ನಾಪೋಕ್ಲು, ಜು. 6: ಸಮೀಪದ ಎಮ್ಮೆಮಾಡು ಗ್ರಾಮಕ್ಕೆ ತೆರಳುವ ರಸ್ತೆ ಹಲವೆಡೆ ಸಂಪೂರ್ಣ ದುಸ್ಥಿತಿಯಿಂದ ಕೂಡಿದ್ದು ಅಲ್ಲಲ್ಲಿ ರಸ್ತೆ ಹೊಂಡಗಳಾಗಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಮೋಟಾರ್ ಬೈಕ್, ಆಟೋರಿಕ್ಷಾ ಸವಾರರು ಹಿಡಿಶಾಪ ಹಾಕುತ್ತಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ರಸ್ತೆ ಕೆಸರುಮಯವಾಗಿರುವದು ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ.
ಎಮ್ಮೆಮಾಡು ಗ್ರಾಮ ಅಭಿವೃದ್ಧಿ ಹೊಂದುತ್ತಿದೆ. ಜನಸಂಖ್ಯೆಯೂ ಹೆಚ್ಚಿದೆ. ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಖಾಸಗಿ ಶಾಲೆ, ಪ್ರಮುಖವಾಗಿ ಪ್ರಸಿದ್ಧ ದರ್ಗಾ ಇದ್ದು ವಾಹನಗಳ ಓಡಾಟ ಹೆಚ್ಚಿದೆ. ಮಾತ್ರವಲ್ಲ. ನಾಪೋಕ್ಲು ಪಟ್ಟಣದಿಂದ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಕರೆತರಲು ನಿತ್ಯ ಹತ್ತಾರು ವಾಹನಗಳು ಸಂಚರಿಸುತ್ತಿವೆ. ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳೂ ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಎಮ್ಮೆಮಾಡು ಮುಖಾಂತರ ಅಂತರರಾಜ್ಯ ಬಸ್ಸುಗಳೂ ಸಂಚರಿಸುತ್ತಿವೆ. ಆದರೆ ಅವು ಸಾಗುವ ರಸ್ತೆ ಮಾತ್ರ ದುಸ್ಥಿತಿಯಲ್ಲಿದೆ. ಇತ್ತ ಪಡಿಯಾಣಿ ಮೂಲಕ ಎಮ್ಮೆಮಾಡು ಗ್ರಾಮಕ್ಕೆ ತೆರಳುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ ಮುಖ್ಯರಸ್ತೆಗೆ ಮಾತ್ರ ಕಾಯಕಲ್ಪ ಸಿಕ್ಕಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಎಮ್ಮೆಮಾಡು ಗ್ರಾಮವು ಹಿಂದೆ ಬಲ್ಲಮಾವಟಿ ಗ್ರಾಮ ಪಂಚಾಯಿತಿಗೆ ಒಳಪಟ್ಟಿತ್ತು. ಬಳಿಕ ಎಮ್ಮೆಮಾಡು ಪಂಚಾಯಿತಿಯನ್ನು ಪ್ರತ್ಯೇಕಿಸಲಾಯಿತು. ಗ್ರಾಮ ಸಡಕ್ ಯೋಜನೆಯಲ್ಲಿ ಪಡಿಯಾಣಿ ಮುಖಾಂತರ ಎಮ್ಮೆಮಾಡು ಗ್ರಾಮದವರೆಗೆ ರಸ್ತೆಯನ್ನು ವಿಸ್ತರಿಸಿ ಅಭಿವೃದ್ದಿಪಡಿಸಲಾಗಿದೆ. ಆದರೆ ದರ್ಗಾಕ್ಕೆ ತೆರಳುವ ಪ್ರಮುಖ ರಸ್ತೆಗೆ ಕಾಯಕಲ್ಪದ ಭಾಗ್ಯ ದೊರೆತಿಲ್ಲ.
ಮುಸ್ಲಿಮರ ಸರ್ವಶ್ರೇಷ್ಠ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ವಂಶಜರಾದ ಸಯ್ಯದ್ ಹಸನ್ ಸಖಾಫಿ ಎಂಬ ಸಂತರ ದರ್ಗಾ ಕೂಡ ಇಲ್ಲಿದ್ದು, ಸೂಫಿ ಶಹೀದರ ದರ್ಗಾಕ್ಕೆ ತೆರಳುವ ಹಾದಿಯಲ್ಲಿ ಬಲಬದಿಯಲ್ಲಿ ಇದು ಗೋಚರಿಸುತ್ತದೆ. ಈ ಎರಡೂ ದರ್ಗಾಗಳನ್ನು ಪುನರ್ನಿರ್ಮಾಣ ಮಾಡಲಾಗಿದ್ದು ಸೂಫಿ ಸಂತರ ಸನ್ನಿಧಿಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಆದರೆ ದರ್ಗಾಕ್ಕೆ ಸಾಗುವ ರಸ್ತೆಗೆ ಮಾತ್ರ ಅಭಿವೃದ್ದಿ ಭಾಗ್ಯ ದೊರೆತಿಲ್ಲ.