ವೀರಾಜಪೇಟೆ, ಜು. 7: ಕೊಡವ ಭಾಷೆಯ “ನಾಡ ಮಣ್ಣೇ ನಾಡ ಕೂಳ್” ಹಾಗೂ “ಮಂದಾರ ಪೂ” ಚಿತ್ರದ ನಾಯಕನಾಗಿ ನಟಿಸಿದ್ದ ಕೊಡಗಿನ ರಂಗ ಭೂಮಿಯ ಹಿರಿಯ ನಟ ಮಾಚಿಮಂಡ ಜಫ್ರೀ ಚಂಗಪ್ಪ (80) ಅನಾರೋಗ್ಯದಿಂದ ಇಂದು ಬೆಳಿಗ್ಗೆ ಬೇಟೋಳಿ ಗ್ರಾಮದ ಅವರ ಮನೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಮಗನನ್ನು ಅಗಲಿದ್ದಾರೆ.

ನಾಲ್ಕೂವರೆ ದಶಕಗಳ ಹಿಂದೆಯೇ ಕೊಡಗಿನ ರಂಗ ಭೂಮಿಗೆ ಕೊಡವ ಭಾಷೆಯ ಚಿತ್ರವನ್ನು ಪರಿಚಯಿಸಿದ್ದಲ್ಲದೆ ಸ್ವತ: ಚಿತ್ರದಲ್ಲಿ ನಟನಾಗಿ ಪಾತ್ರ ಮಾಡಿದ್ದು, ಕನ್ನಡದ ಮೂರು ಚಿತ್ರಗಳಲ್ಲಿಯೂ ಜಫ್ರೀ ಚಂಗಪ್ಪ ನಟಿಸಿದ್ದರು. 1970ರಲ್ಲಿಯೇ ವೀರಾಜಪೇಟೆಯಲ್ಲಿ “ತ್ರಿವೇಣಿ” ಎಂಬ ಕನ್ನಡ ನಾಟಕ ಸಂಸ್ಥೆಯನ್ನು ಹುಟ್ಟು ಹಾಕಿ ಕೊಡಗಿನ ಎಷ್ಟೋ ಪ್ರತಿಭಾವಂತ ಕಲಾವಿದರನ್ನು ರಂಗಭೂಮಿಗೆ ಪರಿಚಯಿಸಿದ್ದರು.

“ನಾಡ ಮಣ್ಣೇ ನಾಡ ಕೂಳ್” ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದಲ್ಲದೆ “ಮಂದಾರ ಪೂ” ಚಿತ್ರವೂ ರಾಜ್ಯ ಪ್ರಶಸ್ತಿಯನ್ನು ಪಡೆದಿತ್ತು. ಕಳೆದ 2016ರಲ್ಲಿ ವಿಶ್ವ ರಂಗ ಭೂಮಿ ದಿನಾಚರಣೆಯ ಅಂಗವಾಗಿ ಮಡಿಕೇರಿಯಲ್ಲಿ ಕೊಡಗು ರಂಗ ಭೂಮಿ ಪ್ರತಿóಷ್ಠಾಪನಾ ಸಂಸ್ಥೆಯಿಂದ ಜಫ್ರೀ ಚಂಗಪ್ಪ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಗಿತ್ತು. ರಂಗಭೂಮಿಗೆ ಬರುವ ಮೊದಲು ಪ್ರಿಂಟಿಂಗ್ ಪ್ರೆಸ್‍ನ ಉದ್ಯಮಿಯಾಗಿ, ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಜಫ್ರೀ ಚಂಗಪ್ಪ ಅವರ ಅಂತ್ಯಕ್ರಿಯೆ ತಾ. 8ರಂದು (ಇಂದು) ಬೆಳಿಗ್ಗೆ 11.30 ಗಂಟೆಗೆ ವೀರಾಜಪೇಟೆ ಕೊಡವ ಸಮಾಜದ ರುದ್ರಭೂಮಿಯಲ್ಲಿ ನಡೆಯಲಿದೆ.

ಸಂತಾಪ: ಜಫ್ರೀ ಚಂಗಪ್ಪ ಅವರ ನಿಧನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯ ಅಡ್ಡಂಡ ಕಾರ್ಯಪ್ಪ ಹಾಗೂ ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಸಂತಾಪ ಸೂಚಿಸಿದ್ದಾರೆ.