ಮಡಿಕೇರಿ, ಜು. 13: ತಮ್ಮ ವೃತ್ತಿ ಜೀವನದ ಕನಸುಗಳ ಸಾಕಾರಕ್ಕಾಗಿ ವಿದ್ಯಾರ್ಥಿಗಳು ಸೂಕ್ತ ತೀರ್ಮಾನ ವನ್ನು ವಿದ್ಯಾರ್ಥಿಗಳಿರುವಾಗಲೇ ಕೈಗೊಂಡರೆ ನಿರ್ದಿಷ್ಟ ಗುರಿ ಸಾಧನೆ ಸುಲಭಸಾಧ್ಯ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಾಯಕ ಪೆÇ್ರಫೆಸರ್ ಡಾ. ಡಿ. ಅಪೂರ್ವ ಅಭಿಪ್ರಾಯಪಟ್ಟಿದ್ದಾರೆ.
ಮಡಿಕೇರಿಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಯೂತ್ ರೆಡ್ ಕ್ರಾಸ್ ವತಿಯಿಂದ ಆಯೋಜಿತ ವೃತ್ತಿ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಮಾತನಾಡಿದ ಡಾ. ಡಿ. ಅಪೂರ್ವ, ನಾಗರಿಕ ಸೇವೆಯಂಥ ವೃತ್ತಿಗೆ ಆಯ್ಕೆಯಾಗಲು ಸೂಕ್ತ ತರಬೇತಿ ಅಗತ್ಯವಿದ್ದು, ಪಿಯುಸಿ ಹಂತದಲ್ಲಿಯೇ ವಿದ್ಯಾರ್ಥಿಗಳು ತಮ್ಮ ವೃತ್ತಿಯ ಆಯ್ಕೆಯ ಬಗ್ಗೆ ಸ್ಪಷ್ಟತೆ ತೋರಿದ್ದಲ್ಲಿ ಉತ್ತಮ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯ ಎಂದರು.
ಕೊಡಗು ಜಿಲ್ಲಾ ರೆಡ್ ಕ್ರಾಸ್ ಸಭಾಧ್ಯಕ್ಷ ಬಿ.ಕೆ. ರವೀಂದ್ರರೈ ಮಾತನಾಡಿ, ಕಾಲೇಜುಗಳಲ್ಲಿಯೇ ವಿದ್ಯಾರ್ಥಿಗಳಿಗೆ ಸೂಕ್ತವಾದ ವೃತ್ತಿ ಮಾರ್ಗದರ್ಶನ ಅಗತ್ಯವಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಯೋಜನವಾಗುತ್ತದೆ ಎಂದರಲ್ಲದೇ ವೈದ್ಯಕೀಯ ಸಂಸ್ಥೆಯ ಯೂತ್ ರೆಡ್ ಕ್ರಾಸ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.
ಕೊಡಗು ರೆಡ್ ಕ್ರಾಸ್ ಕಾರ್ಯದರ್ಶಿ ಎಚ್.ಆರ್. ಮುರಳೀಧರ್ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಮೆ ಮಾಡಿ ವಿದ್ಯಾರ್ಜನೆಗೆ ಹೆಚ್ಚಿನ ಗಮನ ನೀಡಬೇಕೆಂದು ಕಿವಿಮಾತು ಹೇಳಿದರಲ್ಲದೇ, ಮೊಬೈಲ್ ನಿಂದ ಎಷ್ಟು ಪ್ರಯೋಜನವಿದೆಯೋ ಅಷ್ಟೋ ದುಷ್ಪರಿಣಾಮಗಳೂ ಇವೆ ಎಂದರು.
ವೈದ್ಯಕೀಯ ಶಿಕ್ಷಣ ಸಂಸ್ಥೆಯ ಎರಡನೇ ವರ್ಷದ ವಿದ್ಯಾರ್ಥಿ ಬಿ.ಆರ್. ತಾನಿಷ್ಕ್ ಮಾಹಿತಿ ನೀಡಿ, ಪಿಯು ಪರೀಕ್ಷೆ ಪ್ರತಿಯೋರ್ವರ ಜೀವನದಲ್ಲಿ ಅತ್ಯಂತ ಮಹತ್ವವನ್ನು ಹೊಂದಿದ್ದು, ಈ ಹಂತದಲ್ಲಿಯೇ ವಿದ್ಯಾರ್ಥಿಗಳು ಸಾಕಷ್ಟು ಮಾನಸಿಕ ಒತ್ತಡಕ್ಕೊಳಗಾಗಿ ಭವಿಷ್ಯದ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ. ಆದರೆ, ಯಾವದೇ ಒತ್ತಡಕ್ಕೊಳಗಾಗದೆ ನಿರಾಳವಾಗಿ ಪರೀಕ್ಷೆಯನ್ನು ಬರೆಯುವ ಮೂಲಕ ಅತ್ಯಧಿಕ ಅಂಕಗಳಿಂದ ಉತ್ತೀರ್ಣರಾಗಲು ಸಾಧ್ಯವಿದೆ ಎಂದು ಉದಾಹರಣೆಯೊಂದಿಗೆ ಮನದಟ್ಟು ಮಾಡಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಯೂತ್ ರೆಡ್ ಕ್ರಾಸ್ ಕಾರ್ಯರ್ಶಿ ಅನುಶ್ರೀ ವಿ. ನಾಯಕ್ ಮಾತನಾಡಿ, ಯೂತ್ ರೆಡ್ ಕ್ರಾಸ್ ನ ಕಾರ್ಯಕ್ರಮಗಳು ಮತ್ತು ವಿದ್ಯಾರ್ಥಿಗಳಲ್ಲಿ ರೆಡ್ ಕ್ರಾಸ್ ಬೀರಿರುವ ಪರಿಣಾಮದ ಬಗ್ಗೆ ಮಾಹಿತಿ ನೀಡಿದರಲ್ಲದೇ, ವಿದ್ಯಾರ್ಥಿ ಜೀವನದಲ್ಲಿಯೇ ರೆಡ್ ಕ್ರಾಸ್‍ನಂಥ ಜಾಗತಿಕ ಸಾಮಾಜಿಕ ಸೇವಾ ಸಂಘಟನೆಗಳಲ್ಲಿ ಸಕ್ರಿಯರಾಗಿ ಸೇವಾ ಮನೋಭಾವ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಾಯಕ ಪೆÇ್ರಫೆಸರ್ ಡಾ. ಎಂ. ವೀಣಾ ಮಾತನಾಡಿ. ಪ್ರತಿ ವಿದ್ಯಾರ್ಥಿಯ ಜೀವನದಲ್ಲಿಯೂ ಶಿಕ್ಷಕರು ಮಾರ್ಗದರ್ಶಕರಂತೆ ಇರುತ್ತಾರೆ. ಶಿಕ್ಷಣದ ಹಂತದಲ್ಲಿ ಗುರುಗಳ ಮಾರ್ಗದರ್ಶನ ಇಷ್ಟವಾಗದೇ ಹೋದರೂ ನಂತರ ವೃತ್ತಿ ಜೀವನದ ಸಂದರ್ಭ ಗುರುಗಳ ಮಾರ್ಗದರ್ಶನ ಎಷ್ಟೊಂದು ಸೂಕ್ತವಾಗಿತ್ತು ಎಂದು ಸ್ಮರಿಸುವಂತಾಗುತ್ತದೆ. ವಿದ್ಯಾರ್ಥಿಗಳ ಶ್ರೆಯೋಭಿವೃದ್ಧಿಯೇ ಶಿಕ್ಷಕರಿಗೆ ಮುಖ್ಯವಾಗಿರುತ್ತದೆ. ಇಂಥವರು ನೀಡುವ ಸಲಹೆ, ಸೂಚನೆಗಳನ್ನು ಪಾಲಿಸಿದರೆ ವಿದ್ಯಾರ್ಥಿಗಳಿಗೆ ವೃತ್ತಿರಂಗದಲ್ಲಿ ಸೋಲಿರುವದಿಲ್ಲ ಎಂದು ಕಿವಿಮಾತು ಹೇಳಿದರು.
ನೂರಾರು ವಿದ್ಯಾರ್ಥಿಗಳು ಕಾರ್ಯಾಗಾರದ ಪ್ರಯೋಜನ ಪಡೆದರು. ಜೂನಿಯರ್ ಕಾಲೇಜಿನ ಪ್ರಾಂಶುಪಾಲ ವಿಜಯ, ಉಪನ್ಯಾಸಕರಾದ ಸೋನಾ ನಾಣಯ್ಯ, ಚಿದಾನಂದ್ ಹಾಜರಿದ್ದರು.