ಮಡಿಕೇರಿ, ಜು. 13: ಮಡಿಕೇರಿ ನಗರಸಭೆ ವ್ಯಾಪ್ತಿಯ 10 ಶಾಲೆಯ 1 ಸಾವಿರ ವಿದ್ಯಾರ್ಥಿ ಗಳನ್ನೊಳಗೊಂಡ ಹಸಿರು ಪಡೆ ರಚನೆ ಮಾಡುವದರ ಮೂಲಕ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಗುವದೆಂದು ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಹೇಳಿದರು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಬಿ.ಎಸ್. ಕುಶಾಲಪ್ಪ ವೇದಿಕೆಯಲ್ಲಿ ಗ್ರೀನ್ ಸಿಟಿ ಫೋರಂ ಆಶ್ರಯದಲ್ಲಿ ಶನಿವಾರ ನಡೆದ ಹಸಿರು ಪಡೆ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ರೆಸಂಟ್ ವಿದ್ಯಾಸಂಸ್ಥೆಯ 100 ವಿದ್ಯಾರ್ಥಿಗಳನ್ನೊಳಗೊಂಡ ಹಸಿರು ಪಡೆ ರಚನೆ ಮಾಡುವದರ ಮೂಲಕ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕೊಡಗು ವಿದ್ಯಾಲಯದ 100 ವಿದ್ಯಾರ್ಥಿಗಳನ್ನೊಳಗೊಂಡ 2ನೇ ಹಸಿರು ಪಡೆಗೆ ಚಾಲನೆ ನೀಡಲಾಗಿದೆ ಎಂದರು.

ಕೊಡಗು ವಿದ್ಯಾಲಯದಲ್ಲಿ ಹಸಿರು ಪಡೆಗೆ ಚಾಲನೆ ನೀಡಿದ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿ ಕಾರಿ ಪ್ರಭಾಕರನ್ ಮಾತನಾಡಿ, ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕೆಂದು ಕರೆ ನೀಡಿದರು. ಸ್ವಚ್ಛತೆ ಕಾಪಾಡುವದು ಮತ್ತು ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವದಾಗಿ ವಿದ್ಯಾರ್ಥಿಗಳಿಗೆ ಶಿಕ್ಷಕಿ ಅಲೆಮಾಡ ಚಿತ್ರಾ ನಂಜಪ್ಪ ಪ್ರತಿಜ್ಞಾ ವಿಧಿ ಬೋಧಿಸಿದರು.

ಸರ್ಕಾರ ನಾಗರಿಕರ ಶ್ರೇಯೋಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ನಾವು ಸೇವೆ ಮೂಲಕ ಕೃತಜ್ಞತೆ ಸಲ್ಲಿಸಬೇಕೆಂದು ಕಸ ವಿಂಗಡಣೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮನಮುಟ್ಟುವಂತೆ ಗ್ರೀನ್ ಸಿಟಿ ಫೋರಂ ನಿರ್ದೇಶಕಿ ಮೋಂತಿ ಗಣೇಶ್ ಹೇಳಿದರು.

ಗ್ರೀನ್ ಸಿಟಿ ಫೋರಂ ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ, ಮಾಜಿ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಪೂಳಕಂಡ ರಾಜೇಶ್, ಖಜಾಂಚಿ ಕನ್ನಂಡ ಕವಿತಾ ಬೊಳ್ಳಪ್ಪ, ನಿರ್ದೇಶಕರಾದ ಪಿ. ಕೃಷ್ಣಮೂರ್ತಿ, ಸವಿತಾ ಭಟ್, ಅಜ್ಜಮಾಡ ರಮೇಶ್ ಕುಟ್ಟಪ್ಪ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಕಾರ್ಯ ನಿರ್ವಹಣಾಧಿಕಾರಿ ವಿದ್ಯಾ ಹರೀಶ ಇದ್ದರು.