*ಸಿದ್ದಾಪುರ, ಜು. 8: ಸುಂಟಿಕೊಪ್ಪ ಹೋಬಳಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈರಳೆ ಗ್ರಾಮದಲ್ಲಿರುವ 0.98 ಎಕರೆ ಅರಣ್ಯ ಇಲಾಖೆಗೆ ಸೇರಿದ ಜಾಗವು ಒತ್ತುವರಿಯಾಗಿದ್ದು ಈಚೆಗೆ ನಡೆದ ಸೋಮವಾರಪೇಟೆ ತಾಲೂಕು ಪಂಚಾಯತ್ ಕೆಡಿಪಿ ಸಭೆಯಲ್ಲಿಯೂ ಜಾಗ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಬಿಸಿ ಬಿಸಿ ಚರ್ಚೆ ನಡೆದಿದೆ.
ಅರಣ್ಯ ಪ್ರದೇಶದ ಜಾಗವನ್ನು ಸ್ಥಳೀಯ ವ್ಯಕ್ತಿಯೊಬ್ಬರು ಅತಿಕ್ರಮಿಸಿ ಕಾಫಿ ತೋಟ ಮಾಡಿರುವ ಬಗ್ಗೆ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ ಸಂದರ್ಭ ಜಾಗವು ಅರಣ್ಯ ಇಲಾಖೆಗೆ ಸೇರಿದಾಗಿದೆ ಎಂಬ ತೀರ್ಪು ಬಂದಿದ್ದು, ನಂತರ ಕೆಡಿಪಿ ಸಭೆಯಲ್ಲಿ ಜಾಗ ಒತ್ತುವರಿಯಾಗಿರುವದರ ಬಗ್ಗೆ ಸೋಮವಾರಪೇಟೆ ತಹಶೀಲ್ದಾರ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಜಾಗ ಒತ್ತುವರಿಯಾಗಿ ಖಾತೆ ಬದಲಾವಣೆ ಕೂಡ ಆಗಿದೆÉ ಎಂದು ಲಿಖಿತ ಹೇಳಿಕೆ ನೀಡಿದ್ದಾರೆ.
ಚೆಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಈರಳೆಯ ಸರ್ವೆ ನಂಬರ್ 272ರಲ್ಲಿ 0.98 ಎಕರೆ ಜಾಗವು ಊರುಗುಪ್ಪೆ ಎಂದು ದಾಖಲಾಗಿದೆ. ಕಳೆದ ಅನೇಕ ವರ್ಷಗಳ ಹಿಂದಿನವರೆಗೂ ಈ ಜಾಗ ‘ಊರು ಮಂದ್’ ಆಗಿದ್ದು, ವರ್ಷಂಪ್ರತಿ ಸಾಂಪ್ರದಾಯಿಕ ಮತ್ತು ಪಾರಂಪರಿಕ ಆಚರಣೆಗಳನ್ನು ಆಚರಿಸಿಕೊಂಡು ಬರುತ್ತಿದ್ದರು.
ಈ ಜಾಗವನ್ನು ಸ್ಥಳೀಯ ನಿವಾಸಿಯೊಬ್ಬರು ಅತಿಕ್ರಮಿಸಿಕೊಂಡು ಕಾಫಿ ತೋಟ ಮಾಡಿದ್ದಾರೆ ಎಂದು ತಾಲೂಕು ಪಂಚಾಯತ್ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ದೂರು ಪರಿಶೀಲಿಸಿದ ಉಪವಿಭಾಗಾಧಿಕಾರಿ ಸದರಿ ಜಾಗವನ್ನು ಹಿಂದಿನಂತೆ ಊರು ಮಂದ್‍ನ್ನಾಗಿಯೇ ಮುಂದುವರಿಸಬೇಕು ಮತ್ತು ಒತ್ತುವರಿಮಾಡಿಕೊಂಡವರಿಂದ ಬಿಡಿಸಿಕೊಳ್ಳಬೇಕು ಎಂದು ಆದೇಶಿಸಿದ್ದರು.
ಕಳೆದ ಜೂನ್ 20 ರಂದು ನಡೆದ ಸೋಮವಾರಪೇಟೆ ತಾಲೂಕು ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ 1979-2001 ನೇ ಸಾಲಿನಲ್ಲಿ ಬಾಣೆ ಜಮಾಬಂದಿಯಂತೆ ಪೈಸಾರಿ ನಿಬಂಧನೆಯುಳ್ಳ ಜಾಗವಾಗಿದ್ದು, 2006 ಫೆಬ್ರವರಿ 25ರಂದು ಸದರಿ ಖಾತೆದಾರರಿಗೆ (53)96/98, ಎಂ.ಆರ್, ಸಂಖ್ಯೆ 16/05-06 ರಂತೆ ಖಾತೆ ವರ್ಗಾವಣೆಯಾಗಿದೆ ಎಂದು ಲಿಖಿತ ಹೇಳಿಕೆ ನೀಡಿದ್ದಾರೆ. ಈ ವಿಷಯ ಬಹಿರಂಗಗೊಂಡ ಬೆನ್ನಲೇ ಕಳೆದ 15 ವರ್ಷಗಳಿಂದ ಬಲ್ಲಾರಂಡ ಮಣಿ ಉತ್ತಪ್ಪ ಸರ್ಕಾರಕ್ಕೆ ಸೇರಿರುವ ಒತ್ತುವರಿ ಜಾಗವನ್ನು ಒತ್ತುವರಿದಾರರಿಂದ ಮುಕ್ತಗೊಳಿಸಲು ಪ್ರಯತ್ನಿಸುತ್ತಿದ್ದು; ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದ್ದಾರೆ.