ಮಡಿಕೇರಿ, ಜು.13 : ನವದೆಹಲಿಯ ಕೇಂದ್ರ ಕ್ಷಯ ರೋಗ ವಿಭಾಗದ ಮಾರ್ಗಸೂಚಿಯಂತೆ ಕೊಡಗು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತಾ. 15 ರಿಂದ 27ರವರೆಗೆ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೆ ಪೂರಕವಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಎಸ್.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕ್ಷಯ ರೋಗ ಮಾರ್ಗಸೂಚಿಯನ್ವಯ ಜಿಲ್ಲೆಯ ದುರ್ಬಲ ಮತ್ತು ಹಿಂದುಳಿದ ಪ್ರದೇಶದ ಶೇ.20 ರಷ್ಟು ಜನಸಂಖ್ಯೆಯನ್ನು ಈ ಆಂದೋಲನದಲ್ಲಿ ತಪಾಸಣೆಗೆ ಒಳಪಡಿಸಲಾಗುವದೆಂದು ತಿಳಿಸಿದರು.
ಮಡಿಕೆÉೀರಿ ತಾಲೂಕಿನ 8,916, ವೀರಾಜಪೇಟೆ ತಾಲೂಕಿನ 11,325 ಹಾಗೂ ಸೋಮವಾರಪೇಟೆ ತಾಲೂಕಿನ 15,719 ಮನೆಗಳ ಒಟ್ಟು 1,37,565 ಜನಸಂಖ್ಯೆಯನ್ನು ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮದಡಿ ಪರೀಕ್ಷಿಸಲಾಗುವದು. ಇದಕ್ಕಾಗಿ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆ ಹಾಗೂ ಆರೋಗ್ಯ ಸಹಾಯಕರನ್ನು ಒಳಗೊಂಡ ತಲಾ ಇಬ್ಬರಂತೆ 190 ತಂಡಗಳನ್ನು ರಚಿಸಲಾಗಿದೆ. ಇದರಲ್ಲಿ 59 ತಂಡ ಮಡಿಕೇರಿ ತಾಲೂಕಿಗೆ, ಸೋಮವಾರಪೇಟೆ ತಾಲೂಕಿಗೆ 73 ಹಾಗೂ ವೀರಾಜಪೇಟೆ ತಾಲೂಕಿಗೆ 58 ತಂಡಗಳನ್ನು ನಿಯೋಜಿಸಲಾಗಿದೆ ಎಂದರು.
ಈ ತಂಡಗಳಿಗೆ ಈಗಾಗಲೆ ತಾಲೂಕುವಾರು ತರಬೇತಿಗಳನ್ನು ನೀಡಲಾಗಿದ್ದು, ಈ ತಂಡಗಳು ಮನೆಮನೆಗೆ ಭೇಟಿ ನೀಡಿ ಕ್ಷಯರೋಗದ ಲಕ್ಷಣ, ಚಿಕಿತ್ಸೆಗಳ ಬಗ್ಗೆ ಸಮಾಲೋಚನೆ ನಡೆಸಿ ಅಗತ್ಯವಿದ್ದಲ್ಲಿ ರೋಗಿಗಳ ಕಫದ ಮಾದರಿಗಳನ್ನು ಸ್ಥಳದಲ್ಲೆ ಸಂಗ್ರಹಿಸಿ ಸಮೀಪದ ನಿಯೋಜಿತ ಕಫ ಪರೀಕ್ಷೆ ಕೇಂದ್ರಗಳಿಗೆ ರವಾನಿಸಲಿದ್ದಾರೆ ಶಂಕಿತ ರೋಗಿಗಳ ಕಫದಲ್ಲಿ ಯಾವದೇ ಕ್ಷಯರೋಗದ ಕ್ರಿಮಿಗಳು ಪತ್ತೆಯಾಗದೆ ಇದ್ದಲ್ಲಿ ಅಂತಹವರಿಗೆ ಉಚಿತವಾಗಿ ಕ್ಷ-ಕಿರಣ ಪರೀಕ್ಷೆ ನಡೆಸಿ ರೋಗದ ಲಕ್ಷಣಗಳು ಕಂಡು ಬಂದರೆ ಕಫದ ಮಾದರಿಯನ್ನು ಪುನಃ ಸಂಗ್ರಹಿಸಿ ಜಿಲ್ಲಾ ಆಸ್ಪತ್ರೆಯಲ್ಲಿರುವ ಸಿ.ಬಿ.ನ್ಯಾಟ್ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡಿಸಲಾಗುವದು. ಸಿ.ಬಿ.ನ್ಯಾಟ್ ಯಂತ್ರದಲ್ಲಿ ಕ್ಷಯ ರೋಗ ಪತ್ತೆಯಾದಲ್ಲಿ ಅಂತಹವರಿಗೆ ಉಚಿತÀವಾಗಿ ಚಿಕಿತ್ಸೆಯನ್ನು ಪ್ರಾರಂಭಿಸಲಾಗುವದೆಂದು ವಿವರಿಸಿದರು.
ವಿಶೇಷವಾಗಿ ಜಿಲ್ಲೆಯ ಗಿರಿಜನ ಹಾಡಿಗಳು, ಲೈನ್ ಮನೆಗಳು, ಜೈಲಿನ ಖೈದಿಗಳು, ಕೈಗಾರಿಕಾ ಕೇಂದ್ರಗಳು, ಗಣಿಗಾರಿಕೆಗಳಲ್ಲಿ ಕೆಲಸ ಮಾಡುವವರು, ವೃದ್ಧಾಶ್ರಮಗಳು, ಮರದ ಮಿಲ್‍ಗಳಲ್ಲಿ ಕಾರ್ಯನಿರ್ವಹಿಸುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಬಾರಿ ವಿಶೇಷವಾಗಿ ಸಂಚಾರಿ ಪೊಲೀಸರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಜೊತೆಗೆ ಕ್ಷಯರೋಗಿಗಳು ಇರುವ ಮನೆಯಲ್ಲಿನ 6 ವರ್ಷದ ಒಳಗಿನ ಮಕ್ಕಳನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗುತ್ತದೆಂದು ತಿಳಿಸಿದರು.
ಈಗಾಗಲೆ ಹೆಚ್‍ಐವಿ ಪಾಸಿಟಿವ್ ಮತ್ತು ಮಧುಮೇಹ ಇರುವವರಲ್ಲಿ ಕ್ಷಯರೋಗದ ಸಾಧ್ಯತೆಗಳು ಹೆಚ್ಚಾಗಿರುವದರಿಂದ, ಅಂತಹವರನ್ನು ಕೂಡ ಆಂದೋಲನದ ಸಂದರ್ಭ ಪರೀಕ್ಷೆಗೆ ಒಳಪಡಿಸಲಾಗುತ್ತದೆಂದರು.
2015ಕ್ಕೆ ಕ್ಷಯ ಮುಕ್ತ ಭಾರತ ಚಿಂತನೆ- ವಿಶ್ವ ಆರೋಗ್ಯ ಸಂಸ್ಥೆಯು 2035ನೇ ಸಾಲಿಗೆ ಕ್ಷಯರೋಗವನ್ನು ವಿಶ್ವದಿಂದ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ. ಆದರೆ, ದೇಶದ ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು 2025ರ ಒಳಗಾಗಿ ಕ್ಷಯ ರೋಗದಿಂದ ಮುಕ್ತಗೊಳಿಸುವ ದೃಢಸಂಕಲ್ಪ ತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನವನ್ನು ನಡೆಸಲಾಗುತ್ತಿದೆಯೆಂದು ಹೇಳಿದರು.
ಜಿಲ್ಲೆಯಲ್ಲಿ 2018ರ ಜುಲೈ ತಿಂಗಳಿನಲ್ಲಿ ನಡೆಸಿದ ಆಂದೋಲನ ಸಂದರ್ಭ 12 ಮಂದಿ ಹಾಗೂ ಪ್ರಸಕ್ತ ಸಾಲಿನ ಜನವರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 5 ಮಂದಿ ಕ್ಷಯ ರೋಗಿಗಳು ಪತ್ತೆಯಾಗಿದ್ದಾರೆಂದು ಡಾ. ಶಿವಕುಮಾರ್ ಮಾಹಿತಿ ನೀಡಿದರು.
ರೋಗ ಲಕ್ಷಣ-ನಿಯಂತ್ರಣ- ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಜ್ವರ, ತೂಕ ಕಡಿಮೆಯಾಗುವಿಕೆ ಮತ್ತು ರಾತ್ರಿ ವೇಳೆ ಬೆವರುವಿಕೆ ಲಕ್ಷಣಗಳಿದ್ದಲ್ಲಿ ಅದು ಕ್ಷಯ ರೋಗವಿರಬಹುದು. ಅಂತಹ ಲಕ್ಷಣವಿದ್ದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಕಫ ಮತ್ತು ಕ್ಷ-ಕಿರಣ ಪರೀಕ್ಷೆಗಳನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು. ಕ್ಷಯರೋಗವೆಂದು ದೃಢಪಟ್ಟಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಡಾಟ್ಸ್ ಮುಖಾಂತರ ಉಚಿತವಾಗಿ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ನಡೆಸಲಾಗುವದು. ಅಲ್ಲದೆ, ಡಾಟ್ಸ್ ಕ್ಷಯ ರೋಗಿಗೆ ಚಿಕಿತ್ಸೆಯನ್ನು ನೇರ ನಿಗಾವಣೆ ಮುಖಾಂತರ ನೀಡಲಾಗುವದು. ಕ್ಷಯ ರೋಗಿಗೆ 500 ರೂ.ಗಳನ್ನು ಪೌಷ್ಟಿಕ ಆಹಾರಕ್ಕಾಗಿ ಡಿಬಿಟಿ ಮುಖಾಂತರ ಚಿಕಿತ್ಸೆ ಮುಗಿಯುವವರೆಗೆ ರೋಗಿಯ ಖಾತೆಗೆ ಜಮಾ ಮಾಡಲಾಗುತ್ತದೆಂದು ಶಿವಕುಮಾರ್ ತಿಳಿಸಿದರು.