ಮಡಿಕೇರಿ, ಜು. 13: ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಅಕ್ರಮ ಮರ ಕಡಿತಲೆ ದೂರು ಸಂಬಂಧ ನಾಲ್ಕು ದಿನಗಳ ಹಿಂದೆ ಅರಣ್ಯ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿದ್ದಾಗಿ ತಿಳಿದುಬಂದಿದೆ. ಅಲ್ಲದೆ ಅಕ್ರಮ ಮರ ಹನನ ಕುರಿತು ಅರಣ್ಯ ಪೊಲೀಸ್ ದಳ ಕ್ರಮ ಜರುಗಿಸಿದೆ ಎಂದು ಗೊತ್ತಾಗಿದೆ.
ಈ ವೇಳೆ ಹೆಮ್ಮೆತ್ತಾಳುವಿನ ತೋಟವೊಂದರಲ್ಲಿ ಬೆಳೆದು ನಿಂತಿದ್ದ ನಾಲ್ಕಾರು ಗಾಂಜಾ ಗಿಡಗಳು ಗೋಚರಿಸಿದ್ದು, ಆ ಕೂಡಲೇ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರಿಗೂ ವಿಷಯ ಮುಟ್ಟಿಸಿರುವದಾಗಿ ಗ್ರಾಮವಾಸಿಗಳು ಬಹಿರಂಗಪಡಿಸಿದ್ದಾರೆ.ಅನಂತರದಲ್ಲಿ ಈ ಗಾಂಜಾಗಿಡ ಯಾರು ಬೆಳೆಸಿದ್ದು ಅಥವಾ ಆ ಕುರಿತು ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮದ ಬಗ್ಗೆ ಅಲ್ಲಿನ ನಿವಾಸಿಗಳು ಶಂಕೆ ವ್ಯಕ್ತಪಡಿಸಿದ್ದು, ಗಾಂಜಾ ದಂಧೆಯನ್ನು ಪ್ರತಿ ಹಂತದಲ್ಲಿ ಹತ್ತಿಕ್ಕುವಲ್ಲಿ ಪೊಲೀಸ್ ಇಲಾಖೆ ಮೀನಾ ಮೇಷಾ ಎಣಿಸುವಂತಾಗಿದೆ ಎಂದು ಆಕ್ಷೇಪಿಸಿದ್ದಾರೆ.