ಗೋಣಿಕೊಪ್ಪ ವರದಿ, ಜು. 7: ಸಾಧನೆಗೆ ನಿರ್ದಿಷ್ಟ ಗುರಿ ಬೇಕು ಎಂದು ಶೌರ್ಯಚಕ್ರ ಪ್ರಶಸ್ತಿ ವಿಜೇತ ಯೋಧ, ಕಾವೇರಿ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ಸದಸ್ಯ ಹೆಚ್.ಎನ್. ಮಹೇಶ್ ಅಭಿಪ್ರಾಯಪಟ್ಟರು.
ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಉದ್ಘಾಟನೆ ಹಾಗೂ ಕಾವೇರಿ ದರ್ಶಿನಿ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನಿರ್ದಿಷ್ಟ ಗುರಿ ಮುಂದಿಟ್ಟುಕೊಂಡು ಸಾಗುವದರಿಂದ ಹೆಚ್ಚು ಸಾಧಿಸಲು ಸಹಕಾರಿಯಾಗುತ್ತದೆ. ಬೇರೆಯವರ ಅಭಿಪ್ರಾಯಗಳನ್ನು ಆಲಿಸುವ ಗುಣ ಹೆಚ್ಚು ಸಹಕಾರಿಯಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಸಮಯ ವ್ಯರ್ಥ ಮಾಡದೆ ನಿರಂತರ ಪರಿಶ್ರಮ ಅಗತ್ಯ ಎಂದರು.
ಕಾವೇರಿ ದರ್ಶಿನಿ ಸಂಚಿಕೆಯನ್ನು ಹಿರಿಯ ಪತ್ರಕರ್ತ ಕೊಟ್ಟಿಯಂಡ ಜೀವನ್ ಚಿಣ್ಣಪ್ಪ ನೆರವೇರಿಸಿ ಮಾತನಾಡಿ, ರಾಷ್ಟ್ರ ಸೇವೆಗೆ ಮುಂದಾಗಲು ಸ್ವಚ್ಛತೆ, ಪರಿಸರ ರಕ್ಷಣೆಗೆ ಹೆಚ್ಚು ಒತ್ತು ನೀಡಬೇಕಿದೆ. ಮಾಧ್ಯಮ ಕ್ಷೇತ್ರದಲ್ಲಿ ಕೂಡ ಆರ್ಥಿಕವಾಗಿ ಮುಂದುವರಿಯಲು ಅವಕಾಶವಿರುವದರಿಂದ ವಿದ್ಯಾರ್ಥಿಗಳು ವೃತ್ತಿ ಆಯ್ಕೆಯಲ್ಲಿ ಮಾಧ್ಯಮ ವಿಭಾಗಕ್ಕೂ ಆಸಕ್ತಿ ತೋರಬಹುದು ಎಂದರು.
ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಅಜ್ಜಿನಿಕಂಡ ಗಣಪತಿ, ಪ್ರಾಂಶುಪಾಲ ಸಣ್ಣುವಂಡ ಎಸ್. ಮಾದಯ್ಯ, ವಿದ್ಯಾರ್ಥಿ ಸಂಘ ಸಂಚಾಲಕಿ ಡಾ. ರೇಖಾ ಚಿಣ್ಣಪ್ಪ, ಪ್ರಾಧ್ಯಾಪಕ ಐನಂಡ ಸೋಮಣ್ಣ, ಎನ್‍ಎಸ್‍ಎಸ್ ಯೋಜನಾಧಿಕಾರಿ ಎಸ್.ಆರ್. ತಿರುಮಲ್ಲಯ್ಯ, ಕಾವೇರಿ ದರ್ಶಿನಿ ಸಂಚಿಕೆ ಸಮಿತಿ ಸಂಚಾಲಕಿ ಎಂ.ಕೆ. ಪದ್ಮ ಉಪಸ್ಥಿತರಿದ್ದರು. ಚೆನ್ನನಾಯಕ ಅತಿಥಿಗಳ ಪರಿಚಯ ಮಾಡಿದರು. ವಸುಂಧರಾ ತಂಡ ಪ್ರಾರ್ಥಿಸಿದರು.