ಮಡಿಕೇರಿ, ಜು. 8: ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಹೋರಾಟವನ್ನು ಬೆಂಬಲಿಸಿ ನಿರ್ಮಿಸಲಾಗಿರುವ ‘ಬಾಳ್‍ರ ನಡೆಲ್’ ಕಿರುಚಿತ್ರ ಇಂದು ಬಿಡುಗಡೆಗೊಂಡಿತು.
ನಗರದ ಪತ್ರಿಕಾ ಭವನದಲ್ಲಿ ಡಿಜಿ ಕ್ರಿಯೇಷನ್ ನಿರ್ಮಾಣದಲ್ಲಿ ಮೂಡಿಬಂದ ಬಾಳ್‍ರ ನಡೆಲ್ ಕಿರುಚಿತ್ರ ಸಿಡಿ ಬಿಡುಗಡೆಗೊಳಿಸಿ ಮಾತನಾಡಿದ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಅವರು, ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯಿಂದ ಹೋರಾಟ ಸಾರ್ಥಕತೆ ಪಡೆಯುತ್ತದೆ ಎಂದು ಹೇಳಿದರು.
ಚಿತ್ರದಲ್ಲಿ ನೈಜ್ಯತೆ ಇದೆ. ಕೊಡಗಿನ ಜನರ ನೋವಿದೆ. ಚಿತ್ರವನ್ನು ನೋಡಿದವರು ಜಾಗೃತರಾಗುತ್ತಾರೆ. ಜಿಲ್ಲೆಯ ಜನರು ಸೂಕ್ತ ಚಿಕಿತ್ಸೆ ದೊರಕದೆ ಸಾವನ್ನಪ್ಪುತ್ತಿದ್ದಾರೆ. ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ವೈದ್ಯರೂ ಕೂಡ ಜಿಲ್ಲೆಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಗೆ ಸೂಕ್ತ ಸೌಲಭ್ಯವುಳ್ಳ ಮಲ್ಪಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಕೂಗು ಕೇಳಿ ಬಂದಿದ್ದು. ಹೋರಾಟ ಸಾರ್ಥಕತೆ ಪಡೆಯಬೇಕಾದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಮಂಜೂರು ಮಾಡಿ, ಜಿಲ್ಲೆಯ ಜನರ ಕನಸನ್ನು ನನಸು ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಿ. ಸರ್ಕಾರ ಮಟ್ಟದಲ್ಲಿ ವ್ಯವಹರಿಸಬೇಕು. ಜತೆಗೆ ಸಮಿತಿ ರಚಿಸಿ ಸರ್ಕಾರದ ಮಟ್ಟದಲ್ಲಿ ಕೂಗು ತಲಪಬೇಕು. ಕೊಡಗಿನ ಜನ ಜಾತಿ, ಧರ್ಮ ಬದಿಗೊತ್ತಿ ಒಂದಾಗಿ ಕೆಲಸ ಮಾಡಬೇಕು. ಈ ಮೂಲಕ ಜೀವ ಉಳಿವಿಗೆ ಕೈ ಜೋಡಿಸಬೇಕೆಂದು ಕರೆ ನೀಡಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಮಾತನಾಡಿ, ಉತ್ತಮ ಸಂದೇಶದ ಕಿರು ಚಿತ್ರ ಇದಾಗಿದ್ದು. ಸರ್ಕಾರದ ಮಟ್ಟಕ್ಕೆ ಈ ಚಿತ್ರ ತಲಪಿಸುವ ಪ್ರಯತ್ನವಾಗಬೇಕಾಗಿದೆ. ಜಿಲ್ಲೆಯ ಉತ್ತಮ ವಿಷಯ ಹೋರಾಟವಾಗಿ ಪರಿವರ್ತನೆಗೊಂಡಿದ್ದು. ಜಿಲ್ಲೆಯ ಜನ ಕೈ ಜೋಡಿಸಬೇಕಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳುವ ಮೂಲಕ ಬೆಂಬಲಿಸುವವರು ನೈಜ್ಯ ಹೋರಾಟಕ್ಕೆ ಕೈ ಜೋಡಿಸುವದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪ್ರತಿಯೊಂದು ಜೀವವು ಮುಖ್ಯವೇ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಾದರೆ ಜೀವ ಉಳಿಯುತ್ತದೆ. ಆದರೇ ಸೂಕ್ತ ಆಸ್ಪತ್ರೆ ಇಲ್ಲದೇ ಯಾವ ಆಸ್ಪತ್ರೆಗೆ ಕರೆದೊಯ್ಯಬೇಕೆಂದು ತೀರ್ಮಾನಿಸಿ ಮಾರ್ಗ ಮಧ್ಯೆಯೇ ಹಲವರು ಮೃತಪಟ್ಟಿರುವ ನಿದರ್ಶನಗಳು ಕೊಡಗಿನಲ್ಲಿದೆ. ಈ ನಿಟ್ಟಿನಲ್ಲಿ ಕೊಡಗಿಗೆ ಸುಸಜ್ಜಿತ ಆಸ್ಪತ್ರೆ ಬೇಕಾಗಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಜನರ ಕೂಗಿಗೆ ಸ್ಪಂದಿಸುವ ಕೆಲಸವಾಗಬೇಕಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಜನಾಭಿಪ್ರಾಯ ಸಂಗ್ರಹವಾದರೆ ಪ್ರಯೋಜನವಿಲ್ಲ. ಸರ್ಕಾರದ ಮಟ್ಟಕ್ಕೆ ತಲುಪುವ ಸಲುವಾಗಿ ಕೆಲಸವಾಗಬೇಕು ಎಂದರು.
ಯುಕೋ ಸಂಘಟನೆ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷದ ಹೆಸರಿನಲ್ಲಿ ಹೋರಾಟ ವಿಭಜನೆಯಾಗಬಾರದು. ಜನರು ಮತ ಹಾಕಿ ಸುಮ್ಮನೆ ಇರಬಾರದು. ಜನಪ್ರತಿನಿಧಿಗಳಿಂದ ಕೆಲಸ ಮಾಡಿಸಿಕೊಳ್ಳಬೇಕು. ದೃಶ್ಯ ಮಾಧ್ಯಮ ಒಂದು ಪರಿಣಾಮಕಾರಿ ಮಾಧ್ಯಮ. ಕಿರುಚಿತ್ರದ ಮೂಲಕ ಜಾಗೃತಿ ಮೂಡಿಸುತ್ತಿರುವದು ಉತ್ತಮ ಸಂಗತಿ ಎಂದರು.
ನಿರ್ದೇಶಕಿ ಕಳ್ಳಿಚಂಡ ಡೀನಾ ಪ್ರಾಸ್ತವಿಕವಾಗಿ ಮಾತನಾಡಿ, ಹೋರಾಟಕ್ಕೆ ಬೆಂಬಲಿಸುವ ನಿಟ್ಟಿನಲ್ಲಿ 10 ನಿಮಿಷದ ಕಿರುಚಿತ್ರವನ್ನು 10 ಗಂಟೆಗಳ ಕಾಲ ಚಿತ್ರೀಕರಿಸಿ ಬಿಡುಗಡೆ ಮಾಡಲಾಗಿದೆ. ಯಾವದೇ ಲಾಭದ ಉದ್ದೇಶ ಇದರಲಿಲ್ಲ. ವರ್ಷಕ್ಕೆ ಜಿಲ್ಲೆಯಲ್ಲಿ 575 ಅಪಘಾತ ಪ್ರಕರಣ ನಡೆದಿದ್ದು. ಸೂಕ್ತ ಚಿಕಿತ್ಸೆ ಸಿಗದೆ 87 ಸಾವು ಸಂಭವಿಸಿದೆ. ಜಿಲ್ಲೆಗೆ ಆಸ್ಪತ್ರೆಯ ಅವಶ್ಯಕತೆ ಹೆಚ್ಚಿದೆ ಎಂದು ಹೇಳಿದರು.
ನಿರ್ದೇಶಕಿ ತಡಿಯಂಗಡ ಗಾನ, ಕಲಾವಿದರಾದ ನೆರವಂಡ ಉಮೇಶ್, ತಾತಂಡ ಪ್ರಭಾ ನಾಣಯ್ಯ, ಕಟ್ಟೇರ ವಿದ್ಯಾ, ಮಲ್ಲಮಾಡ ಶಾಮಲ, ಇದ್ದರು.