೆಯಲ್ಲೇ ಜೀವನ ಸಾಗಿಸಬೇಕಿದ್ದು, ಈ ಸಮಯದಲ್ಲಿ ಅತೀ ಅಗತ್ಯವಾದ ಸೀಮೆಎಣ್ಣೆಯನ್ನು ವಿತರಿಸಲು ಕ್ರಮ ವಹಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಮೂರು ತಿಂಗಳ ಕಾಲ ಪ್ರತಿ ಕುಟುಂಬಕ್ಕೂ ತಲಾ 5 ಲೀಟರ್ ನಂತೆ ಸೀಮೆಎಣ್ಣೆ ವಿತರಿಸುವದಾಗಿ ತಿಳಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಷ್ಟು ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗಿದ್ದು, ರಸ್ತೆ, ವಿದ್ಯುತ್ ಸಮಸ್ಯೆ ಇಂದಿಗೂ ಬಗೆಹರಿದಿಲ್ಲ. ಮೊಬೈಲ್ ಟವರ್ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇರುವದರಿಂದ ಪರಸ್ಪರ ಸಂಪರ್ಕ ಸಾಧ್ಯವಾಗುತ್ತಿಲ್ಲ. ಇಂಟರ್ನೆಟ್ ಸಹ ಇಲ್ಲದ್ದರಿಂದ ಕಚೇರಿ ಕೆಲಸಗಳೂ ನಡೆಯುತ್ತಿಲ್ಲ ಎಂದು ಸಭೆಯಲ್ಲಿ ಸಾರ್ವಜನಿಕರು ಅಳಲು ತೋಡಿಕೊಂಡರು.

ಕುಂಬಾರಗಡಿಗೆ ಗ್ರಾಮದ ತಂಬುಕುತ್ತಿರ ರಸ್ತೆ ಕಾಮಗಾರಿಗೆ ರೂ. 5 ಲಕ್ಷ ಬಿಡುಗಡೆಯಾಗಿದ್ದು, ಕಾಮಗಾರಿ ಕಳಪೆಯಾಗಿದೆ. ಇದರೊಂದಿಗೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಪರಿಣಾಮ ಗ್ರಾಮಸ್ಥರು ತೀವ್ರ ತೊಂದರೆಗೆ ಸಿಲುಕಿದ್ದಾರೆ ಎಂದು ಅಧಿಕಾರಿಗಳ ವಿರುದ್ದ ತಂಬುಕುತ್ತಿರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸೂರ್ಲಬ್ಬಿಯಲ್ಲಿ ನೂತನವಾಗಿ ಗೋ ಶಾಲೆ ಆರಂಭಿಸಲು ಕ್ರಮ ವಹಿಸಬೇಕು ಮತ್ತು ಗೋವುಗಳಿಗೆ ಅಗತ್ಯ ಮೇವು ವಿತರಿಸುವಂತಾಗಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್, ಗರ್ವಾಲೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಚಾಮೇರ ಪಳಂಗಪ್ಪ ಸೇರಿದಂತೆ ಸದಸ್ಯರು ಮತ್ತು ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.