ಮಡಿಕೇರಿ, ಜು. 8: ಲಯನ್ಸ್ ಕ್ಲಬ್ ಆಫ್ ಮರ್ಕರಾ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಕೂಟುಹೊಳೆ ಸಮೀಪದಲ್ಲಿರುವ ಆಹಾನ ಹಿಲ್ ರೆಸಾರ್ಟ್‍ನಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಎಲ್. ಮೋಹನ್ ಕುಮಾರ್, ಕಾರ್ಯದರ್ಶಿಯಾಗಿ ಕೆ. ಮಧುಕರ್ ನೇತೃತ್ವದ ಆಡಳಿತ ಮಂಡಳಿಗೆ ಲಯನ್ಸ್ ಜಿಲ್ಲಾ ಉಪರಾಜ್ಯಪಾಲ ವಸಂತಕುಮಾರ ಶೆಟ್ಟಿ ಪದಗ್ರಹಣ ನೆರವೇರಿಸಿದರು. ಒಂದು ವರ್ಷ ಅವಧಿಯಲ್ಲಿ ಲಯನ್ಸ್ ಸಂಸ್ಥೆಗೆ ಒಳ್ಳೆಯ ಹೆಸರು ಬರುವ ರೀತಿ ಕಾರ್ಯನಿರ್ವಹಿಸುವಂತೆ ಮಾರ್ಗದರ್ಶನ ಮಾಡಿದರು.

ಲಯನೆಸ್ (ಮಹಿಳಾ ಸದಸ್ಯೆಯರು) ವ್ಯವಸ್ಥೆ ತೆಗೆದು ಹಾಕಿರುವದರಿಂದ ಲಯನೆಸ್‍ಗಳನ್ನು ಲಯನ್‍ಗಳಾಗಿ ಸದಸ್ಯತ್ವ ನೀಡಬೇಕು. ಈ ಪ್ರಕ್ರಿಯೆಗೆ ಹೆಚ್ಚಿನ ಒತ್ತು ನೀಡಬೇಕು. ವಿವಿಧ ವಲಯದಲ್ಲಿರುವವರನ್ನು ಲಯನ್ಸ್‍ಗಳನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಸೂಚಿಸಿದರು.

ನೂತನ ಪದಾಧಿಕಾರಿಗಳಾಗಿ ನಟರಾಜ್ ಕೆಸ್ತೂರು, ಡಿ.ಜಿ. ಕಿಶೋರ್, ರೆ.ಫಾ. ಇಗ್ನೇಶ್ ಮಸ್ಕರೇನಸ್, ಬಿ.ವಿ. ಮೋಹನ್‍ದಾಸ್, ಜೆ.ವಿ. ಕೋಠಿ, ಎ.ಕೆ. ದಿನೇಶ್ ರಾವ್, ಅನಿತಾ ಸೋಮಣ್ಣ, ಎನ್.ಬಿ. ರವಿ, ಬಾಬುಚಂದ್ರ ಉಳ್ಳಾಗಡ್ಡಿ, ಎಂ.ಎ. ನಿರಂಜನ್, ಕೆ.ಕೆ. ದಾಮೋದರ್, ಕೆ.ಟಿ. ಬೇಬಿ ಮ್ಯಾಥ್ಯೂ, ಎ.ಕೆ. ನವೀನ್, ಸಂತೋಷ್, ಅನ್ವೇಕರ್, ಎಚ್.ಎಸ್. ಸಂಜಯ್, ಮಧುಕರ್ ಶೇಠ್, ಬಿ.ಸಿ. ನಂಜಪ್ಪ ಕಾರ್ಯನಿರ್ವಹಿಸಲಿದ್ದಾರೆ.

52 ವರ್ಷ ಇತಿಹಾಸ ಹೊಂದಿರುವ ಲಯನ್ಸ್ ಕ್ಲಬ್ ಆಫ್ ಮರ್ಕರಾ ಅಧ್ಯಕ್ಷನಾಗಿರುವದು ಹೆಮ್ಮೆಯ ವಿಚಾರ. ಬಡವ - ಬಲ್ಲಿದರ ಸೇವೆಗೆ ಅಧಿಕಾರ ಬಳಸುತ್ತೇನೆ ಎಂದು ಮೋಹನ್ ಕುಮಾರ್ ಹೇಳಿದರು. ನಿರ್ಗಮಿತ ಅಧ್ಯಕ್ಷ ಕೆ.ಕೆ. ದಾಮೋದರ್ ಅಧ್ಯಕ್ಷತೆಯಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಪ್ರಾಂತೀಯ ಅಧ್ಯಕ್ಷ ಪಿ.ಪಿ. ಸೋಮಣ್ಣ, ಪ್ರಮುಖರಾದ ಡಾ. ದಿವ್ಯಾ ಶೆಟ್ಟಿ, ವನಜಾಕ್ಷಿ, ಅರುಣಾ ಮೋಹನ್, ಮಾಜಿ ಅಧ್ಯಕ್ಷ ಕನ್ನಂಡ ಬೊಳ್ಳಪ್ಪ ಇದ್ದರು.

ಕನ್ನಂಡ ಕವಿತಾ ಬೊಳ್ಳಪ್ಪ, ಗೀತಾ ಮಧುಕರ್, ಅರುಣಾ ಮೋಹನ್ ಅವರಿಗೆ ಲಯನ್ಸ್ ಕ್ಲಬ್ ಆಫ್ ಮರ್ಕರಾ ನೂತನ ಸದಸ್ಯತ್ವ ನೀಡಲಾಯಿತು. ಕೆ. ಮಧುಕರ್ ನಿರೂಪಿಸಿದರು. ಸ್ವಪ್ನಾ - ಸ್ನೇಹ ಪ್ರಾರ್ಥಿಸಿದರು.