ಸಿದ್ದಾಪುರ, ಜು. 8: ಕರುವಿನ ಮೇಲೆ ಕಿರುಬವೊಂದು ದಾಳಿ ನಡೆಸಿದ ಪರಿಣಾಮ ಕರು ಗಾಯಗೊಂಡಿರುವ ಘಟನೆ ಚೆನ್ನಂಗಿ ಗುಡ್ಲೂರಿನಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.

ಗುಡ್ಲೂರು ನಿವಾಸಿ ಜಿ.ಬಿ ಸೋಮಯ್ಯ ಎಂಬವರ ಕೊಟ್ಟಿಗೆಯಲ್ಲಿದ್ದ ಹಾಲು ಕರೆಯುವ ಹಸುವಿನೊಂದಿಗೆ ಮಲಗಿದ್ದ 3 ತಿಂಗಳ ಕರುವಿನ ಮೇಲೆ ಕಿರುಬ ಧಾಳಿ ನಡೆಸಿ, ಕುತ್ತಿಗೆ ಭಾಗಕ್ಕೆ ಗಾಯಗೊಳಿಸಿದೆ. ಈ ಸಂದರ್ಭದಲ್ಲಿ ಇದನ್ನು ಕಂಡ ಹಸು, ಬೊಬ್ಬಿಟ್ಟಾಗ ಕಿರುಬ ಸ್ಥಳದಿಂದ ಪರಾರಿಯಾಗಿದೆ. ಹಸುವಿನ ಬೊಬ್ಬೆ ಕೇಳಿದ ಸೋಮಯ್ಯ, ಮನೆಯಿಂದ ಹೊರಕ್ಕೆ ಬಂದು ನೋಡಿದಾಗ ಕರುವಿನ ಕುತ್ತಿಗೆ ಭಾಗಕ್ಕೆ ಗಾಯವಾಗಿತ್ತು. ಗಾಯಗೊಂಡ ಕರುವು ಹಾಲು ಹಾಗೂ ಗಂಜಿ ಕುಡಿಯದೆ ಗಂಭೀರ ಸ್ಥಿತಿಯಲ್ಲಿದೆ. ಕಳೆದೆರೆದು ದಿನಗಳ ಹಿಂದೆ ಮಾಲ್ದಾರೆಯ ಸುಶೀಲ ಎಂಬವರ ನಾಯಿಯ ಮೇಲೆ ಕಿರುಬ ಧಾಳಿ ನಡೆಸಿ ಗಾಯಗೊಳಿಸಿರುವ ಘಟನೆ ನಡೆದಿತ್ತು. ಇದೀಗ ಮತ್ತೊಮ್ಮೆ ಕಿರುಬ ಕರುವಿನ ಮೇಲೆ ಧಾಳಿ ನಡೆಸಿದ ಘಟನೆಯಿಂದಾಗಿ ಗ್ರಾಮಸ್ಥರು ಭಯಬೀತರಾಗಿದ್ದಾರೆ.

ಸೆರೆ ಹಿಡಿಯಲು ಒತ್ತಾಯ: ಕಳೆದ ಕೆಲವು ದಿನಗಳಿಂದ ಮಾಲ್ದಾರೆ, ಗುಡ್ಲೂರು ವ್ಯಾಪ್ತಿಯಲ್ಲಿ ಕಿರುಬವೊಂದು ರಾತ್ರಿ ಸಮಯದಲ್ಲಿ ಮನೆಗಳ ಬಳಿ ಓಡಾಡುತ್ತಿದ್ದು, ಸಾಕು ಪ್ರಾಣಿಗಳಿಗೆ ಉಪಟಳ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮನೆಯಿಂದ ಹೊರಬರಲು ಭಯವಾಗುತ್ತಿದ್ದು, ಉಪಟಳ ನೀಡುವ ಕಿರುಬನನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.