ಜನರಿಂದ ಆರಿಸಿ ಕಳುಹಿಸಿದವರ ಸರಕಾರ ದೇಶ ಮತ್ತು ರಾಜ್ಯಗಳಲ್ಲಿ ಇರಬೇಕೆಂಬುದು ಪ್ರಜಾಪ್ರಭುತ್ವದ ತತ್ವ. ಬ್ರಿಟೀಷರ ಶಿಸ್ತುಬದ್ಧ ಆಡಳಿತಕ್ಕಿಂತ ಮಿಗಿಲಾದ ಸ್ವಾತಂತ್ರ್ಯವಿರಬೇಕೆಂದು ಬಯಸಿದವರು ಪೂರ್ವಿಕರು. ಭಾರತೀಯರಿಗೇ ಮತ, ಭಾರತೀಯರಿಗೇ ಅಧಿಕಾರ, ಭಾರತೀಯರದೇ ಆಡಳಿತ, ಭಾರತದ ಸಮಸ್ಯೆಗಳಿಗೆ ಭಾರತೀಯರಿಂದಲೇ ಪರಿಹಾರ... ಹೀಗೆಲ್ಲಾ ಕನಸಿನ ಬೆಟ್ಟವನ್ನು ಹೊತ್ತು ಹೋರಾಟ ನಡೆಸಿ ಭಾರತವನ್ನು ನಮ್ಮ ಕೈಗಳಿಗೇ ಒಪ್ಪಿಸಿದವರು ನಮ್ಮ ಪೂರ್ವಜರು.

ಅದರ ಫಲವಾಗಿ ಸ್ವಾತಂತ್ರ್ಯಾನಂತರದ 70 ವರ್ಷಗಳಲ್ಲಿ ನಮ್ಮ ಅಹವಾಲುಗಳನ್ನು ನೇರವಾಗಿ ಹೇಳಿಕೊಳ್ಳಲು ಗ್ರಾಮಮಟ್ಟದಿಂದ ದೇಶದವರೆಗೆ ಪ್ರತಿಯೊಬ್ಬ ಪ್ರಜೆಗೆ ಕನಿಷ್ಟ 20 ಜನ ಪ್ರತಿನಿಧಿಗಳನ್ನು ಈ ದೇಶ ಸೃಷ್ಟಿಸಿದೆ.ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯ, ಉಪಾಧ್ಯಕ್ಷ, ಅಧ್ಯಕ್ಷ, ತಾಲೂಕು ಮಟ್ಟದಲ್ಲೂ ಮೂವರು, ಜಿಲ್ಲಾ ಪಂಚಾಯಿತಿಯಲ್ಲಿ ಮೂವರು, ನೇರವಾಗಿ ಆಯ್ಕೆ ಮಾಡಿದ ಶಾಸಕರು ಹಾಗೂ ಲೋಕಸಭಾ ಸದಸ್ಯರು, ನಮ್ಮ ವ್ಯಾಪ್ತಿಯಿಂದಲೇ ಆಯ್ಕೆಗೊಂಡ ವಿಧಾನಪರಿಷತ್ ಸದಸ್ಯರುಗಳು, ರಾಜ್ಯಸಭಾ ಸದಸ್ಯರು, ರಾಜ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ, ದೇಶದಲ್ಲೊಬ್ಬ ಪ್ರಧಾನಿ... ನೇರವಾಗಿ ಜನರ ಸಮಸ್ಯೆಗಳನ್ನು ಕೇಳಲು ಇದ್ದಾರೆ ಎಂಬ ಹೆಮ್ಮೆ ನಮ್ಮದು.

ಆದರೆ, ಹಕ್ಕು ಚಲಾಯಿಸಿದ ನಾವು ನಂತರದ ದಿನಗಳಲ್ಲಿ ಜನಪ್ರತಿನಿಧಿಗಳ ಮಧ್ಯೆ ಗುಲಾಮರಂತೆ ಬಗ್ಗಿ ನಡೆಯುವ, ಸಮಸ್ಯೆಗಳನ್ನು ವಿನಮ್ರವಾಗಿ ಒಪ್ಪಿಸುವ, ಪರಿಹಾರ ಸಿಗದಿದ್ದರೂ ಮೌನವಾಗಿ ವ್ಯವಸ್ಥೆಗಳನ್ನು ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಂಡಿದ್ದೇವಲ್ಲ; ಅದು ಪ್ರಜಾಪ್ರಭುತ್ವದ ದುರಂತ.

ಜನಹಿತ ಕಾಯುವ ಬದಲು ಸ್ವಹಿತ ಬಯಸುವವರನ್ನು ಆಯ್ಕೆ ಮಾಡಿ ಕಳುಹಿಸುತ್ತಿದ್ದೇವೆ. ಬಡತನದಿಂದ ಬಂದವನೆಂದು ಆರಿಸಿ ಕಳುಹಿಸಿದ 5 ವರ್ಷಗಳಲ್ಲೇ ದುಡಿಮೆಯೇ ಇಲ್ಲದೆ ಕೋಟ್ಯಾಂತರ ಆಸ್ತಿ ಮಾಡಿರುವವರನ್ನು ಮತ್ತೆ ಮತ ನೀಡಿ ಗೆಲ್ಲಿಸುತ್ತಿದ್ದೇವೆ. ಕೊಲೆ, ಸುಲಿಗೆ, ಅತ್ಯಾಚಾರ, ಅನಾಚಾರ ಮಾಡಿದವರು ಮತ್ತೆ ಜನಪ್ರತಿನಿಧಿಗಳಾಗುತ್ತಾರೆ; ಜೈಲಿನಲ್ಲಿ ಇದ್ದು, ಚುನಾವಣೆಯಲ್ಲಿ ಸ್ಪರ್ಧಿಸಿದವರನ್ನು ಬೆಂಬಲಿಸಿ ನಮ್ಮ ನಾಯಕನೆಂದು ಪುನರಾಯ್ಕೆ ಮಾಡುತ್ತೇವೆ,

ಜನರ ಚಿಂತನಾ ರಹಿತ ತೀರ್ಮಾನಗಳಿಗೆ ಇನ್ಯಾವ ರೀತಿಯ ಪರಿಣಾಮಕಾರಿ

ಕೆಲಸಗಳನ್ನು ಅಂತಹ ಜನಪ್ರತಿನಿಧಿಗಳಿಂದ ನಿರೀಕ್ಷಿಸಲು ಸಾಧ್ಯ?

ಜನರಿಗೆ ಉತ್ತರಿಸಬೇಕಾದ ಅವಶ್ಯಕತೆ ಇನ್ನೆಲ್ಲಿ ಇಂತಹ ನಾಯಕರುಗಳಿಗೆ? ತಾವು ಆಡುವ ಮಾತುಗಳು, ನಡೆದುಕೊಳ್ಳುವ ರೀತಿ, ತೆಗೆದುಕೊಳ್ಳುವ ತೀರ್ಮಾನಗಳು, ಮತದಾರರಿಂದ ಪ್ರಶ್ನಾರ್ಹ ಎಂಬ ಭಯವಾದರೂ ಏಕಿರುತ್ತದೆ?

ಹಾಗಾಗಿಯೇ ಎರಡು - ಮೂರಲ್ಲ... ಏಳೆಂಟು ಬಾರಿ ತನಗೇ ಅಧಿಕಾರ ಬೇಕು ಎಂದು ನಾಯಕರು ಹಂಬಲಿಸುವದು; ತನ್ನ ಮಗ - ಮಗಳಿಗೂ ಸೀಟು ಬೇಕು ಎಂದು ಲಜ್ಜೆ ಇಲ್ಲದೆ ಬೇಡಿಕೆ ಇಡುವದು; ಜನ ಸೇವೆಗೆ ಶಾಸಕ ಸ್ಥಾನ ಸಾಲುವದಿಲ್ಲವೆಂದು ಸಚಿವ ಸ್ಥಾನಕ್ಕೆ ಒತ್ತಾಯಿಸುವದು; ಅದಕ್ಕಾಗಿ ಜಾತಿ - ಧರ್ಮಗಳನ್ನು ಮುಂದಿಟ್ಟು, ಆಯಾ ಮಠಾಧೀಶರುಗಳಿಂದ ಒತ್ತಡ ಹಾಕಿಸುವದು; ನೆರವೇರದಿದ್ದಾಗ ರಾಜೀನಾಮೆ ನಾಟಕ, ಪಕ್ಷಾಂತರ, ಹಣದ ಆಮಿಷಗಳಿಗೆ ಒಳಗಾಗಿ ವ್ಯವಸ್ಥೆಯನ್ನು ನಿಂದಿಸಿ ತಾನು ಮಾತ್ರ ಸಚ್ಛರಿತ ವ್ಯಕ್ತಿ ಎಂದು ಪ್ರತಿಬಿಂಬಿಸಲು ಹವಣಿಸುವದು.

ಇದರ ಪರಿಣಾಮವೇ ಇಂದಿನ ನಮ್ಮ ರಾಜ್ಯ ರಾಜಕಾರಣವೂ ಸೇರಿದಂತೆ ದೇಶದ ವಿವಿಧೆಡೆ ರಾಜಕಾರಣಿಗಳ ‘ಶೇಮ್ ಲೆಸ್’ ವರ್ತನೆಗಳು.

ಬಹುಮತವಿಲ್ಲದಿದ್ದರೂ, ಪರಸ್ಪರ ಸೇರಿಕೊಂಡು 1 ವರ್ಷದ ಹಿಂದೆ ಸರ್ಕಾರ ರಚಿಸಿರುವದರಿಂದ ನಮ್ಮ ರಾಜ್ಯದಲ್ಲಿ ಆಗಿರುವ ಘನಂದಾರಿ ಅಭಿವೃದ್ಧಿಯಾದರೂ ಏನು? ಆರಂಭದ ದಿನದಿಂದ ಇಂದಿನವರೆಗೂ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನಗಳಿಗೇ ಸಮಯ ವ್ಯಯವಾಯಿತೇ ಹೊರತು, ಜನರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿರುವದಾದರೂ ಏನು? ‘ಎತ್ತು ಏರಿಗೆ - ಕೋಣ ನೀರಿಗೆ’ ಎಂಬಂತೆ ಆಡಳಿತ ನಡೆಸಿದ ಎರಡೂ ಪಕ್ಷಗಳೂ ಜನರ ವಿಶ್ವಾಸವನ್ನು ಮೊದಲ ದಿನದಂದೇ ಕಳೆದುಕೊಂಡವು. ಮುಖ್ಯಮಂತ್ರಿಯಂತೂ ತಾನೊಬ್ಬ ಸಾಂದರ್ಭಿಕ ಶಿಶು ಎಂದು ಅಳುತ್ತಾ ಗೋಗರೆಯುತ್ತಿದ್ದರೂ, ಇಂತಹ ಕೆಟ್ಟ ವ್ಯವಸ್ಥೆಯಲ್ಲಿ ಅಧಿಕಾರ ಬೇಡ ಎನ್ನುವ ನಿರ್ಧಾರಕ್ಕೆ ಬರಲು ಮಾತ್ರ ಹಿಂದೇಟು ಹಾಕಿದರು.

ಬಹುಮತ ಇಲ್ಲದೆ ಆಡಳಿತ ನಡೆಸುತ್ತಿದ್ದಾರೆ ಎಂದು ಹಲುಬಿದ ವಿಪಕ್ಷ, ಚೀಲಗಳಲ್ಲೇ ಹಣ ಸುರಿದು ಶಾಸಕರ ಖರೀದಿಗೆ ಲಜ್ಜೆ ಇಲ್ಲದೆ ಹೆಜ್ಜೆ ಇಟ್ಟಿತು. ತಡವಾಗಿ ಹಲವು ‘ಮಿಕಗಳು’ ಇದರ ಬಲೆಗೆ ಬಿದ್ದವು.

11-12-13-14 ಹೀಗೆ ರಾಜ್ಯ ಮೈತ್ರಿ ಸರಕಾರದ ವಿರುದ್ಧ ಶಾಸಕರು ರಾಜೀನಾಮೆ ನೀಡಿ ಹೊರ ಬರುತ್ತಿದ್ದಾರೆ. 20-25 ಏರಿಕೆಯಾಗಬಹುದು ಎಂದು ಹಲವರು ಅಂದಾಜಿಸಿದ್ದಾರೆ. ಸರಕಾರ ಅಲುಗಾಡುತ್ತಿದೆ; ಆಡಳಿತ ಕುಸಿದಿದೆ - ಜನರ ಸಮಸ್ಯೆಗಳನ್ನು ಕೇಳುವ ಸರ್ಕಾರ ಇಲ್ಲವಾಗಿದೆ.

ಆದರೂ ಗೌರವದಿಂದ ರಾಜೀನಾಮೆ ನೀಡಿ ಹೊರ ಬರಬೇಕಾದ ಮುಖ್ಯಮಂತ್ರಿ ಅಮೇರಿಕಾದಿಂದಲೇ ಸರಕಾರ ಉಳಿಸಿ ಎಂದು ಸಹೋದ್ಯೋಗಿಗಳೊಂದಿಗೆ ಗೋಗರೆದಿದ್ದಾರೆ. ಮುಖ್ಯಮಂತ್ರಿ ಬದಲಾದರೂ ಸರಕಾರ ಬದಲಾಗಬಾರದು ಎಂದು ಹಿರಿಯ ರಾಜಕಾರಣಿಯೊಬ್ಬರು ಮತ್ತೊಬ್ಬರಿಗೆ ಮುಖ್ಯಮಂತ್ರಿ ಆಸೆ ತೋರಿಸುತ್ತಿದ್ದಾರೆ.

ರಾಜ್ಯದಲ್ಲಿ ವಿಪಕ್ಷ ತಾನು ಸರ್ಕಾರ ಬಿದ್ದರೆ ಸುಮ್ಮನಿರುವದಿಲ್ಲ; ಅಧಿಕಾರ ಹಿಡಿಯುತ್ತೇನೆ ಎಂದು ಈಗಲೇ ಸಚಿವ ಸಂಪುಟ ಸದಸ್ಯರ ಲೆಕ್ಕಾಚಾರ ಹಾಕುತ್ತಿದೆ. ಜನ ಮರೆತು ಹೋಗಿದ್ದಾರೆ ಎಂದುಕೊಂಡಿರುವ ಆ ಪಕ್ಷದ ಪ್ರಮುಖರೊಬ್ಬರು ತಾವು ಉತ್ತಮ ಆಡಳಿತ ನೀಡುವದಾಗಿ ಘೋಷಿಸಿಕೊಂಡಿದ್ದಾರೆ. ಚೆಕ್ ಮೂಲಕವೇ ದೇಣಿಗೆ ಸಂಗ್ರಹಿಸಿದ ಬಂಡತನದವರನ್ನು, ಗಣಿಯಲ್ಲಿ ಬೆಟ್ಟ ಗಾತ್ರದಲ್ಲಿ ಅನಧಿಕೃತ ಸಂಪಾದನೆ ಮಾಡಿ ಜೈಲಿಗೆ ಹೋದವರನ್ನು, ಜೈಲಿಗೆ ಹೋದ ಸಂದರ್ಭ ಚೆಸ್‍ನ ಪಾನ್‍ನಂತೆ ಆಗಾಗ್ಗೆ ಮುಖ್ಯಮಂತ್ರಿಗಳನ್ನು ಬದಲಿಸಿದವರನ್ನು ಜನ ನೆನಪಿಸಿಕೊಂಡರೆ ಮುಂದಿನ ಆಯ್ಕೆ ಏನು? ಯಾರು ಸಮರ್ಥರು? ಎಂಬ ಪ್ರಶ್ನೆ ಜನಸಾಮಾನ್ಯನದ್ದಾಗಿದೆ.

ಅಡುಗೆಗೆ ತುರ್ತಾಗಿ 2 ಟೊಮೊಟೋ ಬೇಕಾಗಿದೆ ಎಂದು ಅಂಗಡಿ ಹೋದಾಗ ಆತನೇ ಹೇಳುತ್ತಾನೆ ಇವು ಚೆನ್ನಾಗಿಲ್ಲವೆಂದು. ಆದರೆ ಅನಿವಾರ್ಯವಾಗಿ ಕೊಳೆತಿದ್ದರಲ್ಲೇ ಕಡಿಮೆ ಕೊಳೆತ ಟೊಮೊಟೋ ತಂದು ಅಡುಗೆ ಮಾಡಿ ಸುಮ್ಮನಾಗುತ್ತೇವೆ. ರಾಜ್ಯದಲ್ಲೂ ಅದೇ ಸ್ಥಿತಿ ಮತದಾರನಿಗೆ

ಹೊರತಾದ ಕೊಡಗು: ಪ್ರಜಾಪ್ರಭುತ್ವದ ಮೌಲ್ಯಕ್ಕೆ ಕೊಡಗಿನಲ್ಲಿ ಬೆಲೆ ಸಿಗುತ್ತೆಂಬದನ್ನು ಇತಿಹಾಸವೇ ಹೇಳುತ್ತದೆ. ಇಲ್ಲಿನ ಯಾವದೇ ಪಕ್ಷದ ಜನಪ್ರತಿನಿಧಿ ತನ್ನ ಮಕ್ಕಳು - ಕುಟುಂಬಕ್ಕೆ ಅವಕಾಶ - ಅಧಿಕಾರ ಬೇಕು ಎಂದು ನಾಯಕರ ಎದುರಲ್ಲಿ ಗೋಗರೆದಿರುವ ಒಂದೇ ಒಂದು ಉದಾಹರಣೆ ಇಲ್ಲ. ನಮ್ಮಿಂದ ದೂರಾಗಿರುವ ಹಿರಿಯ ಶಾಸಕರುಗಳ ಕುಟುಂಬ ಸದಸ್ಯರು ಇಂದಿಗೂ ಅಂತಹ ಸ್ಥಾನ ಮಾನದಲ್ಲಿಲ್ಲ; ಸಕ್ರಿಯ ರಾಜಕಾರಣದಲ್ಲೂ ಇಲ್ಲ ಎನ್ನುವದೊಂದು ತೃಪ್ತಿಯ ವಿಷಯ.ಭ್ರಷ್ಟಾಚಾರ ಸ್ವಚನ ಪಕ್ಷಪಾತ, ಆರೋಪಿಗಳಿಂದಲೂ ದೂರವಾದÀ ಜನಪ್ರತಿನಿಧಿಗಳು ನಮ್ಮನ್ನಾಳಿದ್ದಾರೆ, ಆಳುತ್ತಿದ್ದಾರೆ ಎಂಬ ನೆಮ್ಮದಿ ಕೊಡಗಿನವರದು.

ಪುಟ್ಟ ಜಿಲ್ಲೆಯಲ್ಲಾದರೂ ಇಲ್ಲಿ ಪ್ರಜಾಪ್ರಭುತ್ವ ಮುಂದೆಯೂ ಹೀಗೇ ಗಟ್ಟಿಯಾಗಿರಲಿ.