ಗೋಣಿಕೊಪ್ಪಲು, ಜು. 7: ಮಂಡ್ಯದಲ್ಲಿ ಕಬ್ಬು ಬೆಳೆಯುವ ರೈತರಿಗೆ ಕೆ.ಆರ್.ಎಸ್. ಅಣೆಕಟ್ಟೆಯಿಂದ ನೀರು ಹರಿಸುವಂತೆ ಬೇಡಿಕೊಳ್ಳುತ್ತಿದ್ದೇವೆ. ರಾಜ್ಯದ ಸಚಿವರಲ್ಲೂ ಮನವಿ ಮಾಡಿದ್ದೇವೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವೂ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ವರಿಷ್ಠರಾದ ದರ್ಶನ್ ಪುಟ್ಟಣಯ್ಯ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ಕಣಿವೆ ಪ್ರದೇಶದಲ್ಲಿ ಉತ್ತಮ ಮಳೆಗಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಡಿಕೇರಿಯ ಸುದರ್ಶನ ಅತಿಥಿಗೃಹದಲ್ಲಿ ಅವರು ಮಾತನಾಡಿದರು.ನೀರು ಹರಿಸದೆ ರೈತರ ತಾಳ್ಮೆ ಪರೀಕ್ಷೆ ಮಾಡಲಾಗುತ್ತಿದೆ. ಹೋರಾಟ ನಡೆಸಿದರೆ ಅದನ್ನು ಹತ್ತಿಕ್ಕುವ ಪ್ರಯತ್ನ ಮತ್ತೊಂದೆಡೆ ನಡೆಯುತ್ತಿದೆ. ಕೆಆರ್‍ಎಸ್‍ನಿಂದ ನೀರು ಹರಿಸದಿರಲು ಕಾರಣವೇನು ಎಂದು ಸರ್ಕಾರವನ್ನು ಪ್ರಶ್ನಿಸಿದರು.

‘ನೀರು ಹರಿಸದೇ ಸುಮಾರು 40 ಸಾವಿರ ರೈತ ಕುಟುಂಬಗಳು ಕಂಗಾಲಾಗಿವೆ. ಕಾವೇರಿ ನದಿ ನೀರು ಅವಲಂಬಿಸಿರುವ ರೈತರ ಮೇಲೆ ನೂರಾರು ಕೋಟಿ ರೂಪಾಯಿ ಸಾಲದ ಹೊರೆಯಿದೆ. ಈ ಸತ್ಯಾಂಶವನ್ನು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವೂ ಅರಿತುಕೊಳ್ಳಬೇಕು. ನಮ್ಮ ಪಾಲಿನ ನೀರನ್ನು ರೈತರ ಜಮೀನಿಗೆ ಹರಿಸಲಿ ಎಂದು ಆಗ್ರಹಿಸಿದರು.

ರೈತ ಸಂಘದ ಮಂಡ್ಯ ಜಿಲ್ಲಾ ಅಧ್ಯಕ್ಷ ಸುರೇಶ್ ಮಾತನಾಡಿ ‘ಕಾವೇರಿ ಕಣಿವೆ ರೈತರು ನಿರಂತರವಾಗಿ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಬೆಳೆಗಳಿಗೆ ಇರಲಿ. ಕುಡಿಯಲೂ ನೀರಿಲ್ಲದ ಸ್ಥಿತಿ ಬಂದಿದೆ. ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದ್ವೇಷದ ರಾಜಕಾರಣ ಮಾಡಿ ಮಂಡ್ಯ ಜಿಲ್ಲೆಯ ರೈತರನ್ನು ಹಿಂಸಿಸುತ್ತಿದ್ದಾರೆ. ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಪುತ್ರ ನಿಖಿಲ್ ಸೋಲಿಗೆ ರೈತರ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ರೈತರ ಸಮಸ್ಯೆ ಅಲಿಸುವದನ್ನು ಬಿಟ್ಟು ಅಮೇರಿಕ ಪ್ರವಾಸಕ್ಕೆ ತೆರಳಿದ್ದಾರೆ. ಎಂದು ದೂರಿದರು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ,ರಾಜ್ಯ ಸಮಿತಿಯ ಸದಸ್ಯರಾದ ರಾಮಕೃಷ್ಣಯ್ಯ, ಕೆಂಪುಗೌಡರು, ಶ್ರೀಕಾಂತ್‍ರಾಜೇ ಅರಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೆಮಾಡ ಮಂಜುನಾಥ್, ಹಾಜರಿದ್ದರು. ಮುಖಂಡರಾದ ಕೋದೇಂಗಡ ಸುರೇಶ್, ಗಾಡಂಗಡ ಉತ್ತಯ್ಯ, ಎಂ.ಬಿ.ಅಶೋಕ್, ಸೇರಿದಂತೆ ಇನ್ನಿತರ ಜಿಲ್ಲಾ ಮುಖಂಡರು ಹಾಜರಿದ್ದರು. ದರ್ಶನ್ ಪುಟ್ಟಣಯ್ಯ ಮುಂದಾಳತ್ವದಲ್ಲಿ ಕೊಡಗು ಜಿಲ್ಲಾ ರೈತ ಸಂಘದ ಮುಖಂಡರು, ರಾಜ್ಯ ಸಮಿತಿ ಮುಖಂಡರು ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರದ ದರ್ಶನ ಮಾಡಿ ಕುಂಕುಮಾರ್ಚನೆ ಹಾಗೂ ಮಹಾಪೂಜೆ ಸಲ್ಲಿಸಿದರು.