ಸೋಮವಾರಪೇಟೆ, ಜು. 7: ಈವರೆಗೆ ಬಿದ್ದ ಅಲ್ಪ ಮಳೆಗೆ ಗ್ರಾಮೀಣ ಭಾಗದ ರಸ್ತೆಗಳು ಹೊಂಡಗಳ ಆಗರವಾಗಿದೆ. ಬೇಸಿಗೆ ಯಲ್ಲಿದ್ದ ಸಣ್ಣ ಪುಟ್ಟ ಗುಂಡಿಗಳು ಸಣ್ಣ ಮಳೆಗೆ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದ್ದು, ಸಂಚಾರಕ್ಕೆ ಅಸಾಧ್ಯ ಪರಿಣಮಿಸುತ್ತಿದೆ.

ತಾಲೂಕಿನ ಬಹುತೇಕ ಗ್ರಾಮೀಣ ರಸ್ತೆಗಳ ಸ್ಥಿತಿ ದೇವರಿಗೇ ಪ್ರೀತಿ ಎಂಬಂತಿದೆ. ಇಂದಿಗೂ ಡಾಂಬರು ಕಾಣದ ರಸ್ತೆಗಳು ಕೆಸರಿನ ಕೊಂಪೆಯಾಗಿದ್ದು, ವಾಹನ ಸಂಚಾರವಿರಲಿ;ನಡೆದಾಡಲೂ ಅಯೋಗ್ಯವಾದ ಸ್ಥಿತಿಗೆ ತಲಪಿವೆ.

ಡಾಂಬರು ಹಾಕಿದ್ದ ರಸ್ತೆಗಳಲ್ಲಿ ನಿರ್ಮಾಣವಾಗಿದ್ದ ಗುಂಡಿಗಳು ಮಳೆಗೆ ಇನ್ನಷ್ಟು ದೊಡ್ಡದಾಗುತ್ತಿದ್ದು, ರಸ್ತೆ ಮಧ್ಯೆ ಸಣ್ಣ ಕೆರೆಯಂತೆ ಕಂಡುಬರುತ್ತಿವೆ. ಕೆಲವೆಡೆ ಡಾಂಬರು ಕಿತ್ತುಬಂದಿದ್ದು ಕಳಪೆ ಕೆಲಸಗಳಿಗೆ ಸಾಕ್ಷಿಯಾಗಿ ಗೋಚರಿಸುತ್ತಿವೆ. ಇನ್ನು ರಸ್ತೆಗಳ ಬದಿಯಲ್ಲಿರುವ ಚರಂಡಿಗಳಲ್ಲಿದ್ದ ತ್ಯಾಜ್ಯ ಮಳೆ ನೀರಿಗೆ ಕೊಳೆಯಲಾರಂಭಿಸಿದ್ದು, ಕೊಳಚೆಯ ಕೂಪವಾಗಿ ಮಾರ್ಪಡುತ್ತಿವೆ. ಭಾರೀ ಮಳೆ ಬಂದರೆ ಮಾತ್ರ ಚರಂಡಿಯ ಕೊಳಚೆ ತೊಳೆದು ನೀರಿನ ಹರಿವು ಸರಾಗಗೊಳ್ಳಲಿದೆ.

ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೀಟಿಕಟ್ಟೆ ಜಂಕ್ಷನ್‍ನಿಂದ ಹನಸೆ-ಈಚಲಬೀಡು-ಶನಿವಾರಸಂತೆ ರಸ್ತೆಯಲ್ಲೂ ಗುಂಡಿಗಳದ್ದೇ ಕಾರುಬಾರು. ಬಸವನಕೊಪ್ಪ ಸೇತುವೆಯ ಮುಂಭಾಗದಿಂದ ಸುಮಾರು 200 ಮೀಟರ್ ದೂರದಲ್ಲಿ ರಸ್ತೆಯನ್ನು ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿನ ರಸ್ತೆ ಕೊಡಗು ಮತ್ತು ಹಾಸನ ಜಿಲ್ಲೆಗೆ ಒಳಪಟ್ಟಿದ್ದು, ಹಾಸನ ಜಿಲ್ಲೆಗೆ ಒಳಪಟ್ಟ ರಸ್ತೆ ಡಾಂಬರೀಕರಣಗೊಂಡು ಸಂಚಾರಕ್ಕೆ ಯೋಗ್ಯವಾಗಿದ್ದರೆ, ಕೊಡಗು ಜಿಲ್ಲೆಗೆ ಒಳಪಟ್ಟ ರಸ್ತೆ ಗುಂಡಿಗಳ ನಡುವೆ ಸಂಚಾರಕ್ಕೆ ಅಯೋಗ್ಯವಾಗಿದೆ. ಓಬೀರಾಯನ ಕಾಲದಲ್ಲಿ ಹಾಕಿದ್ದ ಡಾಂಬರು ಇದೀಗ ಕಣ್ಮರೆಯಾಗಿದ್ದು, ಗುಂಡಿಗಳು ದರ್ಶನ ನೀಡುತ್ತಿವೆ.

ದ್ವಿಚಕ್ರ ವಾಹನಗಳ ಸವಾರರು ಈ ಗುಂಡಿಯೊಳಗೆ ಬೀಳುವದು ಸಾಮಾನ್ಯ ಎಂಬಂತಾಗಿದೆ. ಎರಡೂ ಜಿಲ್ಲೆಗಳ ನಡುವೆ ಉಳಿಕೆಯಾಗಿರುವ 200 ಮೀಟರ್ ರಸ್ತೆಯನ್ನು ಮರು ಡಾಂಬರೀಕರಣ ಮಾಡಿದ್ದರೆ ಸಾರ್ವಜನಿಕರಿಗೆ ಹೆಚ್ಚು ಉಪಯೋಗವಾಗುತಿತ್ತು.

ಹಾಸನ ಜಿಲ್ಲೆಗೆ ಒಳಪಟ್ಟ ರಸ್ತೆ ಸುಸ್ಥಿತಿಯಲ್ಲಿದ್ದರೆ, ಕೊಡಗಿಗೆ ಒಳಪಟ್ಟ ರಸ್ತೆ ದುಸ್ಥಿತಿಯಲ್ಲಿದೆ. ಈ ರಸ್ತೆಯನ್ನು ಜಿಲ್ಲೆಯ ಮಂದಿಯೇ ಹೆಚ್ಚು ಉಪಯೋಗಿಸುತ್ತಿದ್ದಾರೆ. ಜಿಲ್ಲಾ ಪಂಚಾಯಿತಿಗೆ ಒಳಪಟ್ಟ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿ ಪುಣ್ಯಕಟ್ಟಿಕೊಳ್ಳಿ ಎಂದು ಈ ಭಾಗದ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮಿಳರ ಕಾಲೋನಿ ರಸ್ತೆ ಈಗಾಗಲೇ ಸಂಚಾರಕ್ಕೆ ಸಮಸ್ಯೆ ತಂದೊಡ್ಡಿದೆ. ಅತೀ ಹೆಚ್ಚು ಕೂಲಿ ಕಾರ್ಮಿಕರು ವಾಸಿಸುತ್ತಿರುವ ಈ ಕಾಲೋನಿಗೆ ಇಲ್ಲಿಯವರೆಗೆ ಡಾಂಬರು ರಸ್ತೆಯಾಗಿಲ್ಲ.

ಇದರೊಂದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳಿಮಳ್ತೆ ರಸ್ತೆಯೂ ಗುಂಡಿಮಯವಾಗಿದ್ದು, ಗುಂಡಿಗಳ ಮಧ್ಯೆ ರಸ್ತೆಯನ್ನು ಹುಡುಕುವದೆ ಸಾಹಸ. ವಿದ್ಯಾರ್ಥಿಗಳು ಗುಂಡಿಬಿದ್ದ ರಸ್ತೆಯಲ್ಲಿ ತಿರುಗಾಡಬೇಕು.

ಖಾಸಗಿ ಶಾಲಾ ವಾಹನಗಳು ಈ ಮಾರ್ಗದಲ್ಲಿ ಸಂಚರಿಸಲು ಸಾಧ್ಯವಿಲ್ಲ. ದೊಡ್ಡಮಳ್ತೆ ಗ್ರಾಮದ ನಿವಾಸಿಗಳ ಕಾಫಿ ತೋಟಗಳಿಗೆ ತೆರಳಲು ಈ ರಸ್ತೆಯನ್ನು ಉಪಯೋಗಿಸಲಾಗುತ್ತಿವೆ. ಮಳೆಗಾಲದಲ್ಲಿ ವಾಹನಗಳು ಸಂಚರಿಸುವದರಿಂದ ರಸ್ತೆ ಇನ್ನಷ್ಟು ಹಾಳಾಗಿದೆ.

1988ರಲ್ಲಿ ಎ.ಎಂ. ಬೆಳ್ಳಿಯಪ್ಪ ಸಚಿವರಾಗಿದ್ದ ಸಂದರ್ಭ ತಮಿಳರ ಕಾಲನಿವರೆಗೆ ಬೋಡ್ರಸ್ ರಸ್ತೆ ಮಾಡಲಾಗಿದ್ದು, ನಂತರದ ವರ್ಷಗಳಲ್ಲಿ ರಸ್ತೆ ಡಾಮರೀಕರಣ ಆಗಲೇ ಇಲ್ಲ. ಕಳೆದ ವರ್ಷ 200 ಮೀಟರ್ ಕಾಂಕ್ರಿಟ್ ರಸ್ತೆ ಮಾಡಲಾಗಿದೆ. ಆದರೆ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದ ರಸ್ತೆ ಮೇಲೆ ನೀರು ನಿಲ್ಲುವಂತಾಗಿದೆ.

ಸುಳಿಮಳ್ತೆ ಗ್ರಾಮದ ರಸ್ತೆಯೂ ಗುಂಡಿಮಯವಾಗಿದ್ದು, ಗ್ರಾಮಸ್ಥರ ರಸ್ತೆ ಅಭಿವೃದ್ಧಿಯ ಕೂಗು ಅರಣ್ಯರೋಧನ ವಾಗಿದೆ. ಕಳೆದ 20 ವರ್ಷಗಳಿಂದಲೂ ರಸ್ತೆ ಡಾಮರೀಕರಣಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋವೇರ ಮನೆ ಕಡೆಯಿಂದ ಸೇನೇರ ಮನೆ ಸಂಪರ್ಕ ರಸ್ತೆಯ ಸ್ಥಿತಿಯಂತೂ ಹೇಳತ್ತೀರದ್ದಾಗಿದೆ.

ಕೆಲ ದಶಕಗಳ ಹಿಂದೆ ಡಾಂಬರು ಕಂಡಿದ್ದ ಈ ರಸ್ತೆ ನಂತರದ ನಿರ್ಲಕ್ಷ್ಯದಿಂದಾಗಿ ಇದೀಗ ಸಂಚಾರಕ್ಕೆ ಅಯೋಗ್ಯವಾಗಿದೆ. ಸುಮಾರು 2 ಕಿ.ಮೀ. ರಸ್ತೆ ಇನ್ನಿಲ್ಲದಂತೆ ಹಾಳಾಗಿದ್ದು, ದುರಸ್ತಿಪಡಿಸುವಂತೆ ಸ್ಥಳೀಯರಾದ ಕೋವೇರ ತಿಮ್ಮಯ್ಯ ಒತ್ತಾಯಿಸಿದ್ದಾರೆ.

ಇನ್ನು ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾನಗಲ್ಲುಶೆಟ್ಟಳ್ಳಿ, ಹಾನಗಲ್ಲು ಬಾಣೆ, ಆದಿಗಳಲೆ ರಸ್ತೆ, ಚೌಡ್ಲು ಗ್ರಾ.ಪಂ. ವ್ಯಾಪ್ತಿಯ ಗಾಂಧಿನಗರ, ಆಲೇಕಟ್ಟೆ, ಚೌಡ್ಲು ಗ್ರಾಮ ಸಂಪರ್ಕ ರಸ್ತೆ, ಬೇಳೂರು ಗ್ರಾ.ಪಂ. ವ್ಯಾಪ್ತಿಯ ಕೆಂಚಮ್ಮನಬಾಣೆ ರಸ್ತೆ, ತೋಳೂರು-ಶೆಟ್ಟಳ್ಳಿಯ ಸುಗ್ಗಿಕಟ್ಟೆ, ದೊಡ್ಡ ತೋಳೂರು ರಸ್ತೆ, ಚಿಕ್ಕತೋಳೂರು-ಕೌಕೋಡಿ ರಸ್ತೆ, ಬೆಟ್ಟದಳ್ಳಿ ಗ್ರಾ.ಪಂ. ವ್ಯಾಪ್ತಿಯ ಹಂಚಿನಳ್ಳಿ ರಸ್ತೆ, ಬೀದಳ್ಳಿ, ಕೊತ್ನಳ್ಳಿ ರಸ್ತೆ ಸೇರಿದಂತೆ ಹಲವಷ್ಟು ಗ್ರಾಮೀಣ ಪ್ರದೇಶದ ರಸ್ತೆಗಳು ಗುಂಡಿಮಯವಾಗಿವೆ.

ಇದೀಗ ಸುರಿಯುತ್ತಿರುವ ಸಾಧಾರಣ ಮಳೆಗೆ ಈ ಪರಿಯಲ್ಲಿ ರಸ್ತೆ ದುಸ್ಥಿತಿಗೆ ತಲಪಿದ್ದು, ಇನ್ನೆರಡು ತಿಂಗಳಲ್ಲಿ ಭಾರೀ ಮಳೆ ಸುರಿದರೆ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ. ಸದ್ಯಕ್ಕೆ ರಸ್ತೆಯ ಗುಂಡಿಗಳನ್ನು ಮುಚ್ಚಲು ಜಿ.ಪಂ. ಹಾಗೂ ಲೋಕೋಪಯೋಗಿ ಇಲಾಖೆ ಮುಂದಾಗಬೇಕಿದೆ.

-ವಿಜಯ್ ಹಾನಗಲ್