ಮಡಿಕೇರಿ, ಜು. 13: ದಕ್ಷಿಣ ಕೊಡಗಿನಲ್ಲಿ ಅವ್ಯಾಹತವಾಗಿ ಮರಗಳ್ಳತನ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ನೋಬನ್ ಹಾಗೂ ಇತರ ಮೂವರು ನ್ಯಾಯಾಂಗ ವಶದಲ್ಲಿರುವ ಬೆನ್ನಲ್ಲೇ; ಪ್ರಮುಖ ಆರೋಪಿಯ 11 ಮಂದಿ ಸಹಚರರು ಬಂಧನ ಭೀತಿಯಿಂದ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ಅಂಶ ಬೆಳಕಿಗೆ ಬಂದಿದೆ.ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರ ಮಾರ್ಗದರ್ಶನದಲ್ಲಿ ಗೋಣಿಕೊಪ್ಪಲು ಪೊಲೀಸರು ತನಿಖೆಗೆ ಮುಂದಾಗಿರುವ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ. ಆ ಪೈಕಿ ಕಾನೂರು ವ್ಯಾಪ್ತಿಯ ಓರ್ವ ಆರೋಪಿ ಧನಂಜಯ ಎಂಬಾತ ಈಗಾಗಲೇ ನಿರೀಕ್ಷಣಾ ಜಾಮೀನು ಪಡೆದಿರುವ ಸುಳಿವು ಲಭಿಸಿದೆ.ನ್ಯಾಯಾಂಗ ಬಂಧನದಲ್ಲಿರುವ ನೋಬನ್ ಹಾಗೂ ರಾಜೇಂದ್ರ, ಅಯ್ಯಪ್ಪ, ದಾವೂದ್ ಕೂಡ ಉಚ್ಚನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವದಾಗಿ ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.