ಬೆಂಗಳೂರು, ಜು. 7: ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿರುವ 13 ಶಾಸಕರ ಪೈಕಿ 10 ಮಂದಿ ಮುಂಬೈನ ಸೋಫಿಟೆಲ್ ಹೊಟೇಲ್‍ನಲ್ಲಿ ತಂಗಿದ್ದಾರೆ. ಇಂದು ತಡರಾತ್ರಿ ಮುಂಬೈನಿಂದಲೇ ಎಲ್ಲ ಶಾಸಕರುಗಳ ಪರವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಎಸ್.ಟಿ. ಸೋಮಶೇಖರ್ ಅವರು ಯಾವದೇ ಕಾರಣಕ್ಕೂ 13 ಮಂದಿ ಶಾಸಕರುಗಳು ರಾಜಿನಾಮೆಯನ್ನು ಹಿಂಪಡೆಯು ವದಿಲ್ಲ ಎಂದು ಘೋಷಿಸಿದರು.ರಾಮಲಿಂಗರೆಡ್ಡಿ, ಆನಂದ್ ಸಿಂಗ್ ಸೇರಿದಂತೆ ಮೂವರು ಶಾಸಕರು ತಮ್ಮನ್ನು ಸೋಮವಾರದಿನ ಇಲ್ಲಿ ಸೇರಿಕೊಳ್ಳಲಿದ್ದು, ಎಲ್ಲ 13 ಶಾಸಕರು ಒಗ್ಗಟ್ಟಾಗಿದ್ದೇವೆ. ಮುಖ್ಯ ಮಂತ್ರಿ ಅಥವಾ ಸಚಿವರ ಬದಲಾವಣೆಗಳಾಗಲಿ ಇನ್ನಿತರ ಯಾವದೇ ಬೇಡಿಕೆಗಳನ್ನು ಮುಂದಿರಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ 13 ಶಾಸಕರ ರಾಜೀನಾಮೆ ಪರ್ವ ಇದೀಗ ಹೊಸ ತಿರುವು ಪಡೆಯುತ್ತಿದೆ. ಬೆಂಗಳೂರಿನ ಶಾಸಕ, ಮಾಜಿ ಸಚಿವ ರಾಮಲಿಂಗಾರೆಡ್ಡಿ ತನಗೆ ಡಿಸಿಎಂ ಹುದ್ದೆಯ ಬಯಕೆ ಇರುವದನ್ನು ಹಾಗೂ ಬೆಂಗಳೂರು ಉಸ್ತುವಾರಿ ಕೊಡಬೇಕೆಂಬದನ್ನು ಪರೋಕ್ಷವಾಗಿ ಪ್ರಸ್ತಾಪಿಸಿರುವದಾಗಿ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಅವರು ಸ್ಪಷ್ಟವಾಗಿ ಅಲ್ಲಗೆಳದಿದ್ದು, ರಾಜಿನಾಮೆ ಯನ್ನು ಯಾವದೇ ಕಾರಣಕ್ಕೂ ಹಿಂಪಡೆ ಯುವದಿಲ್ಲ ಎಂದು ಖಚಿತಪಡಿಸಿದ್ದಾರೆ.

ಈ ನಡುವೆ ಸಚಿವ ಡಿ.ಕೆ. ಶಿವಕುಮಾರ್ ಅವರು ಜೆಡಿಎಸ್ ನಾಯಕ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭ ತೀರಾ ‘ಗರಂ’ ಆಗಿದ್ದ ದೇವೇಗೌಡರು ಈ ಎಲ್ಲ ಬೆಳವಣಿಗೆಗೆ ಕಾಂಗ್ರೆಸ್ ನಾಯಕರೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿಯಾಗಿ ಸುವ ಪ್ರಯತ್ನಕ್ಕೆ ವಿರೋಧ ವ್ಯಕ್ತಪಡಿಸಿದರು. ಅಂತಹ ಸಂದರ್ಭ ಬಂದರೆ ಮೈತ್ರಿಯಿಂದ ಜೆಡಿಎಸ್ ಹೊರ ಬರುವದಾಗಿಯೂ ಮುನ್ನೆಚ್ಚರಿಕೆಯಿತ್ತರು.

ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅಮೇರಿಕಾ ಪ್ರವಾಸದಿಂದ ಬೆಂಗಳೂರಿಗೆ ಆಗಮಿಸಿದ್ದು, ಸೋಮವಾರ ದಿನ ಎಲ್ಲ ಬೆಳವಣಿಗೆಗಳ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುವದಾಗಿ ತಿಳಿದು ಬಂದಿದೆ. ಈ ನಡುವೆ ಮುಂಬೈನಲ್ಲಿರುವ ಕಾಂಗ್ರೆಸ್ - ಜೆಡಿಎಸ್ ಬಂಡಾಯ ಶಾಸಕರ ವಿರುದ್ಧ ಅವರು ತಂಗಿರುವ ಸೋಫಿಟೆಲ್ ಹೊಟೇಲ್ ಮುಂಭಾಗ ಮುಂಬೈನ ಕಾಂಗ್ರೆಸ್ ಪ್ರಮುಖರು ಪ್ರತಿಭಟನೆ ನಡೆಸಿದರು. ಬಳಿಕ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಈ ನಡುವೆ ಬಿಜೆಪಿ ನಡೆ ನಿಗೂಢವಾಗಿದ್ದು, ಸಂದರ್ಭ ಸನ್ನಿವೇಶ ಪರಿಗಣಿಸಿ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವದಾಗಿ ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ.