ಮಡಿಕೇರಿ, ಜು. 7: ಕುಶಾಲನಗರದ ಗುಂಡೂರಾವ್ ಬಡಾವಣೆಯೂ ಸೇರಿದಂತೆ ವಿವಿಧೆಡೆಗಳಲ್ಲಿ; ಸರಕಾರಿ ಜಮೀನುಗಳನ್ನು ವಸತಿ ಯೋಜನೆಯಡಿ ಹಂಚಿಕೆ ಮಾಡುವ ವೇಳೆ ಕಾನೂನು ಪರಿಪಾಲನೆ ಕುರಿತು; ಅಲ್ಲಿನ ಪಟ್ಟಣ ಪಂಚಾಯಿತಿ ಗಮನ ಹರಿಸಿಲ್ಲ ಎನ್ನುವ ಆರೋಪದ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು; ಸಾರ್ವಜನಿಕರಿಂದ ಸಾಕಷ್ಟು ದೂರುಗಳ ಹಿನ್ನೆಲೆ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಉಪ ಸಮಿತಿ ರಚಿಸಿ; ಸಮಗ್ರ ಮಾಹಿತಿ ಸಂಗ್ರಹಿಸುವದರೊಂದಿಗೆ ವರದಿ ನೀಡುವಂತೆ ನಿರ್ದೇಶನ ನೀಡಲಾಗಿದೆ ಎಂದು ವಿವರಿಸಿದ್ದಾರೆ.

ಬಡಾವಣೆಗೆ ಮಾನದಂಡ : ಸರಕಾರದ ಜಮೀನು (ಪೈಸಾರಿ)ಗಳನ್ನು ವಸತಿ ಪ್ರದೇಶವಾಗಿ ಪಟ್ಟಣ ಪಂಚಾಯಿತಿಯಿಂದ ಪರಿವರ್ತಿಸುವ ಸಂದರ್ಭ; ಶೇ. 50 ಮಾತ್ರ ನಿವೇಶನಗಳನ್ನು ಕಲ್ಪಿಸಬೇಕಿದೆ. ಉಳಿದಂತೆ ಸಾರ್ವಜನಿಕ ಉಪಯೋಗಕ್ಕಾಗಿ ಪೂರಕ ಸರಕಾರಿ ಕಚೇರಿಗಳು, ರಸ್ತೆ, ಚರಂಡಿ, ಉದ್ಯಾನ ಇತ್ಯಾದಿಗಾಗಿ ಜಾಗವನ್ನು ಕಾಯ್ದಿರಿಸಬೇಕೆಂದು ಜಿಲ್ಲಾಧಿಕಾರಿ ನೆನಪಿಸಿದ್ದಾರೆ.

ವರದಿ ಪರಿಶೀಲಿಸಿ ಕ್ರಮ : ಈ ಸಂಬಂಧ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ರಚಿಸಿರುವ ಸಮಿತಿ ವರದಿ ಸಲ್ಲಿಸಿದ ಬಳಿಕ; ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮಿತಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿರುವದಾಗಿ ಅವರು ಮಾರ್ನುಡಿದರು.

ಪೊಲೀಸ್ ಠಾಣೆಗೆ ಬೇಡಿಕೆ : ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಂಚಾರ ಪೊಲೀಸ್ ಠಾಣೆ (ಟ್ರಾಫಿಕ್) ಬಾಡಿಗೆ ಕಟ್ಟಡದಲ್ಲಿ ಕೂಡುಮಗಳೂರಿನಲ್ಲಿ ಕಳೆದ 2 ವರ್ಷಗಳಿಂದ ನಡೆಯುತ್ತಿದೆ; ಈ ಕುರಿತು ಕೂಡ ಅರ್ಜಿ ಬಂದಿದ್ದು; ಪೊಲೀಸ್ ಇಲಾಖೆಗೆ ಸೂಕ್ತ ನಿವೇಶನ ಕಲ್ಪಿಸಲು ಪರಿಶೀಲಿಸಲಾಗುವದು ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯೆ ನೀಡಿದ್ದಾರೆ.

ಜಾಗ ಪರಿಶೀಲನೆ

ಪೊಲೀಸ್ ಇಲಾಖೆಯ ಬೇಡಿಕೆ ಮೇರೆಗೆ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು, ಕುಶಾಲನಗರಕ್ಕೆ ಭೇಟಿ ನೀಡಿ ಪೊಲೀಸ್ ಠಾಣೆಗಾಗಿ ನಿವೇಶನದ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗ್ರಾಮಾಂತರ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.