ಮಡಿಕೇರಿ, ಜು. 13: ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಿಗೆ ಕಾಲೂರು ಗ್ರಾಮದಲ್ಲಿನ ಯಶಸ್ವಿ ಯೋಜನೆಯಡಿ ಮಹಿಳೆಯರು ತಯಾರಿಸಿದ ಸಮವಸ್ತ್ರಗಳನ್ನು ವಿತರಿಸಲಾಯಿತು.

ಕಳೆದ ವರ್ಷದ ಜಲಪ್ರಳಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕಾಲೂರು ಗ್ರಾಮದ ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದ ಭಾರತೀಯ ವಿದ್ಯಾಭವನದ ಪ್ರಾಜೆಕ್ಟ್ ಕೂರ್ಗ್‍ನ ಯಶಸ್ವಿ ಯೋಜನೆಯಡಿ ತಯಾರಿ ಸಲಾದ ಸಮವಸ್ತ್ರಗಳನ್ನು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಎಲ್.ಕೆ.ಜಿ., ಯು.ಕೆ.ಜಿ., ಪ್ರಥಮ, ದ್ವಿತೀಯ ತರಗತಿಗಳ ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ಹೊಲಿಗೆ ತರಬೇತುದಾರರಾದ ಮಡಿಕೇರಿಯ ಅಶ್ರಫುನ್ನೀಸಾ, ಅಕ್ಟೋಬರ್ 14 ರಿಂದ ಪ್ರಾರಂಭ ವಾದ ಹೊಲಿಗೆ ತರಬೇತಿಯಡಿ ಕಾಲೂರಿನ 30 ಮಹಿಳೆಯರಿಗೆ ಮಾರ್ಚ್ 30 ರವರೆಗೆ 140 ದಿನಗಳ ತರಬೇತಿ ನೀಡಲಾಗಿದ್ದು ಇದೀಗ ಎಲ್ಲಾ ಮಹಿಳೆಯರೂ ಹೊಲಿಗೆಯಲ್ಲಿ ಪರಿಣತಿ ಹೊಂದಿದ್ದಾರೆ. ಪ್ರಕೃತಿ ವಿಕೋಪ ಸಂಭವಿಸಿದಾಗ ಅನೇಕ ರೀತಿಯ ಪರಿಹಾರಗಳು ಸಂತ್ರಸ್ತರಿಗೆ ಲಭಿಸಿದವು. ಆದರೆ, ಶಾಶ್ವತ ರೀತಿಯಲ್ಲಿ ಸಂತ್ರಸ್ತರಿಗೆ ಪರಿಹಾರದಂತೆ ಕಾಲೂರಿನಲ್ಲಿ ಜಾರಿಗೊಂಡ ಪ್ರಾಜೆಕ್ಟ್ ಕೂರ್ಗ್ ನೆರವು ನೀಡಿತು. ಈ ಯೋಜನೆಯಿಂದಾಗಿ ಕಾಲೂರಿನ 30 ಮಹಿಳೆಯರು ಹೊಲಿಗೆ ತರಬೇತಿ ಪಡೆದು ಸ್ವಉದ್ಯೋಗ ಕಂಡುಕೊಳ್ಳು ವಂತಾಗಿದ್ದು ಗಮನಾರ್ಹ ಬೆಳವಣಿಗೆ ಎಂದೂ ಹೇಳಿದರು.

ಸ್ವಾವಲಂಬಿ ಜೀವನದತ್ತ ಕಾಲೂರು ಮಹಿಳೆಯರು ಇಡುತ್ತಿರುವ ಹೆಜ್ಜೆಗಳು ಮತ್ತಷ್ಟು ದೃಢವಾಗಲೆಂದು ಕಾರ್ಯಕ್ರಮದಲ್ಲಿ ಹಾಜರಿದ್ದ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಬಿ.ಕೆ. ಸುಬ್ಬಯ್ಯ, ಉಪಾಧ್ಯಕ್ಷ ಕೆ. ಪಿ. ಉತ್ತಪ್ಪ, ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್. ದೇವಯ್ಯ, ಕರೆಸ್ಪಾಂಡೆಂಟ್ ಗಳಾದ ಊರ್ವಶಿ ಮುದ್ದಯ್ಯ, ನಕುಲ್ ಪೂಣಚ್ಚ, ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾಹರೀಶ್, ಉಪಪ್ರಾಂಶುಪಾಲೆ ವನಿತಾ, ವ್ಯವಸ್ಥಾಪಕ ರವಿ ಹಾರೈಸಿದರು.

ಯಶಸ್ವಿ ಯೋಜನೆಯಡಿ ತಯಾರಿಸಲಾದ ವಿವಿಧ ಮಸಾಲೆ ಪದಾರ್ಥಗಳಿಗೂ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಇದೀಗ ಮಕ್ಕಳ ಏಪ್ರನ್ ಗೂ ಬೇಡಿಕೆ ಬಂದಿದೆ. ಫ್ಯಾನ್ಸಿ ಬ್ಯಾಗ್ ತಯಾರಿಕೆಯಲ್ಲಿಯೂ ಕಾಲೂರಿನ ಯಶಸ್ವಿ ಯೋಜನೆಯಡಿ ತರಬೇತಿ ಪಡೆದ ಮಹಿಳಾ ಉದ್ಯೋಗಿಗಳು ನಿರತರಾಗಿದ್ದಾರೆ ಎಂದು ಪ್ರಾಜೆಕ್ಟ್ ಕೂರ್ಗ್‍ನ ಬಾಲಾಜಿ ಕಶ್ಯಪ್ ಮಾಹಿತಿ ನೀಡಿದರು.

ಇತ್ತೀಚೆಗಷ್ಟೇ ಪೆÇನ್ನಂಪೇಟೆಯ ಸಾಯಿಶಂಕರ ಶಾಲೆಗೆ ಸಮವಸ್ತ್ರ ಹೊಲಿದು ಕೊಟ್ಟ ಗ್ರಾಮೀಣ ಪ್ರತಿಭೆಗಳು ಈಗ ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಮವಸ್ತ್ರ ತಯಾರಿಸಿದ್ದಾರೆ. ತಾವು ಸಿದ್ಧಪಡಿಸಿದ ಸಮವಸ್ತ್ರಗಳ ಮೊದಲ ಕಂತನ್ನು ಕಾಲೂರಿನ ಯಶಸ್ವಿ ಮಹಿಳೆಯರ ತಂಡವು ಶಾಲೆಗೆ ಹಸ್ತಾಂತರಿಸಿದ್ದಾರೆ.