ಮಡಿಕೇರಿ, ಜು. 7: ಕಳೆದ ವರ್ಷ ಪ್ರಾಕೃತಿಕ ವಿಕೋಪದಿಂದ ಹಾನಿಗೊಂಡಿರುವ ಪ್ರದೇಶಗಳ ಅನೇಕ ಶಾಲೆಗಳು ಮತ್ತು ಅಂಗನವಾಡಿ ಕಟ್ಟಡಗಳ ಅಭಿವೃದ್ಧಿಗೆ ಜಿಲ್ಲಾ ಆಡಳಿತದಿಂದ ರೂ. 2 ರಿಂದ 2.50 ಲಕ್ಷದ ತನಕ ಹಣ ಕಲ್ಪಿಸಿದ್ದರೂ; ಈ ಹಣ ಎಲ್ಲಿ ಬಳಕೆಯಾಗಿದೆ ಎಂಬ ಪ್ರಶ್ನೆಯೊಂದಿಗೆ; ಕಾಂಡನಕೊಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ತೀರಾ ಅಪಾಯಕಾರಿ ಸ್ಥಿತಿಯಲ್ಲಿ ಕಾಯಕಲ್ಪಕ್ಕೆ ಕಾಯುತ್ತಿದೆ.ಸೋಮವಾರಪೇಟೆ ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಅವರೇ ಈ ಬಗ್ಗೆ ಉಲ್ಲೇಖಿಸಿದ್ದು, ಸರಕಾರಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳ ದುರಸ್ತಿಗೆ ಬಿಡುಗಡೆಗೊಳಿಸಿರುವ ಹಣ ಸದ್ಭಳಕೆ ಆಗದಿರುವ ಬಗ್ಗೆ ಬೇಸರÀ ವ್ಯಕ್ತಪಡಿಸಿದ್ದಾರೆ. ಈ ಅಂಶವನ್ನು ಗಮನಿಸಿದರೆ; ಕಾಂಡನಕೊಲ್ಲಿ ಶಾಲೆಯು ಮಳೆಗಾಲದ ನಡುವೆ ಅಲ್ಲಿನ ಶಿಕ್ಷಕರು ಹಾಗೂ ಮಕ್ಕಳು ಆತಂಕದ ನಡುವೆ ದಿನಗಳನ್ನು ಕಳೆಯುವಂತಾಗಿದೆ.ಶಾಲೆಯ ಹಿನ್ನೆಲೆ : ಮಾದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಂಟಿಕೊಪ್ಪ ಹಾಗೂ ಕೆದಕಲ್ ಗ್ರಾ.ಪಂ. ಅಂಚಿನಲ್ಲಿರುವ ಈ ಸರಕಾರಿ ಶಾಲೆ 1907ರಲ್ಲಿ ಪ್ರಾರಂಭಗೊಂಡು; 2007ರಲ್ಲಿ ಶತಮಾನೋತ್ಸವ ಕಂಡಿದೆ. ಇಂದಿಗೆ ಸರಿ ಸುಮಾರು 112 ವರ್ಷಗಳನ್ನು ದಾಟಿರುವ ಈ ಶಾಲೆ ಇಂದು ಮಕ್ಕಳ ಕೊರತೆ ಅನುಭವಿಸುವಂತಾಗಿದೆ.

ರಸ್ತೆ ಸಂಪರ್ಕ ಸ್ಥಗಿತ : ಕಳೆದ ಮಳೆಗಾಲ ಸೋಮವಾರಪೇಟೆ ರಸ್ತೆ ಹಾಲೇರಿ ಬಳಿ ಭೂಕುಸಿತದಿಂದ ಸಂಪರ್ಕ ಕಡಿತಗೊಂಡರೆ; ಹಾಲೇರಿ ಭದ್ರಕಾಳಿ ದೇವಾಲಯದ ಬಳಿ ಕೆರೆ ಒಡೆದು ರಸ್ತೆ ಕೊಚ್ಚಿ ಹೋಗಿತ್ತು. ಇನ್ನೊಂದೆಡೆ ಸುಂಟಿಕೊಪ್ಪ - ಪಾಪಲಿಕಾಡು ತೋಟದ ಮಾರ್ಗ ಕುಸಿದು ಆ ಮೂಲಕವೂ ರಸ್ತೆ ಇಲ್ಲವಾಗಿತ್ತು.

ಪರಿಣಾಮ ತಿಂಗಳುಗಟ್ಟಲೆ ಈ ಶಾಲೆ ಬಾಗಿಲು ಮುಚ್ಚಿಕೊಂಡು; ಮಕ್ಕಂದೂರು

(ಮೊದಲ ಪುಟದಿಂದ) ಶಾಲೆಯಲ್ಲಿ ವಸತಿ ಸಹಿತ ಸುಮಾರು 3 ತಿಂಗಳು ಮಕ್ಕಳಿಗೆ ಪಾಠದ ವ್ಯವಸ್ಥೆ ರೂಪಿಸಲಾಗಿತ್ತು. ಹೀಗಾಗಿ 20ಕ್ಕೂ ಅಧಿಕ ಮಕ್ಕಳನ್ನು ಪೋಷಕರು ಬೇರೆಡೆ ಶಾಲೆಗೆ ಸೇರಿಸಿದ್ದರು.

ಶಾಲಾ ಕಟ್ಟಡ ದುರಸ್ತಿ : ಮಳೆಗಾಲದ ಬಳಿಕ ಸರಕಾರದಿಂದ ಅಂದಿನ ಜಿಲ್ಲಾಧಿಕಾರಿ ಶ್ರೀವಿದ್ಯಾ ಕಲ್ಪಿಸಿದ್ದ ಹಣದೊಂದಿಗೆ ಶಾಲಾ ಕಟ್ಟಡ ದುರಸ್ತಿ ಕೈಗೊಳ್ಳಲಾಗಿದೆ ಎಂದು ಮೇಲ್ನೋಟಕ್ಕೆ ಮಾಹಿತಿ ಲಭಿಸುವಂತಾಗಿದೆ.

ಅಂಗನವಾಡಿ : ಶಾಲೆಯ ಮತ್ತೊಂದು ಮೂಲೆಯಲ್ಲಿರುವ ಅಂಗನವಾಡಿ ಕಟ್ಟಡಕ್ಕೆ ಹತ್ತಾರು ಹೆಂಚು ಹಾಗೂ ಮೂರ್ನಾಲ್ಕು ಬಾರಿ ಪಟ್ಟಿಯನ್ನು ಮೇಲ್ಚಾವಣಿಯಲ್ಲಿ ಬದಲಾಯಿಸಿದಷ್ಟೇ ಕಾಣ ಬರುತ್ತಿದ್ದು, ಶಾಲೆ ಮತ್ತು ಅಂಗನವಾಡಿಗಾಗಿ ಸುಮಾರು 5 ಲಕ್ಷದಷ್ಟು ಖರ್ಚು ಮಾಡಿರುವ ಮಾತಿದೆ.

ಆತಂಕಕ್ಕೆ ಕೈಗನ್ನಡಿ : ಇಂತಹ ಪರಿಸ್ಥಿತಿ ನಡುವೆ; ಶಾಲಾ ಕಟ್ಟಡದ ಅಲ್ಲಲ್ಲಿ ಎರಡು ಗೋಡೆಗಳು ಸೇರುವ ಮೂಲೆಯು; ಅಡಿಪಾಯದಿಂದ ಮೇಲ್ಚಾವಣಿ ತನಕ ಮುಷ್ಠಿ ಗಾತ್ರದ ಬಿರುಕು ಉಂಟಾಗಿರುವದು ಕಂಡು ಬಂದಿದ್ದು, ಇಲಾಖೆಯ ಮಂದಿ ತಿರುಗಿಯೂ ನೋಡಿದಂತಿಲ್ಲ. ಬಹುತೇಕ ಕಿಟಕಿ, ಬಾಗಿಲುಗಳ ಸಹಿತ ಶಾಲಾ ಕೊಠಡಿಗಳು ಧರಾಶಾಯಿಯಾಗಲು ದಿನಗಳನ್ನು ಎಣಿಸುತ್ತಿವೆ.

ಅಮಾಯಕ ಮಕ್ಕಳು : ಈ ಶಾಲೆಗೆ ಯಾವ ಮಾರ್ಗದಲ್ಲೂ ರಸ್ತೆ ಸಂಪರ್ಕದೊಂದಿಗೆ ಸಾರಿಗೆ ವ್ಯವಸ್ಥೆಯಿಲ್ಲದೆ; ನಿತ್ಯವೂ ಮುಖ್ಯ ಹೆದ್ದಾರಿಯಿಂದ ಬಸ್ ಇಳಿದು ಮೂರ್ನಾಲ್ಕು ಕಿ.ಮೀ. ದೂರ ಶಿಕ್ಷಕರ ಸಹಿತ ಮಕ್ಕಳು ಕಾಲ್ನಡಿಗೆಯಲ್ಲಿ ತೆರಳುವಂತಾಗಿದೆ. ಪ್ರಸಕ್ತ ಸರಕಾರದ ನಿರ್ಲಕ್ಷ್ಯದಿಂದ ಇನ್ನು ಕೂಡ ಈ ಮಕ್ಕಳಿಗೆ ಸಮವಸ್ತ್ರ ಸಹಿತ ಪಾದರಕ್ಷೆ ಇತ್ಯಾದಿ ಯಾವ ಸೌಲಭ್ಯ ಲಭಿಸಿಲ್ಲ. ಬಹುತೇಕ ಕಾಫಿ ತೋಟಗಳ ಕಾರ್ಮಿಕ ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದು, ನಿತ್ಯ ಕಷ್ಟ ಕೋಟಲೆಗಳ ನಡುವೆ ಶಿಕ್ಷಣ ಪಡೆಯುವ ಪರಿ ಗೋಚರಿಸಲಿದೆ. ಒಟ್ಟು 44 ಮಕ್ಕಳು ಮಾತ್ರ ಈ ಸಾಲಿನಲ್ಲಿ ಶಾಲೆಗೆ ಬರುತ್ತಿದ್ದು, ಈ ಪೈಕಿ ಸುಮಾರು ಮೂವತ್ತು ಮಕ್ಕಳು ಪರಿಶಿಷ್ಟ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಈ ಶಾಲೆಯೊಂದಿಗೆ ಮುಗ್ಧ ಮಕ್ಕಳಿಗೆ ಮೂಲಭೂತ ಸೌಕರ್ಯದೊಂದಿಗೆ ಅಪಾಯದಲ್ಲಿರುವ ಕಟ್ಟಡಕ್ಕೆ ಕಾಯಕಲ್ಪ ಅಗತ್ಯವೆನಿಸಿದ್ದು, ತುರ್ತು ಕ್ರಮ ಕೈಗೊಳ್ಳಬೇಕಿದೆ. - ಶ್ರೀಸುತ