ಮಡಿಕೇರಿ, ಜು. 13 : ಬಾಳೆಲೆ, ನಿಟ್ಟೂರು, ಕಾನೂರು, ಶ್ರೀಮಂಗಲ, ಟಿ. ಶೆಟ್ಟಿಗೇರಿ, ಕುಟ್ಟ, ಕೆ. ಬಾಡಗ ಸೇರಿದಂತೆ ಯಾವದೇ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಿಲ್ಲದೆ ಜನತೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಇನ್ನೊಂದೆಡೆ ಬಿ.ಎಸ್.ಎನ್.ಎಲ್. ಕೈಕೊಟ್ಟಿರುವ ಪರಿಣಾಮ ಸಾಮಾಜಿಕ ಜಾಲತಾಣಗಳು ಕಾರ್ಯನಿರ್ವಹಿಸದೆ ಜನ ಹೈರಾಣಾಗಿದ್ದಾರೆ. ಇಂಥ ಪರಿಸ್ಥಿತಿ ನಡುವೆ ಕರಡಿಗಳು, ಕಾಡು ಹಂದಿ, ಕಾಡಾನೆಗಳ ಹಾವಳಿಯಿಂದ ಜನರು ಕಂಗೆಟ್ಟಿದ್ದಾರೆ. ಪ್ರಸಕ್ತ ಸಮಸ್ಯೆಗಳಿಗೆ ಹತ್ತು ದಿನಗಳಲ್ಲಿ ಸ್ಪಂದಿಸದಿದ್ದರೆ ಆಯ ಇಲಾಖೆಗಳ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವದು ಎಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಎಚ್ಚರಿಕೆ ನೀಡಿದ್ದಾರೆ.ಮೇಲ್ಕಾಣಿಸಿದ ಗ್ರಾಮ ಪಂಚಾಯಿತಿಗಳಲ್ಲಿ ಕಳೆದೆರಡು ದಿನಗಳಿಂದ ಜಿ.ಪಂ. ಪ್ರತಿನಿಧಿಗಳ ತಂಡ ಸ್ಥಳೀಯರಾಗಿರುವ ಆಯ ಪಂಚಾಯಿತಿಯ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಸ್ಥರ ಕುಂದುಕೊರತೆ ಆಲಿಸಿದ ಪ್ರಮುಖರು, ಸಾರ್ವಜನಿಕ ದೂರುಗಳ ಹಿನ್ನೆಲೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಗ್ರಾ.ಪಂ. ಹಂತದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಬಹುತೇಕ ಬೇಡಿಕೆಗಳನ್ನು ಆಯ ಇಲಾಖೆ ಅಧಿಕಾರಿಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜನತೆಗೆ ತಿಳಿಸದೆ ನಿರ್ಲಕ್ಷಿಸಿರುವದು ಸಭೆಗಳಿಂದ ಬಹಿರಂಗಗೊಂಡಿತು.ಸಮಸ್ಯೆಗಳ ಸರಮಾಲೆ : ಬಹುತೇಕ ಪಂಚಾಯಿತಿಗಳಲ್ಲಿ ಸಾರ್ವಜನಿಕರು ವಿದ್ಯುತ್ ಸಮಸ್ಯೆ ಬಗ್ಗೆ ಆಕ್ರೋಶ ಹೊರ ಹಾಕುತ್ತಾ, ವೀರಾಜಪೇಟೆ ಉಪವಿಭಾಗದ ಚೆಸ್ಕಾಂ ಅಧಿಕಾರಿ ಅಂಕಯ್ಯ ಯಾವದೇ ಸಮಸ್ಯೆಗೆ ಸ್ಪಂದಿಸುತ್ತಿಲ್ಲವೆಂದು ಟೀಕಿಸಿದರು. ಅಲ್ಲದೆ ಕೆಳ ಹಂತದ ಕಿರಿಯ ಅಧಿಕಾರಿಗಳು ಕೂಡ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರೂ, ಕೆಲಸ ಕೈಗೊಂಡಿಲ್ಲವೆಂದು ದೂರಿದರು.

ಮಳೆಯ ನೆಪ : ಪ್ರಸಕ್ತ ಮಳೆಯೇ ಸರಿಯಾಗಿ ಬೀಳದಿದ್ದರೂ ಅಲ್ಲಲ್ಲಿ ಮುರಿದು ಬಿದ್ದಿರುವ ಕಂಬಗಳನ್ನು ಬದಲಾಯಿಸಿಲ್ಲ; ವರ್ಷದ ಹಿಂದೆ ಜಾರಿಗೊಂಡಿರುವ ‘ಎಕ್ಸ್‍ಪ್ರೆಸ್ ಲೇನ್’ ಪರಿಪೂರ್ಣಗೊಂಡಿಲ್ಲ; ಕಾಡು ಕಡಿಯುತ್ತಿಲ್ಲ ಸಣ್ಣ ಪುಟ್ಟ ಸಮಸ್ಯೆಗಳಿಗೂ ಗ್ರಾಮಸ್ಥರು ಕೈಯಿಂದ ಹಣ ಖರ್ಚು ಮಾಡಿ; ಕೆಲಸಗಾರರನ್ನು ಕಲ್ಪಿಸಿದ್ದರೂ, ಇಂಜಿನಿಯರ್‍ಗಳು ನಿರ್ಲಕ್ಷಿಸುತ್ತಿರುವ ಕಾರಣ ವಿದ್ಯುತ್ ಕಣ್ಣು ಮುಚ್ಚಾಲೆಯಲ್ಲಿ ತಾವು ಸಿಲುಕಿರುವದಾಗಿ ಬೊಟ್ಟು ಮಾಡಿದರು.

ಅಂತರ್ಜಾಲ ಸ್ಥಗಿತ : ಒಂದೆಡೆ ವಿದ್ಯುತ್ ಕೈಕೊಟ್ಟರೆ, ಬಿಎಸ್‍ಎನ್‍ಎಲ್ ಕಾರ್ಯನಿರ್ವಹಿಸದೆ ರೈತರಿಗೆ ಆರ್.ಟಿ.ಸಿ. ಲಭಿಸುತ್ತಿಲ್ಲ; ಅಧಿಕಾರಿಗಳು ಮತ್ತು ಸಿಬ್ಬಂದಿ ಇದನ್ನೇ ನೆಪಮಾಡಿಕೊಂಡು ಸರ್ವರ್, ಇಂಟರ್‍ನೆಟ್ ಸಮಸ್ಯೆ ಹೇಳುತ್ತಿದ್ದಾರೆ. ಹೀಗಾಗಿ ಸರಕಾರದ ಯೋಜನೆಗಳನ್ನು ಪಡೆಯಲು ಜಾತಿ ದೃಢೀಕರಣ, ಆರ್‍ಟಿಸಿ, ಆದಾಯ ದೃಢೀಕರಣ ಸಹಿತ ಯಾವ ದಾಖಲೆ ಸಿಗುತ್ತಿಲ್ಲವೆಂದು ಅಸಮಾಧಾನ ತೋಡಿಕೊಂಡರು.

ಆಸ್ಪತ್ರೆಗಳು ಯಾರಿಗೆ : ಬಾಳೆಲೆ, ಕಾನೂರು, ಕುಟ್ಟ,

(ಮೊದಲ ಪುಟದಿಂದ) ಶ್ರೀಮಂಗಲ ವ್ಯಾಪ್ತಿಯ ಆಸ್ಪತ್ರೆಗಳನ್ನು ಯಾರೊಬ್ಬರಿಗೂ ಚಿಕಿತ್ಸೆ ಲಭಿಸದಾಗಿದೆ. ಬಾಳೆಲೆ ಆಸ್ಪತ್ರೆಯಲ್ಲಿ ‘ಡಿ’ ಗ್ರೂಪ್ ನೌಕರರ ಉಪದ್ರದಿಂದ ಯಾವ ವೈದ್ಯರು ಮತ್ತು ದಾದಿಯರು ಕರ್ತವ್ಯಕ್ಕೆ ಬರುತ್ತಿಲ್ಲ ಎಂದು ಸ್ವತಃ ಕ್ಷೇತ್ರದ ಜಿ.ಪಂ. ಸದಸ್ಯ ಬಾನಂಡ ಪೃಥ್ಯು ಆಕ್ರೋಶ ವ್ಯಕ್ತಪಡಿಸಿದರು. ಕಾನೂರಿನಲ್ಲಿ ರೂ. 1 ಕೋಟಿಗೂ ಅಧಿಕ ಮೊತ್ತ ಖರ್ಚು ಮಾಡಿ ಈಚೆಗೆ ಕಟ್ಟಡ ನಿರ್ಮಿಸಿದ್ದರೂ, ಜನರಿಗೆ ಈ ಆಸ್ಪತ್ರೆ ಪ್ರಯೋಜನವಿಲ್ಲವೆಂದು ಟೀಕಿಸಿದರು.

‘ಗ್ರೀನ್‍ಡಾಟ್’ಗೆ ನಿರ್ವಹಣೆ : ಶ್ರೀಮಂಗಲ ಆಸ್ಪತ್ರೆ ನಿರ್ವಹಣೆ ಕರುಣಾ ಸಂಸ್ಥೆ ಹಾಗೂ ಕಾನೂರು ಆಸ್ಪತ್ರೆಯನ್ನು ‘ಗ್ರೀನ್‍ಡಾಟ್’ಗೆ ಜಿ.ಪಂ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿರ್ವಹಣೆಗೆ ಒಪ್ಪಿಸಿದ್ದು, ಭವಿಷ್ಯದಲ್ಲಿ ಸಮಸ್ಯೆಯಾಗದಂತೆ ವೈದ್ಯರು ಬರಲಿದ್ದಾರೆ ಎಂದು ಜನತೆಗೆ ಭರವಸೆ ನೀಡಲಾಯಿತು.

ಅಲ್ಲದೆ ಬಾಳೆಲೆ ಆಸ್ಪತ್ರೆಗೆ ತಕ್ಷಣದಿಂದ ಆ್ಯಂಬುಲೆನ್ಸ್ ಒದಗಿಸುವದಾಗಿ ಇದೇ ಸಂದರ್ಭ ಅಧ್ಯಕ್ಷರು ಭರವಸೆಯಿತ್ತರು.

ಕಾಡಾನೆಯೊಂದಿಗೆ ಕರಡಿ : ದಕ್ಷಿಣ ಕೊಡಗಿನ ಬಹುತೇಕ ಕಾಫಿ ತೋಟಗಳ ನಡುವೆ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ರಾತ್ರಿ ಮನೆಯಿಂದ ಹೊರಬರಲು ಆಗುತ್ತಿಲ್ಲ; ಅಂಗಳಕ್ಕೂ ಬರುತ್ತಿವೆ ಎಂದು ಗ್ರಾಮಸ್ಥರು ಅಸಹಾಯಕತೆ ತೋಡಿಕೊಂಡರು ಸ್ವತಃ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಬಾಳೆಲೆಯ ತಮ್ಮ ತೋಟದಲ್ಲೂ ಕರಡಿಗಳ ಉಪದ್ರವೆಂದು ಜನತೆಯ ಮಾತಿಗೆ ದನಿಗೂಡಿಸಿದರು. ಈ ಬಗ್ಗೆ ಕ್ರಮ ಏನೆಂದು ಅರಣ್ಯಾಧಿಕಾರಿಗಳನ್ನು ಪ್ರಶ್ನಿಸಿದಾಗ ಅಧಿಕಾರಿ ಮೌನಕ್ಕೆ ಜಾರಿದ್ದರು.

ಜಿ.ಪಂ. ಅಧ್ಯಕ್ಷರ ತಂಡದಲ್ಲಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸ್ಥಾಯಿ ಸಮಿತಿಯ ಸರೋಜಮ್ಮ, ಕಿರಣ್ ಕಾರ್ಯಪ್ಪ, ಸಿ.ಕೆ. ಬೋಪಣ್ಣ, ಸದಸ್ಯರುಗಳಾದ ಶಿವು ಮಾದಪ್ಪ, ಪೃಥ್ಯು ಸೇರಿದಂತೆ ಆಯ ಗ್ರಾ.ಪಂ. ಪ್ರತಿನಿಧಿಗಳು, ವಿವಿಧ ಇಲಾಖೆಯ ಕೆಳಹಂತದ ಅಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.