ಸಿದ್ದಾಪುರ, ಜು. 7: ಮಾಲ್ದಾರೆಯಲ್ಲಿ ಸಾಕು ನಾಯಿಯ ಮೇಲೆ ಕಿರುಬವೊಂದು ಧಾಳಿ ನಡೆಸಿ, ಗಾಯಗೊಳಿಸಿರುವ ಘಟನೆ ನಡೆದಿದೆ.

ಮಾಲ್ದಾರೆಯ ಶ್ರೀನಿವಾಸ್ ಎಸ್ಟೇಟ್‍ನ ಲೈನ್ ಮನೆಯಲ್ಲಿ ವಾಸವಾಗಿರುವ ಕಾರ್ಮಿಕ ಮಹಿಳೆ ಸುಶೀಲ ಎಂಬವರ ಸಾಕು ನಾಯಿಯ ಮೇಲೆ ಶನಿವಾರ ರಾತ್ರಿ ಕಿರುಬ ಧಾಳಿ ನಡೆಸಿದೆ ಎನ್ನಲಾಗಿದೆ.

ಈ ಸಂದರ್ಭ ನಾಯಿ ಕಿರುಚಿಕೊಂಡಾಗ ಮಹಿಳೆ ಹೊರಬರುವಷ್ಟರಲ್ಲಿ ಕಿರುಬ ಪರಾರಿಯಾಗಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಗುಡ್ಲೂರಿನ ಕೆಲವು ನಿವಾಸಿಗಳ ಮನೆಯಲ್ಲಿನ ಸಾಕು ನಾಯಿಗಳ ಮೇಲೆ ಕಿರುಬ ಧಾಳಿ ನಡೆಸಿತ್ತು. ಮಾಲ್ದಾರೆ ಭಾಗದಲ್ಲಿ ವನ್ಯ ಪ್ರಾಣಿಗಳ ಹಾವಳಿಯಿಂದಾಗಿ ಗ್ರಾಮಸ್ಥರು ಭಯಬೀತರಾಗಿದ್ದಾರೆ.