ಕುಶಾಲನಗರ: ಕುಶಾಲನಗರ ಸಮೀಪದ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಡಿವೈಎಸ್ಪಿ ಪಿ.ಕೆ. ಮುರಳೀಧರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಶಿಸ್ತು ಮತ್ತು ಶ್ರದ್ಧೆಯನ್ನು ಅಳವಡಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ನಿರಂತರ ಪ್ರಯತ್ನದಿಂದ ತಮ್ಮ ಗುರಿಯನ್ನು ಸಾಕಾರಗೊಳಿಸಲು ಶ್ರಮಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿವೃತ್ತ ಅಧಿಕಾರಿ ಶಾರದಾ ರಾಮನ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ. ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಾಮಾಜಿಕ ಬದ್ಧತೆ ತೋರಬೇಕಿದೆ ಎಂದರು.
ಸಂಸ್ಥೆಯ ಪ್ರಾಂಶುಪಾಲರಾದ ಜೀಜಿ ಜೋಸ್ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಭೋದಿಸಿದರು. ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಕನಕರಾಜು, ಖಜಾಂಚಿ ಪುಲಿಯಂಡ ರಾಮ್ ದೇವಯ್ಯ, ಕಾರ್ಯದರ್ಶಿ ಅನಂತ ಪದ್ಮನಾಭ, ಟ್ರಸ್ಟಿಗಳಾದ ಮನು ಅಯ್ಯಪ್ಪ, ಶೋಭಾ ಅನಂತ ಪದ್ಮನಾಭ ಇದ್ದರು. ವಿದ್ಯಾರ್ಥಿಗಳಿಂದ ಪಥಸಂಚನ ನಡೆಯಿತು.
ಮಡಿಕೇರಿ: ಸಂಪಾಜೆ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹದಿಹರೆಯದ ದೈಹಿಕ, ಮಾನಸಿಕ ಬದಲಾವಣೆ, ಆರೋಗ್ಯ ಸಮಸ್ಯೆಗಳು, ಪರಿಹಾರ ಶುಚಿತ್ವ ಕುರಿತು ಡಾ. ಪ್ರಸನ್ನ ಮತ್ತು ಡಾ. ಮಧು ಪ್ರಸನ್ನ ಇವರುಗಳು ಶ್ರೀ ಧರ್ಮಸ್ಥಳ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಹಾಸನ ಆಸ್ಪತ್ರೆ ವತಿಯಿಂದ ಅರಿವು ಕಾರ್ಯಕ್ರಮ ನಡೆಸಿಕೊಟ್ಟರು. ಸಂಪಾಜೆ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರು, ಸದಸ್ಯರು, ಬೋಧಕ, ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕೂಡಿಗೆ: ಕೂಡಿಗೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಕುಶಾಲನಗರ ವಾಸವಿ ಸಂಘದ ವತಿಯಿಂದ ಲೇಖನಿ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು.
ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಲಕ್ಷ್ಮಿ ರವಿಚಂದ್ರ, ಕಾರ್ಯದರ್ಶಿ ಕನ್ನಿಕಾನಾಗ್, ನಿಕರ್ಟಪೂರ್ವ ಅಧ್ಯಕ್ಷೆ ಕುಸುಮ ಸುರೇಶ, ಕ್ರೀಡಾ ಕಾರ್ಯದರ್ಶಿ ಜಯಶ್ರೀ ಕುಮಾರ, ಸಾಂಸ್ಕøತಿಕ ಕಾರ್ಯದರ್ಶಿ ದಿವ್ಯ ಸುಜಯ, ನಿರ್ದೇಶಕರಾದ ಪೂಜಾ ವೃಶಾಕ್, ಹೇಮಾ ರಾಘವೇಂದ್ರ, ಉಮಾ ಶ್ರೀನಾಥ, ಶಾಲಾ ಮುಖ್ಯ ಶಿಕ್ಷಕಿ ವಾಣಿ ಹಾಗೂ ಸಹ ಶಿಕ್ಷಕರು, ಶಾಲಾ ಮಕ್ಕಳು ಹಾಜರಿದ್ದರು.
ಸುಂಟಿಕೊಪ್ಪ: ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮ ನಡೆಯಿತು. ಆರೋಗ್ಯ ಮತ್ತು ಕುಟುಂಬ ಇಲಾಖೆ, ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸೇವ್ ಫೌಂಡೇಶನ್ ಆಶ್ರಯದಲ್ಲಿ ಹರದೂರು ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಹಮ್ಮಿಕೊಳ್ಳಲಾಯಿತು. ಗ್ರಾ.ಪಂ. ಸದಸ್ಯ ಎ.ಸಿ. ಸುಬ್ಬಯ್ಯ, ವೈದ್ಯಾಧಿಕಾರಿ ಡಾ. ಪ್ರಾಣೇಶ್ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಸಹಾಯಕಿ ಬಿ.ಟಿ. ಚಂದ್ರಮ್ಮ, ಚಂದ್ರೇಶ್, ಬಿ.ಎಂ. ಯೋಗಿನಿ, ಕಾರ್ಯಕರ್ತೆಯರು, ಮಕ್ಕಳ ತಾಯಂದಿರು, ಶುಶ್ರೂಷಕಿಯರು ಹಾಜರಿದ್ದರು.ಶ್ರೀಮಂಗಲ: ಶ್ರೀಮಂಗಲ ವಿದ್ಯಾಸಂಸ್ಥೆಯಲ್ಲಿ 34 ವರ್ಷಗಳ ಕಾಲ ದೈಹಿಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಚೇಂದಿರ ಎಂ. ಬೋಪಣ್ಣ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ಮದ್ರೀರ ಪಿ. ವಿಷ್ಣು ವಹಿಸಿದ್ದರು.
ವಿದ್ಯಾರ್ಥಿಗಳಾದ ಕಲ್ಪನಾ ಹಾಗೂ ಪ್ರೀತಿ ಪ್ರಾರ್ಥಿಸಿದರು. ಶಿಕ್ಷಕಿ ಚಕ್ಕೇರ ಪೊನ್ನಮ್ಮ ಸ್ವಾಗತಿಸಿದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಮಚ್ಚಮಾಡ ಸುಬ್ರಮಣಿ, ಕಟ್ಟೇರ ಸುಶೀಲ, ಖಜಾಂಚಿ ಸಂದೀಪ್, ನಿರ್ದೇಶಕರಾದ ಕುಂಞಂಗಡ ರಮೇಶ್, ಕಳ್ಳಂಗಡ ರಜಿತ್ ಪೂವಣ್ಣ, ಕಾಲೇಜಿನ ಪ್ರಾಂಶುಪಾಲ ಕೋಟ್ರಂಗಡ ಚಂಗಪ್ಪ ಉಪಸ್ಥಿತರಿದ್ದರು.
ವೀರಾಜಪೇಟೆ: ಪತ್ರಿಕಾ ಕ್ಷೇತ್ರಕ್ಕೆ ಸಾಂವಿಧಾನಿಕ ಭದ್ರತೆ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದಡಿಯಲ್ಲಿ ಸಮಾಜವನ್ನು ತಿದ್ದುವ ಕೆಲಸ ಮಾಡಲಾಗುತ್ತಿದೆ ಎಂದು ಚಿಕ್ಕ ಅಳವಾರದ ಸ್ನಾತಕೋತರ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಜಮೀರ್ ಅಹಮದ್ ಹೇಳಿದರು.
ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘ ಹಾಗೂ ವೀರಾಜಪೇಟೆ ಕಾವೇರಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಕಾವೇರಿ ಕಾಲೇಜಿನ ಸಭಾಂಗಣದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ನಡೆಸಿದ ಆಶುಭಾಷಣ ಸ್ಪರ್ಧೆಯಲ್ಲಿ ಮಾತನಾಡಿದ ಅವರು, ಪತ್ರಕರ್ತನಿಗೆ ಸಹನೆ, ಧೈರ್ಯ, ಶಿಸ್ತು, ಬದ್ಧತೆ ಸಮರ್ಪಣಾ ಮನೋಭಾವ ಇರಬೇಕು ಎಂದರು.
ಕಾವೇರಿ ಕಾಲೇಜು ಪ್ರಾಂಶುಪಾಲೆ ಪ್ರೊ. ಕಮಾಲಾಕ್ಷಿ ಮಾತನಾಡಿ, ಪತ್ರಿಕೋದ್ಯಮ ರಾಷ್ಟ್ರದ ಜೀವಾಳ. ಒಂದು ಕಡೆಯಿಂದ ಮತ್ತೊಂದು ಕಡೆಗೆ ವಿಷಯವನ್ನು ತಲಪಿಸುತ್ತದೆ. ಪೈಪೋಟಿಗಳು ಇರುವ ಕ್ಷೇತ್ರಗಳಲ್ಲಿ ಯಾರಿಗೂ ಬೇಸರವಾಗದ ರೀತಿಯಲ್ಲಿ ಸುದ್ದಿಯನ್ನು ಬಿತ್ತರಿಸಿದರೆ ಎಲ್ಲರಿಗೂ ಒಳಿತಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರ್ಯೆ ಮಾತನಾಡಿ, ಒಬ್ಬ ಪತ್ರಕರ್ತನಿಗೆ ಆಸಕ್ತಿ, ಉತ್ಸಾಹ, ವಿಚಾರಗಳನ್ನು ಗ್ರಹಿಸಿ ಕರಗತ ಮಾಡಿಕೊಳ್ಳುವ ಎದೆಗಾರಿಕೆ ಇರಬೇಕು ಎಂದರು. ವೇದಿಕೆಯಲ್ಲಿ ಉಪನ್ಯಾಸಕ ಶಂಕರ್‍ನಾರಾಯಣ್, ಕಾವೇರಿ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಐನಂಡ ಸೋಮಣ್ಣ, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪಾರ್ಥ ಚಿಣ್ಣಪ್ಪ, ತಾಲೂಕು ಸಂಘದ ಉಪಾಧ್ಯಕ್ಷ ಆರ್. ಸುಬ್ರಮಣಿ, ಕಾರ್ಯದರ್ಶಿ ಹೆಚ್.ಕೆ. ಜಗದೀಶ್, ತಾಲೂಕು ಕಾರ್ಯದರ್ಶಿ ರೆಜಿತ್‍ಕುಮಾರ್ ಉಪಸ್ಥಿತರಿದ್ದರು. ಈ ಸಂದರ್ಭ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ನಡೆಸಿದ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಿ.ಎ ವಿಭಾಗದಲ್ಲಿ ಸುಜನ್ (ಪ್ರ), ದ್ವಿತೀಯ ಬಿ.ಎ ವಿಭಾಗದಲ್ಲಿ ಬೆಳ್ಳಿಯಪ್ಪ (ಪ್ರ), ರಕ್ಷಿತಾ (ದ್ವಿ), ತೃತೀಯ ಬಿ.ಎ ವಿಭಾಗದಲ್ಲಿ ದೀಕ್ಷಿತಾ (ಪ್ರ), ಮೇಘ (ದ್ವಿ) ಸ್ಥಾನ ಪಡೆದುಕೊಂಡರು.
ತಿತಿಮತಿ: ಸಮುದಾಯ ಭವನದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಶಾಲಾ ಪೂರ್ವ ಶಿಕ್ಷಣ ತರಬೇತಿ ಕಾರ್ಯಕ್ರಮ ನಡೆಸಲಾಯಿತು. ಉದ್ಘಾಟನೆಯನ್ನು ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯಿತಿ ಸದಸ್ಯ ಅನೂಪ್‍ಕುಮಾರ್, ಡಾ. ಹೊಸಮನಿ, ಆರೋಗ್ಯ ಸಿಬ್ಬಂದಿ ಶಿವಯ್ಯ, ಪಾಲಿಬೆಟ್ಟ, ಬಾಳೆಲೆ, ತಿತಿಮತಿಯ ಎಲ್ಲಾ ಅಂಗವನಾಡಿ ಕಾರ್ಯಕರ್ತೆಯರು ಹಾಜರಿದ್ದರು. ತರಬೇತಿಯನ್ನು ಸರೋಜ, ಸುನಿತ, ಸುಮಿತ್ರಬಾಯಿ ನಡೆಸಿಕೊಟ್ಟರು.
ಸುಂಟಿಕೊಪ್ಪ : ಅಂಗನವಾಡಿ ಕಾರ್ಯಕರ್ತೆಯರ ಶಾಲಾ ಪೂರ್ವ ಶಿಕ್ಷಣ ತರಬೇತಿ ಕಾರ್ಯಾಗಾರವನ್ನು ಚೆಟ್ಟಳ್ಳಿ ವಿಭಾಗದ ಕಾರ್ಯಕರ್ತೆ ಶಾರದ, ಸುಂಟಿಕೊಪ್ಪದ ಸಾವಿತ್ರಮ್ಮ ಹಾಗೂ ಫಾತಿಮಾ ಉದ್ಘಾಟಿಸಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ 2 ದಿನದ ಕಾರ್ಯಾಗಾರದ ಬಗ್ಗೆ ವಿವರಣೆ ನೀಡಿದ ಬಾಲವಿಕಾಸ ಶಿಕ್ಷಣದ ಗುರಿ, ಅಂಗನವಾಡಿ ಮಗುವಿನ ಸಾಮಾಜಿಕ ವೈಯಕ್ತಿಕ ಕೌಶಲ್ಯ ದೈಹಿಕ ಚಲನಾ ವಿಕಾಸತೆ ಮಗುವಿಗೆ ಏನು ಇಷ್ಟ ಕುತೂಹಲತೆ ಬಗ್ಗೆ ಕಾರ್ಯಕರ್ತರಿಗೆ ಕೆ.ಪಿ.ಪ್ರತಿಮಾ ಮನವರಿಕೆ ಮಾಡಿಕೊಟ್ಟರು.
ಮೊದಲಿಗೆ ಮಧುರಮ್ಮ ಬಡಾವಣೆ ಅಂಗನವಾಡಿ ಕಾರ್ಯಕರ್ತೆ ಸಲೀನಾ ಜೆಫ್ರಿ ಪ್ರಾರ್ಥಿಸಿ, ಜ್ಯೋತಿ ಸ್ವಾಗತಿಸಿದರು. ಸೋಮವಾರಪೇಟೆ: ಇಲ್ಲಿನ ಸಂತ ಜೋಸೆಫರ ಪದವಿ ಕಾಲೇಜಿನಲ್ಲಿ ವೈದ್ಯರ ದಿನಾಚರಣೆಯ ಅಂಗವಾಗಿ ಆರೋಗ್ಯ, ನೈರ್ಮಲ್ಯ ಹಾಗೂ ಅದರ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಮಖ್ಯ ಅತಿಥಿಗಳಾಗಿ ಆಗಮಿಸಿದ ಐಗೂರು ಸಮುದಾಯ ಆರೋಗ್ಯ ಕೇಂದ್ರದ ಡಾ. ಶುಕ್ರುತ ಅವರು, ಆರೋಗ್ಯ ಮತ್ತು ಶುಚಿತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಿದರು. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು ಎಂದು ತಿಳಿಸಿದ ವೈದ್ಯರು, ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಂಚಾಲಕ ರಾಯಪ್ಪ, ಪ್ರಾಂಶುಪಾಲ ಅಂತೋಣಿರಾಜ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕುಶಾಲನಗರ: ಕೂಡಿಗೆ ಸೈನಿಕ ಶಾಲೆಯಲ್ಲಿ ರಾಷ್ಟ್ರೀಯ ಓದುಗಾರಿಕೆ ದಿನ ಮತ್ತು ಮಾಸಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಶಾಲೆಯ ರೀಡರ್ಸ್ ಕ್ಲಬ್ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ ನಡೆಯಿತು.
ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್ ಶಾಲಾ ಧ್ವಜದ ಸಂಕೇತವನ್ನು ಪ್ರದರ್ಶಿಸುವದರ ಮೂಲಕ ಚಾಲನೆ ನೀಡಿದರು. 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೂಡಿಗೆ ವೃತ್ತ ಹಾಗೂ ಕೂಡಮಂಗಳೂರು ಗ್ರಾಮ ಪಂಚಾಯಿತಿವರೆಗೆ ಜಾಥಾದಲ್ಲಿ ಪಾಲ್ಗೊಂಡರು. ಕೂಡಮಂಗಳೂರು ಗ್ರಾಮದ ಜನತೆಯೊಂದಿಗೆ ಸಂವಾದವನ್ನು ನಡೆಸಿ ಪುಸ್ತಕಗಳ ಮಹತ್ವವನ್ನು ಕುರಿತು ಅರಿವು ಮೂಡಿಸಿದರು.
ಶಾಲೆಯ ಉಪಪ್ರಾಂಶುಪಾಲೆ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಆಡಳಿತಾಧಿಕಾರಿ ಸ್ಕ್ವಾಡ್ರನ್ ಲೀಡರ್ ಆರ್ ಕೆ ಡೇ, ರೀಡರ್ಸ್ ಕ್ಲಬ್‍ನ ಮುಖ್ಯಸ್ಥ ಸುಶಾಂತ್ ಟಿ. ಯರಗಟ್ಟಿ, ಸದಸ್ಯ ಶಿಕ್ಷಕ ಅಶೋಕ್ ಕೆಂಗಾರೆ, ದಕ್ಷಿಣ ಮೂರ್ತಿ, ರೀತೇಶ್ ಹಾಗೂ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸೋಮವಾರಪೇಟೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಂತ ಜೋಸೆಫರ ಪದವಿ ಕಾಲೇಜಿನಲ್ಲಿ, ಇಕೋ ಕ್ಲಬ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ನಡೆಯಿತು.
ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ಮಾತನಾಡಿ, ಅರಣ್ಯ ಸಂರಕ್ಷಣೆಯ ಲಾಭಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಕಾಲೇಜಿನ ಪ್ರಾಂಶುಪಾಲ ಅಂತೋಣಿ ರಾಜ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಅರಣ್ಯ ಪ್ರದೇಶದಲ್ಲಿ ಬೀಜದ ಉಂಡೆಯನ್ನು ಬಿತ್ತುವ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.
ದ್ವಿತೀಯ ಬಿ.ಕಾಂ. ವಿದ್ಯಾರ್ಥಿ ಲೋಹಿತ್, ಅಂತಿಮ ಬಿ.ಕಾಂ. ವಿದ್ಯಾರ್ಥಿ ರಶ್ಮಿ, ಸಹನ ಕಾರ್ಯಕ್ರಮ ನಿರ್ವಹಿಸಿದರು.
ಶ್ರೀಮಂಗಲ: ಶ್ರೀಮಂಗಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಸಂಸ್ಥೆಯ ಅಧ್ಯಕ್ಷ ಮದ್ರೀರ ಪಿ. ವಿಷ್ಣು ಅಧ್ಯಕ್ಷತೆಯಲ್ಲಿ ನಡೆಯಿತು. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಕೊಡವ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ಕೆ. ವಿಷ್ಣು ಕಾರ್ಯಪ್ಪ ಆಗಮಿಸಿ, ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾಸಂಸ್ಥೆಯ ಬೆಳವಣಿಗೆಯಲ್ಲಿ ದಾನಿಗಳ ಪಾತ್ರ ಮಹತ್ವವಾದದ್ದು ಎಂದರು.
ಸಂಸ್ಥೆಯ ಅಭಿವೃದ್ಧಿಗಾಗಿ ರೂ. 25 ಸಾವಿರಗಳನ್ನು ಉದಾರವಾಗಿ ನೀಡಿದರು. ವೇದಿಕೆಯಲ್ಲಿ ಪ್ರಾಂಶುಪಾಲ ಕೋಟ್ರಂಗಡ ಚಂಗಪ್ಪ ಹಾಜರಿದ್ದು, ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋದಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಆಡಳಿತ ಮಂಡಳಿ ಉಪಾಧ್ಯಕ್ಷ ಮಚ್ಚಮಾಡ ಬಿ. ಸುಬ್ರಮಣಿ ಮತ್ತು ಕಾರ್ಯದರ್ಶಿ ಕಟ್ಟೇರ ಪಿ. ಸುಶೀಲಾ ಅಚ್ಚಪ್ಪ ಜ್ಞಾನವೇ ಪರಮಶ್ರೇಷ್ಠ, ಏಕಾಗ್ರತೆ, ಆತ್ಮವಿಶ್ವಾಸ, ಸತತ ಪ್ರಯತ್ನವೇ ಯಶಸ್ಸಿಗೆ ಮೂಲ ಎಂದರು.
ಖಜಾಂಚಿ ಕೆ.ಎನ್. ಸಂದೀಪ್, ನಿರ್ದೇಶಕ ಕುಂಞಂಗಡ ರಮೇಶ್, ಮಂದಮಾಡ ಗಣೇಶ್, ಅಜ್ಜಮಾಡ ಯು. ಬೋಪಣ್ಣ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ರತ್ನಮ್ಮ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರುಗಳಾದ ಚಟ್ಟಂಗಡ ಸುನಿತ ಹಾಗೂ ಚೆಕ್ಕೇರ ಪೊನ್ನಮ್ಮ ಹಾಜರಿದ್ದರು. ವಿದ್ಯಾರ್ಥಿಗಳಾದ ಸೀತೆ ಹಾಗೂ ರಮ್ಯ ಪ್ರಾರ್ಥಿಸಿದರು. ಅಧ್ಯಾಪಕ ನಾಗೇಶ್‍ಕುಮಾರ್ ಸ್ವಾಗತಿಸಿ, ಉಪನ್ಯಾಸಕಿ ಅಜ್ಜಮಾಡ ರೇಖ ನಿರೂಪಿಸಿದರು. ಅರುಣಾಚಲ್ ವಂದಿಸಿದರು.