ಸೋಮವಾರಪೇಟೆ, ಜು. 7: ಸೋಮವಾರಪೇಟೆಯಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸೈನಿಕ ಭವನ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ಸಂಘದ ಪ್ರತಿಯೋರ್ವ ಸದಸ್ಯರೂ ಕೈಜೋಡಿಸಬೇಕೆಂದು ಇಲ್ಲಿನ ಜೈಜವಾನ್ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಹೇಳಿದರು.
ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾಜಿ ಸೈನಿಕರ ಬಹುದಿನಗಳ ಕನಸಾಗಿದ್ದ ಸೈನಿಕ ಭವನ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ರೂ. 14 ಲಕ್ಷ ವೆಚ್ಚದಲ್ಲಿ ನಿವೇಶನ ಖರೀದಿಸಲಾಗಿದ್ದು, ಶೀಘ್ರದಲ್ಲೇ ಭವನ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವದು ಎಂದರು.
ತಾ. 18 ರಂದು ಕೊಡವ ಸಮಾಜದಲ್ಲಿ ಸಂಘದ ಸದಸ್ಯರಿಗೆ ಸಂತೋಷ ಕೂಟ ಏರ್ಪಡಿಸಲಾಗಿದೆ. ಈಗಾಗಲೇ ಸಂಘದಲ್ಲಿ 131 ಸದಸ್ಯರಿದ್ದು, ಹಲವರು ಇಂದಿಗೂ ಸದಸ್ಯತ್ವ ಪಡೆದಿಲ್ಲ. ಮುಂದಿನ ದಿನಗಳಲ್ಲಿ ಸದಸ್ಯತ್ವ ಅಭಿಯಾನ ನಡೆಸುವ ಮೂಲಕ ಸಂಘವನ್ನು ಬಲಪಡಿಸಬೇಕಾಗಿದೆ ಎಂದು ಈರಪ್ಪ ಅಭಿಪ್ರಾಯಿಸಿದರು.
ಸಂಘದ ಸದಸ್ಯರು ಭವನ ನಿರ್ಮಾಣಕ್ಕೆ ತಲಾ 10 ಸಾವಿರ ವಂತಿಗೆ ನೀಡುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು. ಇದರೊಂದಿಗೆ ಸಾರ್ವಜನಿಕ ದಾನಿಗಳು, ಸರ್ಕಾರದಿಂದಲೂ ಅನುದಾನ ಪಡೆಯುವ ಬಗ್ಗೆ ಚರ್ಚೆ ನಡೆಸಲಾಯಿತು. ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಆರ್.ಜಿ. ಬಸಪ್ಪ, ಲೆಕ್ಕಪರಿಶೋಧಕ ಎ.ಕೆ. ಮಾಚಯ್ಯ, ಖಜಾಂಚಿ ಸುಕುಮಾರ್ ಅವರುಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಸಂಘದ ಸದಸ್ಯರುಗಳು ಭಾಗವಹಿಸಿದ್ದರು.