ಮಡಿಕೇರಿ, ಜು. 14: ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಯ ವತಿಯಿಂದ ಕುಟ್ಟದಲ್ಲಿ ನಡೆಯುತ್ತಿರುವ ಸರಕಾರಿ ಗಿರಿಜನ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿರುವ ಹೆಣ್ಣು ಮಕ್ಕಳ ಅಸಹಾಯಕ ಪರಿಸ್ಥಿತಿ ಕುರಿತು ಮೊನ್ನೆಯಷ್ಟೇ ‘ಶಕ್ತಿ’ ಬೆಳಕು ಚೆಲ್ಲಿತ್ತು. ಜಿ.ಪಂ. ಅಧ್ಯಕ್ಷರು ಹಾಗೂ ಸದಸ್ಯರು ಈ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸುವದರೊಂದಿಗೆ, ಹೆಣ್ಣು ಮಕ್ಕಳಿಗೆ ಸೂಕ್ತ ವ್ಯವಸ್ಥೆ ರೂಪಿಸುವಂತೆ ತಾಲೂಕು ಅಧಿಕಾರಿ ಚಂದ್ರಶೇಖರ್ ಅವರಿಗೆ ನಿರ್ದೇಶನ ನೀಡಿದ್ದರು.

ಆ ಬೆನ್ನಲ್ಲೇ ತಾ. 11 ರಂದು ಸಂಜೆ ಮಕ್ಕಳ ಸಮಸ್ಯೆಯ ಸುಧಾರಣೆ ಕುರಿತು ಮತ್ತೊಮ್ಮೆ ಖಾತರಿಪಡಿಸಿ ಕೊಳ್ಳುವ ದಿಸೆಯಲ್ಲಿ; ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರೊಂದಿಗೆ ಅಧ್ಯಕ್ಷ ಬಿ.ಎ. ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ ಈ ವಸತಿ ನಿಲಯಕ್ಕೆ ಮರು ಭೇಟಿ ನೀಡಿದಾಗ, ಸಂಬಂಧಿಸಿದ ಇಲಾಖೆಯ ನಿಜಬಣ್ಣ ಬಯಲಾಯಿತು.

ಎಲ್ಲವೂ ನಾಟಕ: ಸಮಗ್ರ ಗಿರಿಜನರ ಕಲ್ಯಾಣಕ್ಕಾಗಿ ಕರ್ನಾಟಕ ಸರಕಾರವು ವರ್ಷಂಪ್ರತಿ ಮಳೆಗಾಲದಲ್ಲಿ ಈ ಕಾಡಿನ ಮಂದಿ ಗಾಗಿ ಜೂನ್ ಮಾಸದಿಂದ ನವೆಂಬರ್ ತನಕ ಆರು ತಿಂಗಳು ಪೌಷ್ಟಿಕ ಆಹಾರ ಕಲ್ಪಿಸಲು ಆದೇಶಿಸಿರುವದರಲ್ಲಿ ಭಾರೀ ಅವ್ಯವಹಾರದ ಬಗ್ಗೆ ‘ಶಕ್ತಿ’ ವರ್ಷದ ಹಿಂದೆ ಬೆಳಕು ಚೆಲ್ಲಿತ್ತು. ಗಿರಿಜನ ಹಾಡಿಗಳಿಗೆ ಅಂತಹ ಯಾವ ಸವಲತ್ತು ಲಭಿಸದ ಕುರಿತು ಗಿರಿಜನರು ಅಳಲು ತೋಡಿಕೊಂಡಿದ್ದರು.

ವಿದ್ಯಾರ್ಥಿಗಳಿಗೂ ವಂಚನೆ: ಅದೇ ರೀತಿ ಮುಗ್ಧ ವಿದ್ಯಾರ್ಥಿಗಳಿಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿತ್ಯದ ಅನ್ನದಲ್ಲೂ ವಂಚಿಸುತ್ತಿರುವದು ಇದೀಗ ಬಯಲಾಗಿದೆ. ಬುಧವಾರ ಜಿ.ಪಂ. ಅಧ್ಯಕ್ಷರು ಭೇಟಿ ನೀಡಿದ ವೇಳೆ ವಸತಿ ನಿಲಯದ ಆಹಾರ ಪಟ್ಟಿಯಲ್ಲಿ ನಮೂದಿಸಿರುವಂತೆ ಮಧ್ಯಾಹ್ನಕ್ಕೆ ಮಕ್ಕಳಿಗೆ ಅನ್ನ, ಕಾಳು, ತರಕಾರಿ ಮಿಶ್ರಿತ ಸಾಂಬಾರು, ರಾಗಿ ಮುದ್ದೆ, ಮಜ್ಜಿಗೆ, ಪಲ್ಯ ಇತ್ಯಾದಿ ಒದಗಿಸಬೇಕಿತ್ತು. ನಿಲಯದಲ್ಲಿ ಏನೂ ತಯಾರಿಸದೆ ಶಾಲೆಯಲ್ಲಿ ಬಿಸಿಯೂಟ ಮಾಡಿದ್ದಾಗಿ ಮಕ್ಕಳು ಉತ್ತರಿಸಿದರು.

ರಾತ್ರಿ ಅನ್ನ, ತಿಳಿಸಾರು, ಕೋಳಿ ಮಾಂಸದೊಂದಿಗೆ ಚಪಾತಿ, ಪಲ್ಯ, ಸಿಹಿ ಊಟ ನೀಡಬೇಕಿತ್ತು. ಅಡುಗೆ ಕೋಣೆಯಲ್ಲಿ ಅಧಿಕಾರಿಯೇ ತೋರಿಸಿದಂತೆ 2 ಕೆ.ಜಿ. ಹಸಿ ಮಾಂಸಕ್ಕೆ ಖಾರಪುಡಿ ಬೆರೆಸಿ ಪಾತ್ರೆಯೊಂದರಲ್ಲಿ ಇರಿಸಿದ್ದು ಹೊರತು, ಬೇರೇನೂ ಕಾಣಿಸಲಿಲ್ಲ!

ಅಲ್ಲಿ ನಡೆಯುವದೇ ಬೇರೆ: ಸ್ವತಃ ಮಹಿಳಾ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸಹಿತ ಅಧ್ಯಕ್ಷರು ಮತ್ತು ಸದಸ್ಯರು ದಿಢೀರ್ ಭೇಟಿ ನೀಡಿದಾಗ, ಮುಸ್ಸಂಜೆಗತ್ತಲೆ ನಡುವೆ ವಸತಿ ನಿಲಯದ ಅಡುಗೆ ಕೋಣೆಯಲ್ಲಿ 30 ಮಕ್ಕಳ ರಾತ್ರಿ ಊಟಕ್ಕೆ ಕೇವಲ ಕಾಳು ಬೇಯಿಸಿದ್ದ ಪಾತ್ರೆ ಹೊರತು ಬೇರೇನೂ ಇರಲಿಲ್ಲ.

ಕಕ್ಕಾಬಿಕ್ಕಿ ಅಡುಗೆಯಮ್ಮ: ಗುರುವಾರವಾದ್ದರಿಂದ ಮಕ್ಕಳಿಗೆ ಬೆಳಿಗ್ಗೆ ಬಾದಾಮಿ ಹಾಲು ಅಥವಾ ಕಾಫಿ-ಚಹಾ ನೀಡುವದು ಸೇರಿದಂತೆ, ಪಲಾವ್ ಅಥವಾ ತುಪ್ಪದನ್ನ ಕಲ್ಪಿಸಬೇಕಿತ್ತು. ಮಧ್ಯಾಹ್ನ ಅನ್ನ, ಮೊಳಕೆ ಕಾಳು, ತರಕಾರಿ ಸಾಂಬಾರು, ಉಪ್ಪಿನಕಾಯಿ, ರಾಗಿಮುದ್ದೆ, ಮಜ್ಜಿಗೆ ಇತ್ಯಾದಿ ಊಟ ನೀಡಬೇಕಿತ್ತು.

ರಾತ್ರಿಯ ಪಟ್ಟಿಯಂತೆ ಅನ್ನ, ತೊಗರಿಬೇಳೆ, ತರಕಾರಿ ಸಾಂಬಾರು, ರಾಗಿ ಮುದ್ದೆ, ಮಜ್ಜಿಗೆ, ಕಾಳು ಪಲ್ಯ ಇತ್ಯಾದಿ ಉಣಬಡಿಸಬೇಕಿದ್ದರೂ, ಅಲ್ಲಿ ಅಂತಹ ಯಾವ ಸಿದ್ಧತೆ ಗೋಚರಿಸಲಿಲ್ಲ. ಬದಲಾಗಿ ಮೇಲಧಿಕಾರಿಗಳ ಅಣತಿಯಂತೆ ಅಡುಗೆಯಮ್ಮ ಕಾಳು ಸಾಂಬಾರು ತಯಾರಿಯಲ್ಲಿ ತೊಡಗಿದ್ದರಷ್ಟೇ. ಹಿಂದಿನ ದಿನ ಜನಪ್ರತಿನಿಧಿಗಳ ಭೇಟಿಯಿಂದ ಗೊಂದಲದಲ್ಲಿದ್ದ ಆಕೆ ಮರು ದಿನವೇ ಎಲ್ಲರನ್ನೂ ಕಂಡು ಕಕ್ಕಾಬಿಕ್ಕಿಯಾದರು.

ಇಟ್ಟ ಕೊಳ್ಳಿಯೂ ಇತ್ತು: ಜಿ.ಪಂ. ಅಧ್ಯಕ್ಷರ ಭೇಟಿಯ ವೇಳೆ ‘ವಾರ್ಡನ್’ ಎಂದು ಹೇಳಿಕೊಂಡಿದ್ದ ಅಲ್ಲಿನ ಮಹಿಳೆ ಹಾಗೂ ಅಧಿಕಾರಿಗೆ ಬಿಸಿನೀರು ಕಾಯಿಸಿ ಮಕ್ಕಳಿಗೆ ಸ್ನಾನ ಮಾಡಿಸಲು ಸೂಚಿಸಿದ್ದರು. ಈಗಲೇ ಒಲೆ ಹಚ್ಚಿ ಎಂದು ತಾಕೀತು ಮಾಡಿದ್ದರು. ಈ ವೇಳೆ ಅಡುಗೆ ಹೆಂಗಸು ಒಲೆಗೆ ಹಾಕಿ ಹಳೆಯ ಪೇಪರ್ ಇರಿಸಿ ಹಚ್ಚಿದ್ದ ಬೆಂಕಿ ಉರಿಯದೇ ಮರುದಿನ ಅದೇ ಪೇಪರ್ ಮತ್ತು ಬಡಿಗೆ ಒಲೆಯೊಳಗೆ ಇದ್ದದ್ದು ಗೋಚರಿಸಿತು.

ಮಕ್ಕಳ ಅಳಲು: ಜಿ.ಪಂ. ಉಪಾಧ್ಯಕ್ಷರೊಂದಿಗೆ ಪರಿಸ್ಥಿತಿ ಬಿಚ್ಚಿಟ್ಟ ಮಕ್ಕಳು, ಸ್ನಾನಕ್ಕೆ ಬಿಸಿನೀರು ಕಲ್ಪಿಸುತ್ತಿಲ್ಲ. ಊಟಕ್ಕೆ ಚಪಾತಿ, ಮುದ್ದೆ, ಮಜ್ಜಿಗೆ ಇತ್ಯಾದಿ ಲಭಿಸದಿರುವದು ಸೇರಿದಂತೆ ಒಂದೊಂದೇ ಸಮಸ್ಯೆ ಹೇಳಿಕೊಂಡರು. ವಿಚಲಿತರಾದ ಉಪಾಧ್ಯಕ್ಷರು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಗಮನ ಸೆಳೆದು ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿ ಹೆಣ್ಣು ಮಕ್ಕಳನ್ನು ಸಂತೈಸಿದರು.

ಮೋಸದ ಜಾಲ: ವಿದ್ಯಾರ್ಥಿ ನಿಲಯದೊಳಗೆ ಪ್ರತಿಯೊಂದರಲ್ಲೂ ಮೋಸದ ಜಾಲಕ್ಕೆ ಸಾಕ್ಷಿಯೆಂಬಂತೆ, ಕೋಣೆಯೊಂದರಲ್ಲಿ ಮಕ್ಕಳಿಗೆ ಬಳಕೆಯಾಗದ ದೊಡ್ಡ ದೊಡ್ಡ ಸೈಜಿನ ಶೂಗಳು, ಉಪಯೋಗಿಸದ ಆಟಿಕೆ ಸಾಮಾನುಗಳು, ಧೂಳು ಹಿಡಿದಿರುವ ಚಪಾತಿ ಯಂತ್ರ ಗೋಚರಿಸಿತ್ತು. ಮತ್ತೊಂದೆಡೆ ಬಟ್ಟೆ ತೊಳೆಯುವ ಮತ್ತು ಒಣಗಿಸುವ ಬಳಕೆಯಾಗದ ಯಂತ್ರ, ಉಪಯೋಗಿಸದ ಜನರೇಟರ್ ಇನ್ನಿತರ ವಸ್ತುಗಳು ಜವಾಬ್ದಾರಿಯುತ ನಿರ್ಲಕ್ಷ್ಯದಿಂದÀ ಮೂಲೆ ಪಾಲಾಗಿರುವದು ಗೋಚರಿಸಿತು.

ಭೇಟಿಗಾಗಿ ನಾಟಕ: ಮೊನ್ನೆ ಜಿ.ಪಂ. ಪ್ರತಿನಿಧಿಗಳ ಭೇಟಿಯ ಸುಳಿವು ಪಡೆದು ಅಲ್ಲಿಗೆ ದೌಡಾಯಿಸಿದ್ದ ಅಧಿಕಾರಿ ಸಹಿತ ಈ ವಸತಿ ನಿಲಯದ ವಾರ್ಡನ್ ಎಂದು ಹೇಳಿಕೊಂಡ ಮಹಿಳೆ; ಅಡುಗೆ ಸಹಾಯಕಿ ಕೂಡ ಮರುದಿನ ನಾಪತ್ತೆಯಾಗಿದ್ದರು. ಬದಲಾಗಿ ‘ಹಗಲಿರುಳು’ ಮೇಲಧಿಕಾರಿ ಅಣತಿಯಂತೆ ನಡೆದುಕೊಳ್ಳುತ್ತಾ ಯಾವದೇ ‘ಗುಟ್ಟು’ ಬಿಡದ ಅಡುಗೆಯಾಕೆ ಮಾತ್ರ ಎಲ್ಲವನ್ನೂ ಸಂಬಾಳಿಸುತ್ತಿರುವದು ಕಂಡುಬಂತು.